ಬಂಗಾರಪೇಟೆ: ಉದ್ಯೋಗಕ್ಕಾಗಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಶಂಕುಸ್ಥಾನೆಯಾದ ಹುದುಕುಳ ರೈಲ್ವೆ ನಿಲ್ದಾಣ ಕಾಮಗಾರಿ 9 ವರ್ಷ ಗಳಿಂದ ಆಮೆ ನಡಿಗೆಯಲ್ಲಿ ಸಾಗುತ್ತಿದ್ದರೂ, ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿಗೆ ಹಿಡಿದ ಕೈಕನ್ನಡಿಯಾಗಿದೆ.
ಯಾವುದೇ ಕಾರ್ಖಾನೆಗಳಿಲ್ಲದ ಬಂಗಾರಪೇಟೆ ಕ್ಷೇತ್ರದಲ್ಲಿ ಜೀವನ ಸಾಗಿಸಲು ನಿತ್ಯ 15ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ರೈಲುಗಳ ಮೂಲಕ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳಿ ಸಂಜೆ ಮರಳುತ್ತಾರೆ. ಅಂತೆಯೇ ಕಸಬಾ ಹೋಬಳಿಯ ಜನರೂ ಸಹ ಅಧಿಕ ಸಂಖ್ಯೆಯಲ್ಲಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುವುದರಿಂದ ಈ ಹೋಬಳಿಯ ಜನರು ಮುಂಜಾನೆ 4 ಗಂಟೆಯಿಂದಲೇ ದ್ವಿಚಕ್ರ ವಾಹನಗಳಲ್ಲಿ ಪಟ್ಟಣಕ್ಕೆ ಬಂದು ರೈಲು ಹತ್ತಬೇಕಿತ್ತು. ಚಿಕ್ಕಬಳ್ಳಾಪುದಿಂದ ಕೋಲಾರ ಮೂಲಕ ಪಟ್ಟಣಕ್ಕೆ ಸಂಪರ್ಕಕಲ್ಪಿಸುವ ಈ ಮಾರ್ಗದ ಹುದುಕುಳ ಗ್ರಾಮದಲ್ಲಿ ಈ ಹಿಂದೆ ಬ್ರಿಟಿಷರ ಕಾಲದಲ್ಲಿ ರೈಲ್ವೆ ನಿಲ್ದಾಣವಿತ್ತು. ನಂತರ ದಿನಗಳಲ್ಲಿ ಆ ನಿಲ್ದಾಣ ಮುಚ್ಚಲಾಗಿತ್ತು.
ಚಿನ್ನಕೋಟೆ ಗ್ರಾಮದಲ್ಲಿ ಹಾಲ್ಟ್ ಸ್ಟೇಷನ್: ಈ ಹಿನ್ನೆಲೆಯಲ್ಲಿ ಹುದುಕುಳ ಗ್ರಾಮದಲ್ಲಿ ಮುಚ್ಚಿರುವ ರೈಲ್ವೆ ನಿಲ್ದಾಣ ಪುನರಾಂಭಿಸುವ ಮೂಲಕ ಈ ವ್ಯಾಪ್ತಿಯಲ್ಲಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಅಂದಿನ ಸಂಸದರಾಗಿದ್ದ ಕೆ.ಹೆಚ್.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಪ್ರಯಾಣಿಕರು ಮನವಿ ಸಲ್ಲಿಸಿದರು. ಅಂತೆಯೇ ಚಿನ್ನಕೋಟೆ ಗ್ರಾಮದಲ್ಲಿಯೂ ಸಹ ಹಾಲ್ಟ್ ಸ್ಟೇಷನ್ ಆರಂಭಿಸುವಂತೆ ಒತ್ತಾಯಕ್ಕೆ ಮಣಿದು ಎರಡೂ ಕಡೆ ಹೊಸ ನಿಲ್ದಾಣಕ್ಕೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ನೀಡಿತು.
ಪ್ರಯಾಣಿಕರಲ್ಲಿ ನಿರಾಸೆ: ಅಂದುಕೊಂಡ ಸಮಯದಲ್ಲಿ ಚಿನ್ನಕೋಟೆ ಗ್ರಾಮದಲ್ಲಿ ಮಾತ್ರ ಹಾಲ್ಟ್ ಸ್ಟೇಷನ್ ನಿರ್ಮಾಣವಾಗಿ ಉದ್ಘಾಟನೆ ಸಹವಾಯಿತು. ಆದರೆ ಹುದುಕುಳ ಗ್ರಾಮದಲ್ಲಿನ ಹೊಸ ನಿಲ್ದಾಣ ಕಾಮಗಾರಿಗೆ ಗ್ರಹಣ ಹಿಡಿಯಿತು. 9ವರ್ಷಗಳೇ ಕಳೆದರೂ ಕಟ್ಟಡವೇನೋ ತಲೆಎತ್ತಿದೆ, ಮುಂದಿನ ಚಟುವಟಿಕೆಗಳು ಮಾತ್ರ ಸಾಗಲೇ ಇಲ್ಲ. ಈ ಗ್ರಾಮದ ಸುತ್ತಮುತ್ತಲಿನ ಪ್ರಯಾಣಿಕರು ಇಂದೋ ನಾಳೆನೋ ರೈಲು ಗ್ರಾಮದಲ್ಲಿ ಬಂದು ನಿಲ್ಲಲಿದೆ ಎಂದು ಭಾವಿಸಿದ್ದ ವರಿಗೆ ನಿರಾಶೆ ಮೂಡಿಸಿದೆ. 9ವರ್ಷಗಳಿಂದ ಕಟ್ಟಡ ಬಳಕೆಗೆ ಬಾರದೆ ಕಡೆಗಣಿಸಿದ್ದರಿಂದ ಉದ್ಘಾ ಟನೆಗೂ ಮೊದಲೆ ಕಟ್ಟಡ ಶಿಥಿಲಾವಸ್ಥೆಗೆ ತಲು ಪಿತು. ಅಲ್ಲದೆ ರಾತ್ರಿಯ ವೇಳೆ ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಅನೈತಿಕ ಚಟುವಟಿಕೆಗಳ ತಾಣವಾದ ಕಟ್ಟಡ: ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಇಲಾಖೆ ಮತ್ತೆ ದುರಸ್ತಿಗೊಳಿಸಿ ಹೆಸರು ಸಹ ಬರೆದು ಬಣ್ಣ ಬಡಿಯಲಾಗಿದೆ. ಪ್ರಯಾಣಿಕರು ನಿಲ್ಲಲು ಪ್ಲಾಟ್ ಫಾರಂ ನಿರ್ಮಾಣಕ್ಕೆ ಮಣ್ಣು ಹಾಕಿ ಬಿಟ್ಟಿರುವುದ ರಿಂದ ಮಳೆ ಬಂದರೆ ಅದು ಕೆಸರುಗದ್ದೆಯಾಗುವುದು. ಕಟ್ಟಡಕ್ಕೆ ಸಮರ್ಪಕ ರೀತಿ ಬಾಗಿಲು, ಕಿಟಕಿ ಅಳವಡಿಸದೆ ಹಾಗೆ ಬಿಟ್ಟಿರುವುದರಿಂದ ಮತ್ತೆ ರಾತ್ರಿಯ ವೇಳೆ ಕಾನೂನು ಬಾಹಿರ ಅಡ್ಡವಾಗಿ ಪರಿವರ್ತನೆಯಾಗಿದೆ. ಸಂಸದರು ನೆನೆಗುದಿಗೆ ಬಿದ್ದಿರುವ ಹುದುಕುಳ ನಿಲ್ದಾಣದ ಕಾಮಗಾರಿಗೆ ಮೋಕ್ಷ ಕಲ್ಪಿಸಿಕೊಟ್ಟು ಶೀಘ್ರ ಉದ್ಘಾಟನೆ ಯಾಗುವಂತೆ ಮಾಡಿ ಪ್ರಯಾಣಿಕರಿಗೆ ನೆರವಾಗುವಂತೆ ಕ್ರಮಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿ ಹುದುಕುಳ ಗ್ರಾಮದ ಬಳಿ ಬ್ರಿಟೀಷರ ಕಾಲದಲ್ಲಿ ರೈಲ್ವೆ ನಿಲ್ದಾಣ ಹಳೆ ಕಟ್ಟಡವನ್ನು ಸಂಸದರಾಗಿದ್ದ ಕೆ.ಹೆಚ್.ಮುನಿಯಪ್ಪ ಹಾಗೂ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹೊಸದಾಗಿ ಕಟ್ಟಡವನ್ನು ನಿರ್ಮಾಣಕ್ಕೆ ಶ್ರಮಿಸಿದ್ದರು. ಗುತ್ತಿಗೆದಾರರ ಸಮರ್ಪಕವಾಗಿ ನಿರ್ಮಾಣ ಮಾಡದೇ ಇದ್ದುರಿಂದ ಮಳೆ ಬಂದರೆ ಸೋರುತ್ತಿತ್ತು. ಉದ್ಘಾಟನೆಗೂ ಮುಂಚೆ ಮತ್ತೆ ಎರಡನೇ ಬಾರಿ ಸುಣ್ಣ-ಬಣ್ಣ ಬಳಿದು ಮತ್ತೆ ರಿಪೇರಿ ಕೆಲಸ ಮಾಡಿದ್ದಾರೆ. ರೈಲ್ವೆ ಇಲಾಖೆಯವರು ಕಾಟಾಚಾರಕ್ಕೆ ಕೆಲಸ ಮಾಡುವಂತಿದೆ. ಪ್ರಯಾಣಿಕರಿಗೆ ಯಾವುದೇ ಅನುಕೂಲವಾಗುತ್ತಿಲ್ಲ.
-ಹೆಚ್.ಎಂ.ರವಿ, ಅಧ್ಯಕ್ಷರು, ಚಿಕ್ಕಅಂಕಂಡಹಳ್ಳಿ ಗ್ರಾಪಂ, ಹುದುಕುಳ
-ಎಂ.ಸಿ.ಮಂಜುನಾಥ್