ಒಂದು ಚಿತ್ರಕ್ಕೆ ಒಬ್ಬನೇ ವ್ಯಕ್ತಿ ನಾಯಕ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕನಾಗಿ ಹೀಗೆ ತೆರೆಹಿಂದೆ ಹಲವು ರೋಲ್‌ಗಳಲ್ಲಿ ಕಾಣಿಸಿಕೊಳ್ಳುವ ಉದಾಹರಣೆಗಳನ್ನು ಆಗಾಗ್ಗೆ ಚಿತ್ರರಂಗದಲ್ಲಿ ನೋಡುತ್ತಿರುತ್ತೇವೆ. ಈಗ ಅಂಥದ್ದೇ ಮತ್ತೂಂದು ಚಿತ್ರ ಚಿತ್ರೀಕರಣಕ್ಕೆ ಅಣಿಯಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಹುಡುಕಾಟ’ “ವಸುಂಧರ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ “ಹುಡುಕಾಟ’ ಚಿತ್ರಕ್ಕೆ ರವಿ ಮುಲಕಲಪಲ್ಲಿ ಕಥೆ, ಚಿತ್ರಕಥೆ ಬರೆದು, ಹಾಡುಗಳಿಗೆ ಸಂಗೀತ ಸಂಯೋಜಿಸಿ, ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದ ಹೊಣೆಯನ್ನೂ ತಾವೇ ಹೊತ್ತುಕೊಂಡಿರುವ ರವಿ, ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಬಹುತೇಕ “ಒನ್ ಮ್ಯಾನ್ ಶೋ’ ಥರ ಕಾಣುವ ಈ ಚಿತ್ರ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆನಿರ್ಮಾಣವಾಗುತ್ತಿದೆಯಂತೆ. ಇತ್ತೀಚೆಗೆ “ಹುಡುಕಾಟ’ ಚಿತ್ರ ಮುಹೂರ್ತವನ್ನು ಆಚರಿಸಿಕೊಂಡಿತು. ಹಿರಿಯ ನಿರ್ದೇಶಕ ಸಿ.ವಿ ಶಿವಶಂಕರ್, ಎಂ.ಡಿ ಕೌಶಿಕ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ನಿರ್ದೇಶಕ, ನಿರ್ಮಾಪಕ ಕಂ ನಾಯಕ ರವಿ ಮುಲಕಲಪಲ್ಲಿ, “ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ಹೆಣ್ಣುಮಕ್ಕಳ ಅಪಹರಣ, ಅತ್ಯಾಚಾರ ಪ್ರಕರಣಗಳು ಸುದ್ದಿಯಾಗುತ್ತಿವೆ. ಈಗ ಇದೇ ವಿಷಯವನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದೇವೆ. ಹಳ್ಳಿಯೊಂದರಲ್ಲಿ ಸೀತಾ ಮತ್ತು ಸಾವಿತ್ರಿ ಎಂಬ ಇಬ್ಬರು ಕುರಿ ಕಾಯುವ ಹುಡುಗಿಯರು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ. ಆ ನಂತರ ಅವರ ಕಥೆ ಏನಾಗುತ್ತದೆ ಅನ್ನೋದೆ ಚಿತ್ರದ ಕಥೆಯ ಒಂದು ಎಳೆ’ ಎಂದು ಚಿತ್ರದ ಕಥಾಹಂದರ ತೆರೆದಿಟ್ಟರು.
ಇನ್ನು “ಹುಡುಕಾಟ’ ಚಿತ್ರಕ್ಕೆ “ಪ್ರತಿ ಕ್ಷಣವೂ ಹೋರಾಟ’ ಎಂಬ ಟ್ಯಾಗ್ ಲೈನ್ ಇದ್ದು, ಚಿತ್ರದಲ್ಲಿ ರವಿ ಮುಲಕಲಪಲ್ಲಿ ಅವರೊಂದಿಗೆ ಅಭಿಷೇಕ್ ಕನ್ನೆಲೂರಿ, ಪ್ರಜ್ವಲ್ ಕುಮಾರ್ ಎಸ್, ಶ್ರೀಧರ ಕುಮಾರ್, ಮಧುಪ್ರಿಯಾ, ಪೂಜಿತಾ, ದಿವ್ಯಾ ಭಾರ್ಗವಿ, ಲಲಿತಾ, ನಾಗೇಶ್ವರ ರಾವ್, ಸುಜಾತ, ಸಂತೋಷ್, ಮಂಜುನಾಥ್, ರಮಣ, ಭಾಸ್ಕರ್, ಚರಣ್, ರಾಕ್ ವೇಣು, ಟೈಗರ್ ಬಾಬು, ಧನಂಜಯ್, ಗಿರಿ ಸೇರಿದಂತೆ ಕನ್ನಡ ಮತ್ತು ತೆಲುಗಿನ ಹಲವು ಕಲಾವಿದರು ಇತರ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರಕ್ಕೆ ಆರ್ಯನ್ ಛಾಯಾಗ್ರಹಣ, ಎಂ.ಎನ್.ಆರ್ ಸಂಕಲನವಿದೆ. ಡಿ.ಎಸ್.ಬಿ ಉಪ್ಪಾರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಮತ್ತು ದೃಶ್ಯಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ಮೈಸೂರು, ಮಡಿಕೇರಿ, ಮಂಡ್ಯ, ಬೆಂಗಳೂರು ಸುತ್ತಮುತ್ತ “ಹುಡುಕಾಟ’ ಚಿತ್ರದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಒಟ್ಟಾರೆ ಬಹುತೇಕ ಹೊಸಬರೆ ಸೇರಿ ನಿರ್ಮಿಸುತ್ತಿರುವ “ಹುಡುಕಾಟ’ ತೆರೆಗೆ ಯಾವಾಗ ಮುಗಿಯುತ್ತದೆ ಅನ್ನೋದರ ಬಗ್ಗೆ ಚಿತ್ರತಂಡಕ್ಕೇ ಸ್ಪಷ್ಟತೆ ಇಲ್ಲದಿರುವುದರಿಂದ, ಚಿತ್ರ ಯಾವಾಗ ತೆರೆಗೆ ಬರಬಹುದು ಅನ್ನೋದರ ಬಗ್ಗೆ ಸದ್ಯಕ್ಕೆ ಏನೂ ಹೇಳುವಂತಿಲ್ಲ.