Advertisement

ಆರೋಪಿಗಳ ಎನ್‌ಕೌಂಟರ್‌ : ಭವಿಷ್ಯ ನುಡಿದಿತ್ತೂಂದು ಟ್ವೀಟ್‌

09:51 AM Dec 08, 2019 | Hari Prasad |

ಆರೋಪಿಗಳ ಎನ್‌ಕೌಂಟರ್‌ ನಡೆಯುವುದಕ್ಕೂ 5 ದಿನ ಮುಂಚಿತವಾಗಿಯೇ ಈ ಕುರಿತು ಟ್ವೀಟ್‌ವೊಂದು ‘ಭವಿಷ್ಯ’ ನುಡಿದಿತ್ತು. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕೆಂದರೆ ಅವರನ್ನು ಇದೇ ರೀತಿ ಸಾಯಿಸಬಹುದು ಎಂದು ಆ ಟ್ವೀಟ್‌ನಲ್ಲಿ ಸಲಹೆ ನೀಡಲಾಗಿತ್ತು. ಅಚ್ಚರಿಯೆಂದರೆ, ಅದರಲ್ಲಿ ಯಾವ ರೀತಿ ವಿವರಿಸಲಾಗಿದೆಯೋ, ವಾಸ್ತವದಲ್ಲಿ ನಡೆದ ಎನ್‌ಕೌಂಟರ್‌ ಕೂಡ ಅದೇ ಮಾದರಿಯಲ್ಲಿ ನಡೆದಿದೆ. ಡಿ.1ರ ಸಂಜೆ 6.24ಕ್ಕೆ ‘ಕೋನಾ ಫ್ಯಾನ್‌ ಕ್ಲಬ್‌’ ಎಂಬ ಹೆಸರಿನ ಟ್ವಿಟರ್‌ ಖಾತೆಯಲ್ಲಿ ಪ್ರಕಟವಾದ ಟ್ವೀಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

ಅಂದು ತೆಲಂಗಾಣದ ಐಟಿ ಸಚಿವ ಕೆಟಿ ರಾಮರಾವ್‌ ಅವರು ಟ್ವೀಟ್‌ ಮಾಡಿ, ‘ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಮಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಪಶು ವೈದ್ಯೆಯ ಕುಟುಂಬಕ್ಕೆ ಹೇಗೆ ಸಾಂತ್ವನ ಹೇಳಬೇಕೆಂದೇ ಗೊತ್ತಾಗುತ್ತಿಲ್ಲ. ನ್ಯಾಯ ವಿಳಂಬವಾಯಿ ತೆಂದರೆ, ನ್ಯಾಯವನ್ನು ತಿರಸ್ಕರಿಸಿದಂತೆಯೇ ಸರಿ’ ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಟ್ವೀಟ್‌ ಮಾಡಿದ್ದ ಕೋನಾ ಫ್ಯಾನ್‌ ಕ್ಲಬ್‌ ಎಂಬ ಖಾತೆ ಹೊಂದಿರುವ ವ್ಯಕ್ತಿ, ‘ಸರ್‌, ನೀವು ಬಯಸಿದ್ದೇ ಆದಲ್ಲಿ ಅವರಿಗೆ ಶಿಕ್ಷೆ ನೀಡಬಹುದು. ಪಶುವೈದ್ಯೆಯನ್ನು ಯಾವ ಸ್ಥಳದಲ್ಲಿ ಸುಟ್ಟು ಹಾಕಲಾಯಿತೋ, ಅದೇ ಸ್ಥಳಕ್ಕೆ ಪ್ರಕರಣದ ಮರುಸೃಷ್ಟಿಗೆ ಎಂದು ಹೇಳಿ ಆರೋಪಿಗಳನ್ನು ಕರೆದುಕೊಂಡು ಹೋಗಿ. ಈ ಸಮಯದಲ್ಲಿ ಆರೋಪಿಗಳು ಎಸ್ಕೇಪ್‌ ಆಗಲು ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಆಗ ನಮ್ಮ ಪೊಲೀಸರಿಗೆ ಕೂಡ ಅವರನ್ನು ಶೂಟ್‌ ಮಾಡದೇ ಬೇರೆ ವಿಧಿಯಿರುವುದಿಲ್ಲ ಎಂಬ ಬಗ್ಗೆಯಂತೂ ನನಗೆ ಖಚಿತ ವಿಶ್ವಾಸವಿದೆ… ದಯವಿಟ್ಟು ಒಮ್ಮೆ ಆಲೋಚಿಸಿ ನೋಡಿ’ ಎಂದು ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next