ತಾಂಬಾ: ಭೂಮಿಯ ಫಲವತ್ತತೆಯ ಹೆಚ್ಚಿಸುವ ಕುರಿಯ ಹಿಕ್ಕಿಯ ಗೊಬ್ಬರಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ವಾಣಿಜ್ಯ ಬೆಳೆ ಬೆಳೆಯುವ ರೈತರು ರಾಸಾಯನಿಕ ಗೊಬ್ಬರ ಬಿಟ್ಟು ಕುರಿ ಹಿಕ್ಕಿ ಗೊಬ್ಬರ ಮೊರೆ ಹೋಗುತ್ತಿದ್ದಾರೆ. ಕುರಿ ಹಿಕ್ಕಿ ಗೊಬ್ಬರಕ್ಕೆ ಹೇಳಿದಷ್ಟು ಹಣ ಕೊಟ್ಟು ಖರೀದಿಸಲೂ ಮುಂದಾಗುತ್ತಿದ್ದಾರೆ. ನಂಬಿಕೆ ಕಳೆದುಕೊಂಡ ರಾಸಾಯನಿಕ ಗೊಬ್ಬರ ಆಧುನಿಕ ಯುಗದಲ್ಲಿ ಕೃಷಿ ಚಟುವಟಿಕೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ.
ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಹೆಚ್ಚು ಇಳುವರಿ ಬರುವುದಿಲ್ಲ ಎಂದು ನಂಬಿ ರಾಸಾಯನಿಕ ಗೊಬ್ಬರ ಬಳಕೆಗೆ ಮೊರೆ ಹೋದ ರೈತರು ದುಬಾರಿ ಬೆಲೆ ತೆತ್ತು ಭೂಮಿಗೆ ರಾಸಾಯನಿಕ ಗೊಬ್ಬರ ಸುರಿದರು ಆದರೆ ರಾಸಾಯನಿಕ ಗೊಬ್ಬರ ಬಳಕೆಯಿಂದ ನಿರೀಕ್ಷಿಸಿದಷ್ಟು ಇಳುವರಿ ಬರುವುದಿಲ್ಲ ಎಂಬ ಸತ್ಯ ಈಗ ರೈತರು ಮನಗಂಡಿದ್ದಾರೆ. ಹೀಗಾಗಿಯೇ ರೈತರು ಅದರಲ್ಲೂ ಮುಖ್ಯವಾಗಿ ದ್ರಾಕ್ಷಿ, ನಿಂಬೆ, ದಾಳಿಂಬೆ ಬೆಳೆಗಾರರು ಗಿಡದಲ್ಲಿ ಹೆಚ್ಚಿನ ಹೂ ಬಿಡಬೇಕಾದರೆ ರಾಸಾಯನಿಕ ಗೊಬ್ಬರಕ್ಕಿಂತಲೂ ಕುರಿ ಹಿಕ್ಕಿಯ ಗೊಬ್ಬರವೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಕುರಿಗಳು ಅಡವಿಯಲ್ಲಿ ನಾನಾ ತರಹದ ಜಾತಿಯ ಗಿಡಗಳ ಎಲೆ, ಚಿಗುರು ಕೊಂಬೆ ತಿಂದು ಹಿಕ್ಕಿ ಹಾಕಿರುತ್ತವೆ. ಇದರಲ್ಲಿ ಆಯುರ್ವೇದಿಕ್ ಗುಣದ ಜತೆಗೆ ಬೆಳೆಗಳಿಗೆಬೇಕಾದ ಎಲ್ಲಾ ಪೋಷಕಾಂಶಗಳು ಇರುತ್ತವೆ. ಇದರ ಗೊಬ್ಬರ ಬಳಕೆಯಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಬರುತ್ತದೆ. ಹೀಗಾಗಿಯೇ ಕುರಿಗಾಹಿಗಳ ಹಿಂದೆ ಬಿದ್ದ ರೈತರು ಕುರಿ ಹಿಕ್ಕಿ ಗೊಬ್ಬರ ಖರೀದಿಸಲು ಪೈಪೋಟಿ ನಡೆಸಿದ್ದಾರೆ. ಇದರಿಂದ ಗೊಬ್ಬರ ಬೆಲೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟುವಾಗುತ್ತಲಿದೆ.
ಮೊದಲು ಐನೂರು, ಸಾವಿರಕ್ಕೆ ಸಿಗುತ್ತಿದ್ದ ಟ್ರಾಕ್ಟರ್ ಟೇಲರ್ ಅಳತೆಯ ಗೊಬ್ಬರ ಈಗ ಆರು ಸಾವಿರಕ್ಕೆ ಏರಿದೆ. ಆದರೂ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮುಂದಿನ ವರ್ಷಕ್ಕೂ ಬೇಕಾಗುವ ಗೊಬ್ಬರವನ್ನು ಮುಂಚಿತವಾಗಿ ಮುಂಗಡ ಹಣ ನೀಡಲು ರೈತರು ಮುಂದೆ ಬರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕುರಿ ಹೋತ, ಆಡುಗಳಿಗೆ ಚಿನ್ನದ ಬೆಲೆ ಇದೆ. ಜತೆಗೆ ಅವುಗಳ ಹಿಕ್ಕಿಗೂ ಬೇಡಿಕೆ ಹೆಚ್ಚಾಗಿದೆ. ರೈತರು ಜಮಿನುಗಳಲ್ಲಿ ರಾತ್ರಿ ಹೊತ್ತು ಕುರಿ ಹಿಂಡುಗಳು ವಸತಿ ಇಟ್ಟುಕೊಳ್ಳಲು ಹಣ ನೀಡುವುದಲ್ಲದೆ ಜೋಳ, ಗೋಧಿ ಕೊಟ್ಟು ರಾತ್ರಿ ಹೊತ್ತು ತಾವೇ ಕುರಿ ಕಾವಲು ಕಾಯುತ್ತಾರೆ. ಹಿಕ್ಕಿ ಮತ್ತು ಮೂತ್ರದಿಂದ ಉತ್ತಮ ಬೆಳೆ ಪಡೆಯಬಹುದು ಎಂಬ ನಂಬಿಕೆ ರೈತರಲ್ಲಿದೆ.
ರಾಸಾಯನಿಕ ಗೊಬ್ಬರ ತಿಪ್ಪೆ ಗೊಬ್ಬರಕಿಂತಲೂ ಕುರಿ ಹಿಕ್ಕಿ ಗೊಬ್ಬರ ದ್ರಾಕ್ಷಿ ಬೆಳೆಗೆ ಉಪಯೋಗಿಸುವುದು ಉತ್ತಮ. ನಾನು ಪ್ರತಿವರ್ಷ ಇದನ್ನೆ ದ್ರಾಕ್ಷಿ ಬೆಳೆಗೆ ಹಾಕಿ ಎಕರೆಗೆ 3 ರಿಂದ 5 ಟನ್‌ವರೆಗೆ ಒಣದ್ರಾಕ್ಷಿ ಇಳುವರಿ ಪಡೆದಿದ್ದೇನೆ.
ಬೀರಪ್ಪ ವಗ್ಗಿ, ದ್ರಾಕ್ಷಿ ಬೆಳೆಗಾರ ತಾಂಬಾ
ಕುರಿಗಳನ್ನು ಸಾಕಿ ಬೆಳೆಸುವುದು ಕಷ್ಟದ ಕೆಲಸ. ಈಚೆಗೆ ಮಳೆ ಕಮ್ಮಿಯಾಗುತ್ತಿದೆ. ಹಳ್ಳ ಕೊಳ್ಳದ ಬೀಳು ಬಿದ್ದ ಜಾಗೆಗಳು ತೋಟಗಳಾಗಿ ಮಾರ್ಪಟ್ಟಿವೆ. ಕುರಿ ಮೇಯಿಸಲು ಸ್ಥಳವಿಲ್ಲದಂತಾಗಿದೆ. ಆದರೆ ಈಗ ಕುರಿ ಹಾಗೂ ಗೊಬ್ಬರ ಹಿಕ್ಕಿಗೂ ಉತ್ತಮ ಬೇಲೆ ಇರುವುದರಿಂದ ನಮ್ಮ ಕಷ್ಟಗಳು ದೂರಾಗಿವೆ.
ಕುಲಪ್ಪಾ ಪೂಜಾರಿ, ಕುರಿಗಾಹಿ ಅಥರ್ಗಾ.
*ಲಕ್ಷ್ಮಣ ಹಿರೇಕುರಬರ