ಕೊಲಂಬೋ : ದೇಶದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶನಿವಾರ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಭವನದಿಂದ ದೊಡ್ಡ ಮೊತ್ತದ ಹಣವನ್ನು ಸುಲಿಗೆ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾದ ದಿನಪತ್ರಿಕೆ ಡೈಲಿ ಮಿರರ್ ಪ್ರಕಾರ, ವಶಪಡಿಸಿಕೊಂಡ ಹಣವನ್ನು ಭದ್ರತಾ ಘಟಕಗಳಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಶನಿವಾರದ ಕ್ರಾಂತಿಯ ನಂತರ ಹಲವಾರು ನಾಟಕೀಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ, ಅಲ್ಲಿ ಸಾವಿರಾರು ಪ್ರತಿಭಟನಾಕಾರರು ರಾಜಧಾನಿ ಕೊಲಂಬೋದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡುವಂತೆ ಒತ್ತಾಯಿಸಿದ್ದಾರೆ.
ಪೊಲೀಸರು ಹಾಕಿದ್ದ ಭದ್ರತಾ ತಡೆಗಳನ್ನು ಕಿತ್ತುಹಾಕಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ರಾಜೀನಾಮೆ ಬೇಡಿಕೆಯೊಂದಿಗೆ, ಅವರು ಮನೆಗೆ ನುಗ್ಗಿದ್ದರು,ಈಜುಕೊಳದಲ್ಲಿ ಸ್ನಾನ ಮಾಡಿ, ಅಡುಗೆಮನೆ ಮತ್ತು ಮನೆಯಲ್ಲೆಲ್ಲ ದಾಂಧಲೆ ಎಬ್ಬಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿನ ವಿಡಿಯೋವೊಂದರಲ್ಲಿ, ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸದಿಂದ ಪತ್ತೆಯಾದ ಕರೆನ್ಸಿ ನೋಟುಗಳನ್ನು ಎಣಿಸುತ್ತಿರುವುದನ್ನು ಕಾಣಬಹುದು ಎಂದು ಮಾಧ್ಯಮವು ತಿಳಿಸಿದೆ.
ದೇಶದಲ್ಲಿ ಶಾಂತಿಯನ್ನು ಕಾಪಾಡುವ ಸಲುವಾಗಿ ಎಲ್ಲಾ ನಾಗರಿಕರು ತಮ್ಮ ಬೆಂಬಲವನ್ನು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ನೀಡಬೇಕೆಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಶವೇಂದ್ರ ಸಿಲ್ವಾ ಒತ್ತಾಯಿಸಿದ್ದಾರೆ.