Advertisement

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

10:12 AM Apr 30, 2024 | Team Udayavani |

ಬೆಂಗಳೂರು: ಸುಡು ಬಿಸಿಲಿನ ಧಗೆಯಿಂದ ಪಾರಾಗಲು ಕೆಲವರು ತಂಪು ಪಾನೀಯ ಮತ್ತು ಎಳನೀರಿನ ಮೊರೆ ಹೋದರೆ ಇತ್ತ ಮದ್ಯ ಪ್ರಿಯರು ತಮ್ಮ ದೇಹವನ್ನು ತಂಪಾಗಿಡಲು ಚಿಲ್ಡ್‌ ಬಿಯರ್‌ ನತ್ತ ಶಿಫ್ಟ್ ಆಗಿರುವುದರಿಂದ ಈಗ ಬಿಯರ್‌ಗೆ ಡಿಮ್ಯಾಂಡೋ, ಡಿಮ್ಯಾಂಡ್‌. ಹೀಗಾಗಿ ಬಿಯರ್‌ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

Advertisement

ರಾಜಧಾನಿಯಲ್ಲಿ ಸಾಮಾನ್ಯ ದಿನಗಳಲ್ಲಿ ಸಣ್ಣ, ಸಣ್ಣ ಮದ್ಯ ಮಳಿಗೆಗಳಲ್ಲಿ 10-15 ಬಾಕ್ಸ್‌ ಮಾರಾಟವಾಗುತ್ತಿದ್ದ ಬಿಯರ್‌ಗಳು ಈಗ ಪ್ರತಿ ದಿನ 20ಕ್ಕೂ ಹೆಚ್ಚಿನ ಬಾಕ್ಸ್‌ ಮಾರಾಟವಾಗುತ್ತಿದ್ದು ಮದ್ಯಪ್ರಿಯರಂತಲೂ ಈಗ ಕೂಲ್‌, ಕೂಲ್‌ ಅನ್ನುತ್ತಿದ್ದಾರೆ. ಕಳೆದ 3 ವರ್ಷಗಳಿಗೆ ಬಿಯರ್‌ ಮಾರಾಟ ಹೋಲಿಕೆ ನೋಡಿದಾಗ ಶೇ.40ರಿಂದ 45ರಷ್ಟು ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆ ಕಾವು ಜತೆಗೆ ಸುಡು ಬಿಸಿಲಿನ ಧಗೆ ಇದಕ್ಕೆ ಕಾರಣವಾಗಿದೆ.

ಅಬಕಾರಿ ಇಲಾಖೆ ಅಂಕಿ ಅಂಶದ ಪ್ರಕಾರ 2020-21ರಲ್ಲಿ 237.82 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗಿತ್ತು. ಆಗ ತಿಂಗಳಿಗೆ ಸರಾಸರಿ 19.82 ಲಕ್ಷ ಪೆಟ್ಟಿಗೆ ಬಿಯರ್‌ ಮಾರಾಟವಾಗುತ್ತಿತ್ತು. ಹಾಗೆಯೇ 2021-22ರಲ್ಲಿ 268.83 ಲಕ್ಷ ಬಾಕ್ಸ್‌ ಬಿಯರ್‌ ಖರೀದಿಯಾಗಿತ್ತು. ಆ ವೇಳೆ ತಿಂಗಳ ಸರಾಸರಿ ಮಾರಾಟ 22.40 ಲಕ್ಷ ಪೆಟ್ಟಿಗೆ ಬಿಯರ್‌ ಆಗಿತ್ತು. 2022-23ರಕ್ಕೆ ಹೋಲಿಕೆ ಮಾಡಿದಾಗ ಅದು 390.66 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟಕ್ಕೆ ಬಂದು ತಲುಪಿದೆ. ಅಂದರೆ ತಿಂಗಳಿಗೆ ಈಗ ಸರಾಸರಿ 32.56 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟವಾಗುತ್ತಿದೆ.

ಏಪ್ರಿಲ್‌ನಲ್ಲಿ ಬಿಯರ್‌ ಮಾರಾಟ: ಕಳೆದ ವರ್ಷ ಏ.1ರಿಂದ 18 ರವರೆಗೆ 142.97 ಲಕ್ಷ ಲೀಟರ್‌ (18.33 ಲಕ್ಷ ಪೆಟ್ಟಿಗೆ) ಬಿಯರ್‌ ಮಾರಾಟವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ 207.63 ಲಕ್ಷ ಲೀಟರ್‌ (26.62 ಲಕ್ಷ ಪೆಟ್ಟಿಗೆ ) ಬಿಯರ್‌ ಖರೀದಿಯಾಗಿದೆ. ಇದರೊಂದಿಗೆ 64.66 ಲಕ್ಷ ಲೀ (8.29 ಲಕ್ಷ ಪೆಟ್ಟಿಗೆಗಳು) ಮಾರಾಟ ಹೆಚ್ಚಳವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಏಪ್ರಿಲ್‌ ಮೊದಲ 11 ದಿನಗಳಲ್ಲಿ ವಿವಿಧ ಬ್ರ್ಯಾಂಡ್‌ ಗಳ 27 ಲಕ್ಷಕ್ಕೂ ಅಧಿಕ ಬಿಯರ್‌ ಬಾಟಲ್‌ಗ‌ಳ ಮಾರಾಟವಾಗಿದೆ. ಅಂದರೆ 17 ಲಕ್ಷ ಲೀಟರ್‌ ಬಿಯರ್‌ ಮಾರಾಟವಾದಂತಾಗಿದೆ. ಈ ವರ್ಷದ ಆರಂಭದ ತಿಂಗಳಲ್ಲಿ ಬಿಯರ್‌ ಮಾರಾಟ ಹೇಳಿಕೊಳ್ಳುವಷ್ಟಿರಲಿಲ್ಲ. ಆದರೆ ಬೇಸಿಗೆ ಧಗೆ ಹೆಚ್ಚಾಗುವುದರ ಜತೆಗೆ ಲೋಕಸಭಾ ಚುನಾವಣೆ ಕಾವು ಜೋರಾಗಿರುವುದರಿಂದ ಬಿಯರ್‌ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಮದ್ಯದಂಗಡಿ ಮಾಲೀಕರು ಹೇಳುತ್ತಾರೆ.

Advertisement

ಎಂಎಸ್‌ಐಎಲ್‌ ಮದ್ಯ ಮರಾಟ ಮಳಿಗೆ ಸಂಖ್ಯೆ ಹೆಚ್ಚಳ: ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟವಷ್ಟೇ ಹೆಚ್ಚಾಗಿಲ್ಲ. ಬದಲಾಗಿ ಎಂಎಸ್‌ ಐಎಲ್‌ ಮದ್ಯಮಾರಾಟ ಮಳಿಗೆಗಳ ಸಂಖ್ಯೆಯಲ್ಲಿ ಹೆಚ್ಚಿದೆ. 2020-21ರಲ್ಲಿ ರಾಜ್ಯವ್ಯಾಪಿ 901 ಎಂಎಸ್‌ ಎಲ್‌ ಮದ್ಯ ಮಾರಾಟ ಮಳಿಗೆ ಇದ್ದವು. 2021-22ರ ವೇಳೆಗೆ ಈ ಸಂಖ್ಯೆ 980ಕ್ಕೆ ಏರಿಕೆ ಆಯಿತು. 2022-23ರ ವೇಳೆಗೆ ರಾಜ್ಯವ್ಯಾಪಿ ಎಂಎಸ್‌ಐಎಲ್‌ ಮದ್ಯ ಮಾರಾಟ ಮಳಿಗೆ ಸಂಖ್ಯೆ 1,023ಕ್ಕೆ ಬಂದು ತಲುಪಿದೆ. ಈ ಹಿಂದೆ 2021-22ರಲ್ಲಿ ಬೆಂಗಳೂರು ಉತ್ತರ ವಿಭಾಗದಲ್ಲಿ ಶೇ.12.24 ರಷ್ಟು ಬಿಯರ್‌ ಮಾರಾಟವಾಗಿತ್ತು. 2022-23ರ ವೇಳೆಗೆ ಶೇಕಡವಾರು ಮಾರಾಟ 50.62ಕ್ಕೆ ತಲುಪಿದೆ. ಹಾಗೆಯೇ ಬೆಂಗಳೂರು ದಕ್ಷಿಣ ವಿಭಾಗದಲ್ಲಿ 2021-22ರಲ್ಲಿ 12.9 ರಷ್ಟು ಬಿಯರ್‌ ಖರೀದಿಯಾಗಿತ್ತು. ಇದು 2022-23ರ ವೇಳೆಗೆ 50.26ರಕ್ಕೆ ಏರಿಕೆ ಆಗಿದೆ. ಒಟ್ಟಾರೆ ಕಳೆದ ವರ್ಷ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಈಗ ಶೇ.49.80ರಷ್ಟು ಬಿಯರ್‌ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಬಿಸಿಲಿನ ಧಗೆ ಹಿನ್ನೆಲೆಯಲ್ಲಿ ಬ್ರಾಂದಿ, ವಿಸ್ಕಿ ಸೇವನೆ ಮಾಡುತ್ತಿರುವವರು ಕೂಡ ಈಗ ಕೋಲ್ಡ್‌ ಬಿಯರ್‌ ಕೇಳುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಬಿಯರ್‌ಗಳ ಮಾರಾಟ ದುಪ್ಪಟಾಗಿದೆ. ಹಾರ್ಟ್‌ ಡ್ರಿಂಕ್ಸ್‌ ಮಾರಾಟ ಕಡಿಮೆ ಇದ್ದು ಬಿಸಿಗಾಳಿಯ ವಾತಾವರಣ ಇದಕ್ಕೆ ಕಾರಣ ಎನ್ನಬಹುದು. -ಗುರುಸ್ವಾಮಿ ಎಸ್‌. ಅಧ್ಯಕ್ಷರು, ಫೆಡರೇಷನ್‌ ಆಫ್ ವೈನ್‌ ಮರ್ಚೆಂಟ್‌ ಅಸೋಸಿಯೇಷನ್‌

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next