Advertisement

ರಥಬೀದಿ: ಧರೆಗುರುಳಿತು ಬೃಹತ್‌ ಅಶ್ವತ್ಥ ಮರ

10:28 PM Jan 24, 2021 | Team Udayavani |

ಮಹಾನಗರ: ಮಂಗಳೂರು ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದ ಬೃಹತ್‌ ಅಶ್ವತ್ಥಮರ (ಅರಳೀಮರ) ರವಿವಾರ ಬೆಳಗ್ಗೆ ಧರೆಗುರುಳಿತು. ಪವಾಡವೆಂಬಂತೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

ಸುಮಾರು 300 ವರ್ಷಗಳಿಗೂ ಅಧಿಕ ಹಳೆಯದಾದ ಮರ ರವಿವಾರ ಬೆಳಗ್ಗೆ 8.10ರ ಸುಮಾರಿಗೆ ಬುಡದಿಂದ ಸ್ವಲ್ಪ ಮೇಲ್ಭಾಗದಲ್ಲಿ ಮುರಿದು ಬಿತ್ತು. ಈ ವೇಳೆ ಮರದಡಿ ಇದ್ದ ಒಂದು ಜೆಸಿಬಿ, ಒಂದು ನೀರಿನ ಟ್ಯಾಂಕರ್‌ಗೆ ಹಾನಿಯಾಗಿದೆ. ಇನ್ನೊಂದು ಕಾರಿಗೆ ಕೊಂಬೆಗಳು ತಾಗಿವೆ ಯಾದರೂ ಯಾವುದೇ ಹಾನಿಯಾಗಿಲ್ಲ.

ಸುರಕ್ಷಿತವಾಗಿ ಬಿತ್ತು ! :

ದೇವಸ್ಥಾನದಿಂದ ಮುಂಭಾಗ ಸುಮಾರು ಮೂರು ಮೀಟರ್‌ ದೂರದಲ್ಲಿರುವ ಈ ಮರ ದೇವಸ್ಥಾನದ ಎದುರು ಇರುವ ಖಾಲಿ ಜಾಗಕ್ಕೆ ಬಿದ್ದಿದೆ. ದೇವಸ್ಥಾನದ ಮೇಲೆಯಾಗಲಿ ಅಥವಾ ಅಕ್ಕಪಕ್ಕದ ಕಟ್ಟಡಗಳ ಮೇಲಾಗಲಿ ಬೀಳದೆ ಖಾಲಿ ಜಾಗಕ್ಕೆ ಬಿದ್ದಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಇದು ದೇವರ ಪವಾಡವಲ್ಲದೆ ಬೇರೇನೂ ಅಲ್ಲ ಎಂದು ಸ್ಥಳದಲ್ಲಿ ಸೇರಿದ್ದ ಭಕ್ತರು ಮಾತನಾಡುತ್ತಿರುವುದು ಕಂಡುಬಂತು.

ಭಾರೀ ಅನಾಹುತ ತಪ್ಪಿತು :

Advertisement

ಅಶ್ವತ್ಥ ಮರದ ಅಕ್ಕಪಕ್ಕ ಸಾಮಾನ್ಯವಾಗಿ ಜನ ಮತ್ತು ವಾಹನ ದಟ್ಟಣೆ ಇರುತ್ತದೆ. ಶನಿವಾರ ಮುಂಜಾನೆ ಅಶ್ವತ್ಥ ಮರದ ಪ್ರದಕ್ಷಿಣೆಗೆ ನೂರಾರು ಮಂದಿ ಬರುತ್ತಾರೆ. ಒಂದು ವೇಳೆ ಆಗ ಉರುಳಿ ಬಿದ್ದಿದ್ದರೆ ಅನಾಹುತವಾಗುತ್ತಿತ್ತು. ಅಲ್ಲದೆ ರವಿವಾರ ಕೂಡ 8.30 ಅನಂತರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚು. ವಾಹನಗಳ ಸಂಖ್ಯೆ ಹೆಚ್ಚಾದಾಗ ಕೆಲವರು ಮರದಡಿ ನಿಲ್ಲಿಸುವ ಸಾಧ್ಯತೆಯೂ ಇತ್ತು. ಆಗಲೂ ಅಪಾಯವಾಗುತ್ತಿತು. ಅಲ್ಲದೆ ಇಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಈ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳ ನಿಲುಗಡೆಗೆ ನಿರ್ಬಂಧವೂ ಇತ್ತು. ಅದರಿಂದಾಗಿಯೂ ಇಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇತ್ತು. ಮರ ಬಿದ್ದ ರೀತಿಗೆ ಅಶ್ವತ್ಥ ಕಟ್ಟೆಗೂ ಹಾನಿಯಾಗಿಲ್ಲ. ದೇಗುಲದ ರಥೋತ್ಸವ ಅಥವಾ ಇತರ ಕಾರ್ಯಕ್ರಮಗಳಿದ್ದಾಗ ಘಟನೆ ನಡೆದಿದ್ದರೂ ಅಪಾಯವಿತ್ತು. ಒಟ್ಟಿನಲ್ಲಿ ಯಾರಿಗೂ ದೊಡ್ಡ ಹಾನಿಯನ್ನುಂಟು ಮಾಡದೆ ಮರ ಉರುಳಿದೆ ಎನ್ನುತ್ತಾರೆ ದೇಗುಲದವರು.

ತನ್ನಷ್ಟಕ್ಕೇ ನೆಲಕ್ಕಪ್ಪಳಿಸಿತು :

ರವಿವಾರ ಬೆಳಗ್ಗೆ ಬಲವಾದ ಗಾಳಿ ಇರಲಿಲ್ಲ. ಮರ ತನ್ನಷ್ಟಕ್ಕೇ ನಿಧಾನವಾಗಿ ಟಕ್‌ ಟಕ್‌ ಸದ್ದು ಮಾಡುತ್ತಾ ನೆಲಕ್ಕಪ್ಪಳಿಸಿತು. ಒಂದು ವೇಳೆ ಪಶ್ಚಿಮದಿಂದ ಬಲವಾದ ಗಾಳಿ ಬೀಸಿದ್ದರೆ ಮರ ಬಹುತೇಕ ದೇವಸ್ಥಾನ ಅಥವಾ ಪಕ್ಕದ ಕಟ್ಟಡಗಳ ಮೇಲೆ ಉರುಳಿಬೀಳುವ ಅಪಾಯವೂ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

“10 ವರ್ಷಗಳ ಹಿಂದೆ ಅಂದಾಜಿಸಿದ್ದೆವು’ಮರದ ಸ್ಥಿತಿಗತಿಯನ್ನು ಅವಲೋಕಿಸಿ 8-10 ವರ್ಷಗಳ ಹಿಂದೆಯೇ ದೇಗುಲದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಪ್ರದಕ್ಷಿಣೆಗೆ ಹಳೆಯ ಕಟ್ಟೆಯ ಬದಲು ಹೊಸ ಅಶ್ವತ್ಥ ಕಟ್ಟೆಯನ್ನು ಬಳಕೆ ಮಾಡಲು ಮುಂದಾಗಿದ್ದೆವು. ಆದರೆ ಇದಕ್ಕೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ದೇಗುಲಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿಗಳಿಗೆ ಇದನ್ನೇ ಬಳಕೆ ಮಾಡಲಾಗುತ್ತಿತ್ತು ಎನ್ನುತ್ತಾರೆ ದೇಗುಲದವರು.

ಈ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು, ಅಂದಿನಿಂದಲೂ ಈ ಮರವಿದೆ. ಹಾಗಾಗಿ ಈ ಮರಕ್ಕೆ 300ಕ್ಕೂ ಅಧಿಕ ವರ್ಷಗಳಾಗಿವೆ. ಉರುಳಿ ಬಿದ್ದಿರುವ ಅಶ್ವತ್ಥ ಮರದ ಪಕ್ಕದಲ್ಲೇ ಇನ್ನೊಂದು ಅಶ್ವತ್ಥ ಮರ ಇದೆ. ಹಾಗಾಗಿ ದೇವಸ್ಥಾನಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ತೊಂದರೆಯಾಗದು. ಈಗ ಉರುಳಿಬಿದ್ದಿರುವ ಅಶ್ವತ್ಥ ಮರವಿದ್ದ ಕಟ್ಟೆಯನ್ನು ಏನು ಮಾಡಬೇಕು ಎಂಬ ಬಗ್ಗೆ ಮಠಾಧೀಶರ ಮಾರ್ಗದರ್ಶನದಂತೆ ತೀರ್ಮಾನ ತೆಗೆದುಕೊಳ್ಳಲಾಗುವುದು.-ಸಿ.ಎಲ್‌. ಶೆಣೈ,  ಆಡಳಿತ ಮೊಕ್ತೇಸರರು, ಶ್ರೀ ವೆಂಕಟರಮಣ ದೇವಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next