Advertisement

ದಶ ದಿಕ್ಕುಗಳಿಂದ ಬಂದ ಅಭಿಮಾನ

06:00 AM Aug 18, 2018 | Team Udayavani |

ನವ ದೆಹಲಿ: ಕೃಷ್ಣ ಮೆನನ್‌ ಮಾರ್ಗ್‌ನ “6 ಎ’ ನಿವಾಸದ ಮುಂದೆ ಶುಕ್ರವಾರ ಅಕ್ಷರಶಃ ಜನಜಾತ್ರೆ. ಇವರಲ್ಲಿನ ಆಕಾಶ್‌ ಕುಮಾರ್‌ ಎಂಬ ಯುವಕ ಉತ್ತರ ಪ್ರದೇಶದ ಬಾಘಪತ್‌ನಿಂದ ಸುಮಾರು 70 ಕಿ.ಮೀ.ವರೆಗೂ ತನ್ನ ಸ್ಕೂಟರ್‌ನಲ್ಲೇ ಬಂದು ಮಹಾ ಜನಸ್ತೋಮವನ್ನು ಸೇರಿಕೊಂಡಿದ್ದ. ಇನ್ನು, ಚೆನ್ನೈನ ಚಿನ್ನಯ್ಯ ನಾದೇಸನ್‌ ಹಾಗೂ ಗಣೇಶನ್‌ ಎಂಬ ಮಿತ್ರರು ಬೇಗನೇ ದೆಹಲಿ ತಲುಪುವ ಉದ್ದೇಶದಿಂದ ಹಣವನ್ನೂ ಲೆಕ್ಕಿಸದೇ ವಿಮಾನದಲ್ಲೇ ದಿಲ್ಲಿಗೆ ದೌಡಾಯಿಸಿದ್ದರು, ಮಧ್ಯ ಪ್ರದೇಶದಿಂದ ಉಮೇಶ್‌ ಶ್ರೀವಾಸ್ತವ, ಚಂದ್ರ ಶೇಖರ್‌ ಅವರು ಖಾಸಗಿ ವಾಹನದಲ್ಲೇ ಬಂದರೆ, ಯೋಗೇಶ್‌ ಕುಮಾರ್‌ ಎಂಬುವರು ಉತ್ತರ ಕಾಶಿಯಿಂದ ತಮ್ಮ ಸ್ನೇಹಿತರ ಪಡೆಯೊಂದಿಗೆ ಸಾಲು ಸಾಲು ಟ್ಯಾಕ್ಸಿಗಳನ್ನು ಮಾಡಿ ಕೊಂಡು ಬಂದಿದ್ದರು. 

Advertisement

ಹೀಗೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಎಲ್ಲಾ ರಾಜ್ಯಗಳ ಜನರು, ಹೆಂಗಸರು, ಮಕ್ಕಳು ತಂಡೋಪ ತಂಡವಾಗಿ ಬಂದವರೆಲ್ಲರೂ ಯಾವುದೋ ರಾಜಕೀಯ ರ್ಯಾಲಿಗಳಿಗಾಗಿ ಪಾರ್ಟಿಗಳ ಏಜೆಂಟ್‌ಗಳಿಂದ ಕರೆ ತಂದವರಾಗಿರಲಿಲ್ಲ. ಒಂದು ಪ್ಯಾಕೆಟ್‌ ಬಿರಿಯಾನಿ, ಒಂದಿಷ್ಟು ಹಣಕ್ಕಾಗಿ ಆಸೆ ಪಟ್ಟು ಬಂದು ನಿಂತವರಾಗಿರಲಿಲ್ಲ.  ಇವರೆಲ್ಲಾ ಆಗಮಿಸಿದ್ದು ಅಭಿಮಾನದಿಂದ, ಆತ್ಮೀಯತೆಯಿಂದ. ತಮ್ಮನ್ನಗಲಿದ ಮರೆಯಲಾಗದ ನಾಯಕ ವಾಜಪೇಯಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರಣದಿಂದ. ಇವರಿಗೆ ರಾಜ್ಯ, ದೂರ, ಭಾಷೆಗಳ ಹಂಗಿರಲಿಲ್ಲ. ವೈಚಾರಿಕ ಅಥವಾ ಮತಬೇಧಗಳಿರಲಿಲ್ಲ.  

ಎಲ್ಲೆಲ್ಲಿಂದಲೋ ಬಂದು ಹಸಿವು, ಬಾಯಾರಿಕೆಗಳನ್ನೂ ಲೆಕ್ಕಿಸದೇ ಕೈಯ್ಯಲ್ಲಿ ಹೂವು, ಹಾರಗಳನ್ನು ಹಿಡಿದು ಕೃಷ್ಣ ಮೆನನ್‌ ಮಾರ್ಗ್‌ನಲ್ಲಿನ ವಾಜಪೇಯಿಯವರ ನಿವಾಸದ ಮುಂದೆ ಹಾಗೂ ಅಂತಿಮ ಯಾತ್ರೆ ಸಾಗಿದ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಈ ಅಭಿಮಾನ ಸ್ತೋಮ ವಾಜಪೇಯಿ ಮೇಲೆ ಈ ದೇಶದ ಜನರು ಇಟ್ಟಿರುವ ಪ್ರೀತಿ ಹಾಗೂ ಗೌರವಗಳನ್ನು ಒತ್ತಿ ಹೇಳುತ್ತಿತ್ತು. ಜತೆಗೆ, ಭಾರತೀಯರಲ್ಲಿ ಅಟಲ್‌ ಅಜರಾಮರ ಎಂಬುದನ್ನು ಜಗತ್ತಿಗೆ ಸಾರಿ ಹೇಳುತ್ತಿತ್ತು.  ಮಾಜಿ ಪ್ರಧಾನಿಯ ಪಾರ್ಥಿವ ಶರೀರದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೆರೆದಿದ್ದ ಈ ಜನಸ್ತೋಮ, ಅಟಲ್‌ ಬಿಹಾರಿ ಅಮರ್‌ ರಹೇ, ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗುತ್ತಲೇ, ಅಗಲಿದ ನಾಯಕನಿಗೆ ಕಣ್ಣೀರ ವಿದಾಯ ಹೇಳುತ್ತಿತ್ತು.

ಮಾರ್ಗದಲ್ಲೆಲ್ಲಾ ಬ್ಯಾನರ್‌
ಅಟಲ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಬ್ಯಾನರ್‌, ಹೋಲ್ಡಿಂಗ್ಸ್‌ ಗಳನ್ನು ಹಾಕಿರುವ ದೃಶ್ಯ ಶುಕ್ರವಾರ ಕಂಡು ಬಂತು. ತಮ್ಮ ನೆಚ್ಚಿನ ನಾಯಕನ ಫೋಟೋಗಳಿರುವ ಪೋಸ್ಟರ್‌ಗಳು ರಸ್ತೆಯುದ್ದಕ್ಕೂ ಹಾಕಿದ್ದ ಅವರ ಅಭಿಮಾನಿಗಳು, ಆ ಮೂಲಕ ಅಟಲ್‌ಗೆ ಪುಷ್ಪ ನಮನ ಸಲ್ಲಿಸಿದರು. ಅವರ ನಿವಾಸ ಕೃಷ್ಣ ಮೆನನ್‌ ಸುತ್ತಲಿನ ಮಾರ್ಗಗಳಲ್ಲಿ ಗುರುವಾರ ರಾತ್ರಿಯೇ ಮೊಂಬತ್ತಿ ಬೆಳಗಿಸಿ, ಬ್ಯಾನರ್‌-ಪೋಸ್ಟರ್‌ ಅಂಟಿಸಿ ಗೌರವ ಸಲ್ಲಿಸಲಾಗಿತ್ತು.

ದೇಶಾದ್ಯಂತ ಅಂಗಡಿ ಬಂದ್‌
ಅಟಲ್‌ ಗೌರವಾರ್ಥ ಶುಕ್ರವಾರ ನವದೆಹಲಿಯ ಉದ್ಯಮಿಗಳು ಸೇರಿದಂತೆ ದೇಶಾದ್ಯಂತ ಹಲವು ವ್ಯಾಪಾರಿಗಳು ತಮ್ಮ ವಾಣಿಜ್ಯ ಮಳಿಗೆಗಳನ್ನು ಬಂದ್‌ ಮಾಡಿದ್ದರು. ದೆಹಲಿಯ 8 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಹಾಗೂ ದೇಶಾದ್ಯಂತ 6 ಕೋಟಿಗೂ ಹೆಚ್ಚು ಉದ್ಯಮಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಇಡೀ ದಿನದ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅಖೀಲ ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ. ಅದೇ ರೀತಿ ಜಮ್ಮು, ಗುಜರಾತ್‌, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿಯೂ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಗೌರವ ಸಲ್ಲಿಸಿದ್ದಾರೆ.

Advertisement

ಮಾರಿಷಸ್‌ನಲ್ಲೂ ಅಟಲ್‌ಗೆ ಗೌರವ
ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ಶುಕ್ರವಾರ ಮಾರಿಷಸ್‌ನ ಎಲ್ಲ ಕಟ್ಟಡಗಳಲ್ಲೂ ಭಾರತ ಮತ್ತು ಮಾರಿಷಸ್‌ನ ರಾಷ್ಟ್ರಧ್ವಜಗಳನ್ನು ಅರ್ಧ ಮಟ್ಟಕ್ಕೆ ಹಾರಿಸಲಾಯಿತು. ಮಾರಿಷಸ್‌ ಪ್ರಧಾನಿ ಕಾರ್ಯಾಲಯ ಹೊರಡಿಸಿದ ಅಧಿಕೃತ ಆದೇಶದಲ್ಲಿ ಈ ಘೋಷಣೆ ಮಾಡಲಾಯಿತು. 

ವಾಜಪೇಯಿ ಚಿರಸ್ಥಾಯಿ
“ಅಟಲ್‌ ಜೀ ಈ ದೇಶದ ಜನಮಾನದಲ್ಲಿ ಎಂದೆಂದಿಗೂ ಅಜರಾಮರವಾಗಿರುತ್ತಾರೆ. ಸುಸ್ಥಿರ ದೇಶ ನಿರ್ಮಾಣಕ್ಕೆ ಅವರು ನೀಡಿದ ಕಾಣಕೆಯನ್ನು ಬಣ್ಣಿ ಸಲು ಪದಗಳೇ ಸಾಲದು’. ಮಾಜಿ ಪ್ರಧಾನಿ ವಾಜಪೇಯಿಯವರಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದ ನಂತರ ಪ್ರಧಾನಿ ಮೋದಿಯವರ ಅಂತರಾಳದಿಂದ ಮೂಡಿ ಬಂದ ಮಾತು. ತಮ್ಮ ಮಾತುಗಳನ್ನು ಟ್ವೀಟರ್‌ನಲ್ಲಿ ಹೇಳಿಕೊಂಡಿರುವ ಅವರು, ಅದಕ್ಕೆ ಪೂರಕವಾಗಿ ವಾಜಪೇಯಿಯವರ ಅಂತ್ಯ ಸಂಸ್ಕಾರಕ್ಕೆ ಸಾಕ್ಷಿಯಾಗಲು ದೇಶದ ಮೂಲೆ ಮೂಲೆಗಳಿಂದ ಬಂದಿದ್ದ ಅಪಾರ ಜನ ಸ್ತೋಮವನ್ನು ಉಲ್ಲೇಖೀಸಿದ್ದಾರೆ. 

“”ಅಗಲಿದ ತಮ್ಮ ನೆಚ್ಚಿನ ನಾಯಕನ ಅಂತ್ಯ ಸಂಸ್ಕಾರಕ್ಕಾಗಿ ನಾನಾ ಊರುಗಳಿಂದ, ನಾನಾ ವರ್ಗಗಳ ಜನರು ಇಲ್ಲಿಗೆ ಆಗಮಿಸಿದ್ದಾರೆ. ದೇಶಕ್ಕಾಗಿ ಅತ್ಯುನ್ನತ ಕೊಡುಗೆ ನೀಡಿದ ಮಹಾನ್‌ ನಾಯಕನಿಗೆ ಇಡೀ ದೇಶವೇ ಪ್ರಣಾಮ ಅರ್ಪಿಸಿದೆ. ವಾಜಪೇಯಿ ಅವರೆಂದಿಗೂ ಚಿರಸ್ಥಾಯಿ ಎಂಬುದನ್ನು ಇದು ಸಾಬೀತುಪಡಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. 

ಅಟಲ್‌ ಜೀ ಅವರದ್ದು ವರ್ಣಿಸಲಾಗದ ಮೇರು ವ್ಯಕ್ತಿತ್ವ. ಮೇಲು-ಕೀಳು ಎನ್ನುವ ಯಾವುದೇ ಬೇಧ-ಭಾವವಿಲ್ಲದೇ ಎಲ್ಲರನ್ನೂ ಒಂದೇ ಭಾವದಿಂದ ನೋಡುತ್ತಿದ್ದರು. ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ. ತಿಂಗಳಲ್ಲಿ ಎರಡು ಬಾರಿ ಅವರನ್ನು ಭೇಟಿ ಮಾಡುತ್ತಿದ್ದೆ. ಭೇಟಿ ಸಂದರ್ಭದಲ್ಲೆಲ್ಲಾ ಚಾಯ್‌ ಮತ್ತು ಕಛೋರಿ ನೀಡಿ ಸತ್ಕರಿಸುತ್ತಿದ್ದರು.
ಕೆ. ಕಸ್ತೂರಿರಂಗನ್‌, ಖ್ಯಾತ ಬಾಹ್ಯಾಕಾಶ ವಿಜ್ಞಾನಿ

ನನಗೆ ವಾಜಪೇಯಿ ಅವರು ಪರಿಚಿತರು ಎಂಬುದೇ ಹೆಮ್ಮೆಯ ವಿಷಯ. ನಾನು ಅವರ ಸ್ನೇಹ ಸಂಪಾದಿಸಿದ್ದು ನನಗೆ ಸಿಕ್ಕ ಬಹು ದೊಡ್ಡ ಗೌರವ. ಭಾರತವು ಒಬ್ಬ ಮಹಾನ್‌ ನಾಯಕನನ್ನು ಕಳೆದುಕೊಂಡಿದೆ.
ದಲೈಲಾಮ, ಟಿಬೆಟಿಯನ್‌ ಧರ್ಮಗುರು
 

Advertisement

Udayavani is now on Telegram. Click here to join our channel and stay updated with the latest news.

Next