ಲಕ್ಷ್ಮೇಶ್ವರ: ಕೇಂದ್ರ ಸರಕಾರ ಈಗಾಗಲೇ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದಿದ್ದು, ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಜಾನುವಾರು ಕಾಯ್ದೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಏ.21 ರಂದು ಬೆಂಗಳೂರಿನಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಈಗಾಗಲೇ ಕೇಂದ್ರ ಸರಕಾರ ವಾಪಸ್ ಪಡೆದಿದ್ದರೂ ರಾಜ್ಯ ಸರಕಾರ ಇವುಗಳನ್ನು ಜಾರಿಗೊಳಿಸುವ ತರಾತುರಿಯಲ್ಲಿದೆ ಎಂದು ಆರೋಪಿಸಿದ ಅವರು, ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸುಮಾರು 1 ಲಕ್ಷದಷ್ಟು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಚುನಾವಣೆ ವಿಚಾರವಾಗಿ ಏ.21ಕ್ಕೆ ಈ ಕುರಿತು ಸ್ಪಷ್ಟ ನಿಲುವು ಕೈಗೊಳ್ಳಲಿದೆ. ಚಳವಳಿಗಾರರನ್ನು ಒಗ್ಗೂಡಿಸಿ, ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡುವ ಪ್ರಯತ್ನಕ್ಕೆ ಈ ಸಮಾವೇಶ ನಾಂದಿ ಹಾಡಲಿದೆ ಎಂದು ಹೇಳಿದರು.
ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ: ದೇಶದಲ್ಲಿ ದಿನೇ ದಿನೇ ಇಂಧನ ಬೆಲೆಗಳ ಹೆಚ್ಚಳ, ಇದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರಕಾರ, ಪರೋಕ್ಷವಾಗಿ ಹಿಜಾಬ್, ಹಲಾಲ್, ಆಜಾನ್ ನಂತಹ ಭಾವನಾತ್ಮಕ ವಿಚಾರಗಳಿಗೆ ಬೆಂಬಲ ನೀಡುತ್ತಾ, ತನ್ನ ವೈಫಲ್ಯ ಮರೆಮಾಚಲು ಹೊರಟಿದೆ. ರೈತರು ಮತ್ತು ಹಸಿದವರ ನಡುವಿನ ಸಂಬಂಧ ಗೊತ್ತಿಲ್ಲದವರು ಸೃಷ್ಟಿಸುತ್ತಿರುವ ಗೊಂದಲಗಳಿಗೆ ಮಾನ್ಯತೆ ನೀಡಿ, ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಬಸವರಾಜ ಬಾಳೇಶ್ವರಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೆಗೌಡ, ಉಪಾಧ್ಯಕ್ಷ ಎನ್.ನಾಗರಾಜ, ಬಸವರಾಜ ಕೋಡಿಹಳ್ಳಿ, ಕುಮಾರ ಲಮಾಣಿ, ರಮೇಶ ದೊಡ್ಡೂರ, ಮಾಬುಸಾಬ ಬನ್ನಿಕೊಪ್ಪ, ಶಿವಾನಂದ ಲಿಂಗಶೆಟ್ಟಿ, ಬಸಣ್ಣ ಕರೆಯತ್ತಿನ, ಖಾನಸಾಬ ಸೂರಣಗಿ, ಉಮೇಶ ಡೊಳ್ಳಿನ, ಸಿದ್ದಲಿಂಗೇಶ ರಗಟಿ, ತಮ್ಮಣ್ಣ ಗಾಯಕವಾಡ, ಕೋಟೇಪ್ಪ ಹಡಗಲಿ, ಶಂಕ್ರಪ್ಪ ಕುಂಬಾರ, ಗನಿಸಾಬ ಬರದೂರ, ಮಹದೇವಪ್ಪ ಸುಣಗಾರ, ಮಹಾಂತೇಶ ಗುಡಗುಂಟಿ, ಫಕ್ಕೀರೇಶ ಯಲಿಗಾರ, ಬಸಣ್ಣ ಮುಂಡವಾಡ, ತಿಪ್ಪಣ್ಣ ಮುಂಡವಾಡ, ಪ್ರಕಾಶ ಮೇಟಿ ಮುಂತಾದವರು ಹಾಜರಿದ್ದರು.