Advertisement

ಟ್ರಾಫಿಕ್‌ ದಂಡ ಪಾವತಿಗೆ ಭರ್ಜರಿ ರಿಯಾಯಿತಿ

10:12 PM Feb 02, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್‌ ಮೂಲಕ ವಿಧಿಸಿದ ದಂಡ ಪಾವತಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯಿತಿ ಕೊಟ್ಟಿದ್ದು, ಫೆ.11ರೊಳಗೆ ಇತ್ಯರ್ಥಪಡಿಸಿಕೊಳ್ಳುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ಶೇ.50ರಷ್ಟು ರಿಯಾಯಿತಿ ಸಿಗಲಿದೆ.

Advertisement

ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿದೆ.

ರಾಜ್ಯಾದ್ಯಾಂತ ಫೆಬ್ರವರಿ 11ರೊಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ “ಒಂದು ಬಾರಿಯ ಕ್ರಮವಾಗಿ’ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಫೆ.2ರಂದು ಆದೇಶ ಹೊರಡಿಸಿದೆ.

ಪೊಲೀಸರ ಕೋರಿಕೆಯಂತೆ, ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ 1,003 ಕೋಟಿ ರೂಗಿಂತ ಹೆಚ್ಚಿನ ದಂಡವನ್ನು ವಸೂಲಿ ಮಾಡಲು ಎಸ್‌ಎಂಎಸ್‌ ಮೂಲಕ ಲೋಕ ಅದಾಲತ್‌ ನೋಟಿಸ್‌ಗಳನ್ನು ನೀಡಲಾಗಿತ್ತು. 2022ರ ಜೂನ್‌ ತಿಂಗಳಲ್ಲಿ ನಡೆದಿದ್ದ ಲೋಕ್‌ ಅದಾಲತ್‌ನಲ್ಲಿ  2.23 ಲಕ್ಷ ಟ್ರಾಫಿಕ್‌ ಚಲನ್‌ ಪ್ರಕರಣಗಳನ್ನು ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಿ 22.36 ಕೋಟಿ ರೂ ದಂಡ ವಸೂಲಿ ಮಾಡಲಾಗಿತ್ತು. ಅದೇ ರೀತಿ 2022ರ ನವೆಂಬರ್‌ ತಿಂಗಳಲ್ಲಿ ನಡೆದಿದ್ದ ಲೋಕ್‌ ಅದಾಲತ್‌ನಲ್ಲಿ ಟ್ರಾಫಿಕ್‌ ಉಲ್ಲಂಘನೆಯ 4.18 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ 23.89 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿತ್ತು.

ರಾಜ್ಯದ ಎಲ್ಲಾ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಾವಿರ ಕೋಟಿಗೂ ಹೆಚ್ಚು ದಂಡ ಬರಬೇಕಿದೆ, ಇದರಲ್ಲಿ ಶೇ 80 ರಷ್ಟು ಪ್ರಕರಣಗಳು ಬೆಂಗಳೂರು ಕಮಿಷನರೇಟ್‌ನಲ್ಲಿಯೇ ಬಾಕಿ ಇವೆ.  ರಾಜ್ಯಾದ್ಯಂತ ಪೊಲೀಸ್‌ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವ ಸಂಬಂಧ ಸಾರಿಗೆ ಆಯುಕ್ತರು ಜ.30ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

Advertisement

ಟ್ರಾಫಿಕ್‌ ಇ-ಚಲನ್‌ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥಪಡಿಸುವ ಕುರಿತು ಕಾನೂನು ಸೇವೆಗಳ ಪ್ರಾಧಿಕಾರದ 2022ರ ಮೇ 25ರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆಗೆ ಪ್ರಾಧಿಕಾರ ಪತ್ರ ಬರೆದಿತ್ತು. ಈ ವಿಚಾರವಾಗಿ ನ್ಯಾ. ವೀರಪ್ಪ ಅವರು ಹಲವು ಸಭೆಗಳನ್ನು ನಡೆಸಿದ್ದರು. ಟ್ರಾಫಿಕ್‌ ಇ-ಚಲನ್‌ ಪ್ರಕರಣಗಳ ದಂಡ ವಸೂಲಿ ಮಾಡುವಾಗ ರಿಯಾಯಿತಿ ನೀಡಬೇಕು ಎಂದು ವಕೀಲರು, ಸಾರ್ವಜನಿಕರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಮನವಿಗಳು ಬಂದಿದ್ದವು. ಅದರಂತೆ, ಕಾನೂನು ಸೇವೆಗಳ ಪ್ರಾಧಿಕಾರದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಕಾನೂನು ಇಲಾಖೆಗಳ ಪ್ರಧಾನ ಕಾರ್ಯರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ರಿಯಾಯಿತಿ ಕೊಡಬೇಕು ಇಲ್ಲದಿದ್ದರೆ ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ನೂರಾರು ಕೋಟಿ ರೂ. ಮೊತ್ತದ ಬಾಕಿ ಪ್ರಕರಣಗಳು ಹಾಗೆಯೇ ಉಳಿದು ಬಿಡುತ್ತವೆ ಎಂದು ಕಾನೂನು ಸೇವಾ ಪ್ರಾಧಿಕಾರ ಮನದಟ್ಟು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next