ಹುಬ್ಬಳ್ಳಿ: ಮಲಪ್ರಭಾದಿಂದ ಹುಬ್ಬಳ್ಳಿ ನಗರಕ್ಕೆ ಹೆಚ್ಚುವರಿ ನೀರು ಪೂರೈಸುವ 26 ಕೋಟಿ ರೂ. ಯೋಜನೆ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ನಂತರ ನಗರಕ್ಕೆ 3-4 ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಮಹಾನಗರ ಪಾಲಿಕೆಯ 26 ಕೋಟಿ ರೂ. ಅನುದಾನದಲ್ಲಿ ಹೆಚ್ಚುವರಿ ನೀರು ಪೂರೈಕೆ ಯೋಜನೆ ಕಾಮಗಾರಿ ವೀಕ್ಷಿಸಿದ ನಂತರ ನವೀಲುತೀರ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ಮಿನಬಾವಿಯಲ್ಲಿ ನೀರು ಶುದ್ಧೀಕರಣ ಘಟಕ, ಮಲಪ್ರಭಾ ಜಾಕ್‌ವೆಲ್ನಲ್ಲಿ ಹೆಚ್ಚುವರಿ ನೀರೆತ್ತುವ ಯಂತ್ರ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಗಡುವು ನೀಡಲಾಗಿತ್ತು. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಬಹುತೇಕ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸುಮಾರು ಎರಡು ವರ್ಷಗಳ ಕಾಲ ರಾಜ್ಯ ಸರಕಾರ ಯೋಜನೆಗೆ ಅನುಮತಿ ನೀಡದ ಕಾರಣ ಈ ಯೋಜನೆ ನನೆಗುದಿಗೆ ಬೀಳಲು ಕಾರಣವಾಯಿತು. ಕಳೆದ ಆರೇಳು ತಿಂಗಳ ಹಿಂದೆ ಯೋಜನೆಗೆ ಅನುಮತಿ ನೀಡಿದ್ದು, ಯೋಜನೆ ಪೂರ್ಣಗೊಳ್ಳುವವರೆಗೆ ಜನತೆ ಸಮಸ್ಯೆ ಅನುಭವಿಸುವುದು ಅನಿವಾರ್ಯವಾಗಿದೆ. ಆದಷ್ಟು ಕಡಿಮೆ ಅವಧಿಯಲ್ಲಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಲಪ್ರಭಾ ನದಿಯಿಂದ 160 ಎಂಎಲ್ಡಿ ಜೊತೆಗೆ ಹೆಚ್ಚುವರಿಯಾಗಿ 40 ಎಂಎಲ್ಡಿ ನೀರು ದೊರೆತರೆ 3-4 ದಿನಗಳಿಗೊಮ್ಮೆ ಪೂರೈಸಲಾಗುವುದು ಎಂದು ವಿವರಿಸಿದರು.
ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಇಲ್ಲಿನ ಶಿರೂರ ಬಳಿಯ 40 ವರ್ಷದ ಹಿಂದಿನ ಅಕ್ವಡೆಟ್ ದುರಸ್ತಿ ಕಾರ್ಯ 12 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಎಆರ್‌ಎಂ-2 ಯೋಜನೆಗೆ ಸರಕಾರ ಒಪ್ಪಿಗೆ ನೀಡಿದರೆ ವಿತರಣ ಕಾಲುವೆ, ಸೀಳುಗಾಲುವೆ ದುರಸ್ತಿಯಾಗುವುದರಿಂದ ಕೊನೆ ಭಾಗದ ರೈತರಿಗೆ ನೀರು ದೊರೆಯಲಿದೆ. ವಿಸ್ತೃತ ಕ್ರಿಯಾ ಯೋಜನೆ ತಯಾರಿಸಿದ್ದು, ಸರಕಾರಕ್ಕೆ ಸಲ್ಲಿಸಬೇಕಿದೆ. ಕಳೆದ 7 ವರ್ಷದಿಂದ ನನೆಗುದಿಗೆ ಬಿದ್ದಿರುವ ಅಣ್ಣಿಗೇರಿ ಕುಡಿಯುವ ನೀರಿನ ಕೆರೆ ಕಾಮಗಾರಿಗೆ ಚಾಲನೆ ನೀಡುವ ಕೆಲಸ ಆಗಲಿದೆ ಎಂದು ತಿಳಿಸಿದರು.
ಜಲಮಂಡಳಿ ಮುಖ್ಯ ಅಭಿಯಂತ ಡಿ.ಎಲ್. ರಾಜು ಮಾತನಾಡಿ, ಹು-ಧಾ ಸೇರಿದಂತೆ ಕೆಲ ಗ್ರಾಮಗಳಿಗೆ ನಿತ್ಯ 160 ಎಂಎಲ್ಡಿ ನೀರು ಮಲಪ್ರಭಾದಿಂದ ಪೂರೈಸಲಾಗುತ್ತಿದೆ. ನೀರಸಾಗರದಿಂದ ದೊರೆಯುತ್ತಿದ್ದ 40 ಎಂಎಲ್ಡಿ ನೀರು 2016 ಸೆಪ್ಟೆಂಬರ್ ತಿಂಗಳಿನಿಂದ ಸ್ಥಗಿತಗೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ನೀರಸಾಗರ ಭರ್ತಿಗೆ ಅಗತ್ಯ ಕಾರ್ಯಗಳು ಕುರಿತು ಸರ್ವೇ ನಡೆಸಿ ವಿಸ್ತೃತ ವರದಿ ತಯಾರಿಸಲಾಗಿದೆ. ಅವಳಿ ನಗರದಲ್ಲಿ 1.60 ಲಕ್ಷ ಸಂಪರ್ಕಗಳಿದ್ದು, ಇದರಲ್ಲಿ 15 ಸಾವಿರ ಸಂಪರ್ಕಗಳಿಗೆ 24/7 ನೀರು ಪೂರೈಕೆಯಾಗುತ್ತಿದ್ದು, 40 ಎಂಎಲ್ಡಿ ನೀರು ದೊರೆಯುವುದರಿಂದ ಉಳಿದ 55 ಸಾವಿರ ಸಂಪರ್ಕಗಳಿಗೆ ನಿರಂತರ ನೀರು ಪೂರೈಕೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಪಾಲಿಕೆ ಆಯುಕ್ತ ಪ್ರಶಾಂತಕುಮಾರ ಮಿಶ್ರಾ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಮಹಾಪೌರ ವೀರಣ್ಣ ಸವಡಿ, ಪಾಲಿಕೆ ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಬಿಜೆಪಿ ಮುಖಂಡ ನಾಗೇಶ ಕಲಬುರ್ಗಿ ಇನ್ನಿತರರಿದ್ದರು.