ಶ್ರೀನಗರ : ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು,ಭಾರೀ ಸಂಖ್ಯೆಯಲ್ಲಿ ಉಗ್ರರ ತಂಡಗಳು ಶೋಪಿಯಾನ್‌ನಲ್ಲಿ ಸ್ವತಂತ್ರವಾಗಿ ಸಂಚರಿಸುವುದು ಕಂಡು ಬಂದ ಹಿನ್ನಲೆಯಲ್ಲಿ ಸೇನಾ ಪಡೆಗಳು ಗುರುವಾರ ಬೆಳಗ್ಗೆ ಭಾರೀ ಕಾರ್ಯಾಚರಣೆ ಆರಂಭಿಸಿದೆ.
ಪ್ರಸಕ್ತ ವರ್ಷ ಸೇನಾ ಪಡೆ ಇದೇ ಮೊದಲ ಬಾರಿಗೆ ಇಂತಹ ಭಾರೀ ಜಂಟಿ ಕಾರ್ಯಾಚರಣೆಗಿಳಿದಿದ್ದು, 3000 ಸಾವಿರ ಮಂದಿ ಬಿಎಸ್‌ಎಫ್ ಯೋಧರು, ಸಿಆರ್‌ಪಿಎಫ್ ಯೋಧರು ಮತ್ತು ಜಮ್ಮ ಮತ್ತು ಕಾಶ್ಮೀರ ಪೊಲೀಸರು 25 ಕ್ಕೂ ಹೆಚ್ಚು ಹಳ್ಳಿಗಳ ಅರಣ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ದಕ್ಷಿಣ ಕಾಶ್ಮೀರ ಶೋಪಿಯಾನ್‌ನಲ್ಲಿ ಶಸ್ತ್ರ ಸಜ್ಜಿತ ಉಗ್ರರ ತಂಡಗಳು ಭಾರೀ ಸಂಖ್ಯೆಯಲ್ಲಿ ಅರಣ್ಯ ಪ್ರದೇಶದಲ್ಲಿ ಮೆರವಣಿಗೆ ನಡೆಸಿರುವ ವಿಡಿಯೋಗಳು ಬೆಳಕಿಗೆ ಬಂದಿದ್ದವು.
ಕಳೆದ ವರ್ಷ ಬುಹ್ರಾನ್ ವಾನಿಯ ಹತ್ಯೆಯ ಬಳಿಕ ಸ್ಥಳೀಯ 100ಕ್ಕೂ ಹೆಚ್ಚು ಯುವಕರು ಉಗ್ರ ಸಂಘಟನೆಯನ್ನು ಸೇರಿಕೊಂಡಿರುವ ಬಗ್ಗೆಯೂ ಹೇಳಲಾಗಿದೆ.
ಕಳೆದ 3 ದಿನಗಳಲ್ಲಿ ಉಗ್ರರು ಪೊಲೀಸರ ಮೇಲೆ ದಾಳಿ ನಡೆಸಿ 9 ರೈಫಲ್ಸ್‌ಗಳನ್ನು ಲೂಟಿಗೈದಿದ್ದರು. 3 ಬ್ಯಾಂಕ್‌ಗಳನ್ನೂ ದರೋಡೆಗೈದಿದ್ದಾರೆ.