Advertisement

3ರಂದು ಶ್ರೀ ಹುಚ್ಚೇಶ್ವರ ಮಹಾರಥೋತ್ಸವ

03:57 PM Feb 28, 2021 | Team Udayavani |

ಕಮತಗಿ: ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದಿಂದ ಪ್ರತಿವರ್ಷ ನಡೆಯುವ “ಕಮತಪುರ ಉತ್ಸವ’ವನ್ನು ಮಾ.3ರಂದು ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ ತಿಳಿಸಿದರು.

Advertisement

ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮತಪುರ ಉತ್ಸವ ಪ್ರತಿವರ್ಷ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಕೋವಿಡ್‌ ನಿಯಮ ಪಾಲಿಸಿ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಮಾರ್ಚ್‌ 3ರಂದು ಬೆಳಗಿನ ಜಾವ 5ಗಂಟೆಗೆ ಪಟ್ಟಣದ ಹಳೆಯ ರಥಬೀದಿಯಲ್ಲಿ ಬೆಳಗಿನ ಹುಚ್ಚಯ್ಯ ಲಘುರಥೋತ್ಸವ ಇದ್ದು, ಈ ಸಂದರ್ಭದಲ್ಲಿ ಸಿಡಿಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ವಿಭಿನ್ನ ವಾದ್ಯಮೇಳ, ವಿವಿಧ ಜಾನಪದ ಕಲಾತಂಡಗಳು, ಅಶ್ವಸಹಿತವಾಗಿ ಮಹಾರಥದ ಕಳಸದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಪ್ರಭುಲಿಂಗಯ್ಯ ಕಾಳಹಸ್ತಿಮಠ ದಂಪತಿಯಿಂದ ಬಂಗಾರ ಕಳಸದ ಪೂಜೆ, ಹುಚ್ಚಪ್ಪಹಿರಾಳ ದಂಪತಿಯಿಂದ ಉತ್ಸವಮೂರ್ತಿ ಪೂಜೆ ನಂತರ ಸಂಜೆ 5ಕ್ಕೆ ಮಹಾರಥೋತ್ಸವ ಜರುಗಲಿದೆ ಎಂದರು.

ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಜಗದ್ಗುರು ಬೂದೀಶ್ವರ ಸ್ವಾಮೀಜಿ, ಮುನವಳ್ಳಿಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ, ಗಂಗಾವತಿ ಕಲ್ಮಠದ ಡಾ|ಕೊಟ್ಟೂರ ಸ್ವಾಮೀಜಿ, ಉಪ್ಪಿನಬೆಟಗೇರಿ ಮುರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಅಮೀನಗಡ ಪ್ರಭುಶಂಕರೇಶ್ವರಮಠದ ಶ್ರೀಶಂಕರ ರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡಮುರುಘಾಮಠದ ಶ್ರೀ ಕಾಶೀನಾಥ ಸ್ವಾಮೀಜಿ,ಕುಂದರಗಿ ಅಡವಿಸಿದ್ದೇಶ್ವರಮಠದ ಶ್ರೀ ಅಮರಸಿದ್ದೇಶ್ವರಸ್ವಾಮೀಜಿ, ಕೋಟೆಕಲ್ಲ-ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಕಮತಗಿ ಹಿರೇಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುಂಟೋಜಿ ಹಿರೇಮಠದಶ್ರೀ ಚನ್ನವೀರ ಸ್ವಾಮೀಜಿ, ಕಮತಗಿ ಯಲ್ಲಮ್ಮದೇವಿ ದೇವಸ್ಥಾನದ ಮಾತೋಶ್ರೀ ಬಸವಣ್ಣೆಮ್ಮತಾಯಿ ಬಸರಕೋಡ ಸಾನ್ನಿಧ್ಯ ವಹಿಸುವರು ಎಂದರು. ಶ್ರೀ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ, ಯಲ್ಲಪ್ಪ ವಡ್ಡರ, ಮಹಾಂತೇಶ ಅಂಗಡಿ,ಶಿವಶಂಕರ ಬಡದಾನಿ ಹಾಜರಿದ್ದರು.

ಕಮತಪುರ ಉತ್ಸವದಂಗವಾಗಿ ಮಾ.3ರಂದು ಮಹಾರಥೋತ್ಸವ ಜರುಗಲಿದ್ದು, ಜಾತ್ರೆ ನಿಮಿತ್ತ ಬೆಳಗಿನ ಜಾವ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ. ಮರುದಿನ ಸಂಜೆ ಜಂಗೀ ನಿಕಾಲಿ ಕುಸ್ತಿ, ಮಾ.7ರಂದು ಕಳಸದ ಇಳಿಸುವ ಕಾರ್ಯಕ್ರಮ ನಡೆಯಲಿದೆ.-ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠ, ಕಮತಗಿ

Advertisement

Udayavani is now on Telegram. Click here to join our channel and stay updated with the latest news.

Next