ಬೀಜಿಂಗ್: ಉತ್ತರ ಚೀನಾದ ಹೆಬೈ ಪ್ರಾಂತ್ಯದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಒಬ್ಬರು ಮೃತಪಟ್ಟಿದ್ದು ಜೊತೆಗೆ 22 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸ್ಪೋಟದ ತೀವ್ರತೆಗೆ ಹತ್ತಿರದ ಕಟ್ಟಡಗಳು ಧರೆಗುರುಳಿವೆ, ಅಲ್ಲದೆ ರಸ್ತೆ ಬದಿಯಲ್ಲಿದ್ದ ವಾಹನಗಳು ಛಿದ್ರ ಛಿದ್ರಗೊಂಡಿರುವುದು ಕಾಣಬಹುದಾಗಿದೆ.
ರಾಜಧಾನಿ ಬೀಜಿಂಗ್‌ನ ಪೂರ್ವಕ್ಕೆ 50 ಕಿಲೋಮೀಟರ್ ದೂರದಲ್ಲಿರುವ ಸಾನ್ಹೆ ನಗರದ ವಸತಿ ಪ್ರದೇಶದಲ್ಲಿ ಬೆಳಿಗಿನ ಜಾವಾ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ, ಮಾಹಿತಿ ಪ್ರಕಾರ ಇಲ್ಲಿನ ರೆಸ್ಟೋರೆಂಟ್ ನಲ್ಲಿ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ.