ಮುಂಡಗೋಡ: ತಾಲೂಕಿನಲ್ಲಿ ಈ ಬಾರಿ ಮಾವಿನ ಗಿಡಗಳು ಹೂವು ಚೆನ್ನಾಗಿ ಬಿಟ್ಟು ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಮತ್ತು ಮಾವಿನ ಹಣ್ಣಿನ ವ್ಯಾಪಾರಸ್ಥರ ಮುಖದಲ್ಲಿ ನಿರಾಸೆ ಮೂಡಿಸಿದೆ.
ತಾಲೂಕಿನಲ್ಲಿ ಈ ಬಾರಿ ಮಾವಿನ ಗಿಡಗಳು ಹೂವು ಚೆನ್ನಾಗಿ ಬಿಟ್ಟು ಮಾವು ಇಳುವರಿ ಹೆಚ್ಚಾಗುವ ಲಕ್ಷಣಗಳು ಗೋಚರಸಿ ರೈತರಲ್ಲಿ ಆಶಾದಾಯಕ ಭಾವನೆ ಮೂಡಿಸಿತ್ತು. ಆದರೆ ಶೇ.25-30 ರಷ್ಟು ಇಳುವರಿ ಬಂದಿದ್ದು ರೈತರಲ್ಲಿ ನಿರಾಸೆ ಮೂಡಿಸಿದೆ.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 594 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದರು. ಅದರಲ್ಲಿಯೂ ತಾಲೂಕಿನ ಪಾಳಾ ಗ್ರಾಮದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೈತರು ಮಾವು ಬೆಳೆಯುತ್ತಾರೆ. ಪ್ರಸ್ತುತ ವರ್ಷದಲ್ಲಿ ಒಂದೂವರೆ ತಿಂಗಳು ತಡವಾಗಿ ಚೆನ್ನಾಗಿ ಹೂ ಬಿಟ್ಟಿತ್ತು. ಮಾವಿನ ಹೂವು ಚೆನ್ನಾಗಿ ಇದ್ದರು ಕಾಯಿ ಕಟ್ಟಲಿಲ್ಲ.
ಮಾವಿನ ತಳಿಗಳು: ತಾಲೂಕಿನಲ್ಲಿ ಶೇ.90 ರಷ್ಟು ರೈತರು ಆಪೂಸ್ ಬೆಳೆಯುತ್ತಾರೆ. ಪಾಳಾ ಮಣ್ಣಿನ ಗುಣ ಮತ್ತು ಹವಮಾನದ ಪೂರಕ ವಾತಾವರಣದಿಂದ ಇಲ್ಲಿನ ರೈತರು ಆಪೂಸ್, ರಸಪುರಿ, ತೋತಾಪುರಿ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇನ್ನುಳಿದಂತೆ ನೀಲಂ, ಸಿಂಧೂರಾ, ಬಿನಶಾ, ಮಲಗೋವಾ, ಮಾಂಕುರ, ಮಲ್ಲಿಕಾ, ಕೇಸರ ತಳಿಯ ಮಾವು ಬೆಳೆಯುತ್ತಾರೆ. ಕಳೆದ ಎರಡು ವರ್ಷದ ಹಿಂದೆ ಕೊರೊನಾ ಲಾಕ್‌ಡೌನ್‌ನಿಂದ ಆದ ನಷ್ಟದಲ್ಲಿದ್ದ ರೈತ ಈ ಬಾರಿ ಚೆನ್ನಾಗಿ ಹೂವು ಬಿಟ್ಟು ಉತ್ತಮ ಫಸಲು ಇದ್ದು ಯೋಗ್ಯ ಬೆಲೆಯ ನಿರೀಕ್ಷೆಯಲ್ಲಿದ್ದ. ನಿರೀಕ್ಷೆ ಮಟ್ಟಕ್ಕೆ ಮಾವು ಬಾರದೆ ಕಂಗಾಲ ಆಗುವಂತೆ ಮಾಡಿದೆ.
ಮಾವು ರಫ್ತು: ವಿಶೇಷವಾಗಿ ಪಾಳಾ ಭಾಗದಿಂದ ರಫ್ತಾಗುವ ಮಾವಿಗೆ ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಇದಲ್ಲದೆ ಹೊರದೇಶಗಳಾದ ಯುರೋಪ್ ಮತ್ತು ಗಲ್ಫ್ ದೇಶಗಳಿಗೂ ಇಲ್ಲಿನ ಮಾವು ರಫ್ತಾಗುತ್ತದೆ. ಪಾಳಾ ಗ್ರಾಮದ ಮಾವಿನ ಹಣ್ಣುಗಳಿಗೆ ಇಡೀ ಏಷ್ಯಾದಲ್ಲಿಯೇ ಹೆಚ್ಚಿನ ಬೇಡಿಕೆ ಇದೆ.
ನಮ್ಮ ಅಜ್ಜನ ಕಾಲದಿಂದಲೂ ಮಾವು ಮಾರಾಟ ಮಾಡುತ್ತಿದ್ದೇವೆ. ಕಳೆದ ಬಾರಿ ಉತ್ತಮ ಫಸಲು ಮತ್ತು ಯೋಗ್ಯ ಬೆಲೆ ಇತ್ತು. ನಂತರ ದಿನದಲ್ಲಿ ಕರೊನಾದಿಂದ ಲಾಕ್‌ಡೌನ್ ಆಗಿ ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿ ಇಳುವರಿ ಬಹಳ ಕಡಿಮೆ ಇದೆ. ಫಸ್ಟ್ ಕ್ವಾಲಿಟಿ ಆಪೂಸ್ ಕೆಜಿ 100 ರಿಂದ 150 ಕೇಳುತ್ತಿದ್ದಾರೆ. ದಿನ ಕಳೆದಂತೆ ಮಾವಿನ ಬೆಲೆ ಕಡಿಮೆಯಾಗುತ್ತದೆ.
–ಮೆಹಬೂಬಲಿ ಪಾಟೀಲ, ಮಾವಿನ ಹಣ್ಣಿನ ವ್ಯಾಪಾರಸ್ಥ
ಈ ಬಾರಿ ಮಾವಿನ ಗಿಡಗಳು ಒಂದೂವರೆ ತಿಂಗಳು ತಡವಾಗಿ ಚೆನ್ನಾಗಿ ಹೂವು ಬಿಟ್ಟು ಅನುಕೂಲಕರ ವಾತಾವರಣವಿತ್ತು. ಆದರೆ ಹೂ ಬಿಡುವ ಸಂದರ್ಭದಲ್ಲಿ ಎಲೆಗಳ ಚಿಗುರು ಜಾಸ್ತಿಯಾಗಿ ಸಸ್ಯದ ಬೆಳೆವಣಿಗೆ ಆಯ್ತು ಹೊರತು ಕಾಯಿ ಕಟ್ಟಲಿಲ್ಲ. ನಿರೀಕ್ಷೆ ಮಟ್ಟಕ್ಕೆ ಇಳುವರಿ ಬರಲಿಲ್ಲ. –
ಅಣ್ಣಪ್ಪ ನಾಯ್ಕ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ
–ಮುನೇಶ ತಳವಾರ