ಎಚ್.ಡಿ.ಕೋಟೆ: ಪಟ್ಟಣದಲ್ಲಿ ಪೊಲೀಸ್ ಪೂಜೆ ಹೆಸರಲ್ಲಿ ನಡೆಯುವ ಐತಿಹಾಸಿಕ ಕೋಟೆ ದಸರಾ ಮಹೋತ್ಸವ ಸಕಲ ಗೌರವಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು. ನಾಡ ಹಬ್ಬ ದಸರಾದಂತೆ ವಿಜಯದಶಮಿ ದಿನದಂದು ಪೊಲೀಸ್ ಪೂಜೆ ಹೆಸರಲ್ಲಿ ನಡೆಯುವ ದಸರಾ ಆಚರಣೆ ಬಹಳ ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಶ್ರೀವರದರಾಜಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ, ವಿವಿಧ ಉತ್ಸವಗಳು ಜರುಗುತ್ತವೆ.
ಪಟ್ಟಣದ ಪೊಲೀಸರು ಗೌರವ ರಕ್ಷೆ ಸಲ್ಲಿಸಿದ ನಂತರ 5.38 ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಧರ್ಮದರ್ಶಿ ಬಿ.ಎಸ್.ರಂಗಯ್ಯಂಗಾರ್, ಪಟ್ಟಣದ ವಿವಿಧ ಸಮಾಜಗಳ ಯಾಜಮಾನರು ಶ್ರೀವರದರಾಜಸ್ವಾಮಿ ಅಶ್ವ ವಾಹನಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಬನ್ನಿ ಪೂಜೆಗೆ ಚಾಲನೆ ನೀಡಿದರು.
ಪಟ್ಟಣದ ಮೊದಲನೆ ಮುಖ್ಯ ರಸ್ತೆಯಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಡಿರುವ ಶ್ರೀವರದರಾಜಸ್ವಾಮಿ ದೇವಸ್ಥಾನದಲ್ಲಿರುವ ಪಂಚಲೋಹದ ವಿಗ್ರಹವಾದ ವರದರಾಜ ಸ್ವಾಮಿಯನ್ನು ಅಶ್ವವಾಹನದಲ್ಲಿ, ಪೆರುಂದೇವಿ ಅಮ್ಮನ ಸಹಿತ ಶ್ರೀದೇವಿ, ಭೂದೇವಿ ದೇವರ ಪಂಚಲೋಹದ ವಿಗ್ರಹಗಳನ್ನು ಕೂರಿಸಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಮೀಪ ಇರುವ ಶೀ ಚಾಮುಂಡೇಶ್ವರಿ ದೇವಸ್ಥಾನದ ಬಳಿಯಿರುವ ಬನ್ನಿ ಮರಕ್ಕೆ ಶ್ರೀವರದರಾಜಸ್ವಾಮಿ ಪಂಚಲೋಹದ ವಿಗ್ರಹದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಪೊಲೀಸ್ ಇಲಾಖೆಯಿಂದ ಗೌರವ ರಕ್ಷೆ ಸಲ್ಲಿಸಲು ತಂದ ಬಂದೂಕುಗಳನ್ನು ಬನ್ನಿ ಮರದ ಮುಂದೆ ಇಟ್ಟು ಪೂಜೆ ನೆರವೇರಿಸಿದರು.
ಪಟ್ಟಣದ ಮಹಿಳೆಯರು, ಮಕ್ಕಳು ವಿವಿಧ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೋಟೆ ದಸರಾದಲ್ಲಿ ಭಾಗವಹಿಸಿದ್ದರು.ಭಕ್ತರು ಮೆರವಣಿಗೆ ದಾರಿ ಉದ್ದಕ್ಕೂ ತೆಂಗಿನ ಕಾಯಿ ಹಿಡುಗಾಯಿ ಒಡೆದು ದೇವರ ಕೃಪೆಗೆ ಪಾತ್ರರಾದರು.ಆರಕ್ಷಕ ಉಪನಿರೀಕ್ಷಕ ಅಶೋಕ್, ವೃತ್ತ ನಿರೀಕ್ಷಕರ ಗೈರಿನಲ್ಲಿ ಎಎಸ್‌ಐ ಮರಿಗೌಡ ನೇತೃತ್ವದಲ್ಲಿ ಸಿಬ್ಬಂದಿ ಗೌರವ ರಕ್ಷೆ ನೀಡಿದರು.
ಪಟೇಲ್ ನಾಗರಾಜಶೆಟ್ಟಿ, ಶ್ಯಾನುಬೋಗರಾದ ನಾಗೇಶ್‌ರಾವ್, ವರದರಾಜ ಸ್ವಾಮಿ ದೇವಸ್ಥಾನ ಸಮಿತಿ ಎಚ್.ವಿ.ತಿರುಮಲಾಚಾರ್, ವೆಂಕಟೇಶ್‌ಪ್ರಸಾದ್, ಕೇಬಲ್ ದೇವರಾಜು, ಗೀತಾರಾಮಕೃಷ್ಣ, ಅರ್ಚಕ ಶ್ರೀಧರ್, ಮುಖಂಡರಾದ ಭಾಸ್ಕರ್, ಸಿದ್ದರಾಮೇಗೌಡ, ಆರ್.ನಟರಾಜು ಮತ್ತಿತರರಿದ್ದರು.