Advertisement

ಹಿರಿಯರ ಸಂಪ್ರದಾಯ ಮರೆಯದಿರಿ: ಜಡೆ ಶ್ರೀ

04:26 PM Apr 08, 2019 | Naveen |

ಹುಬ್ಬಳ್ಳಿ: ಕಠಿಣ ದುಡಿಮೆ, ವಿಶಾಲ ಮನೋಭಾವ, ಸಂತಾನೋತ್ಪತ್ತಿಗೆ ಹಿಂದೇಟು ಹಾಕದ, ದೇಶಾಭಿಮಾನ, ಆತ್ಮವಿಶ್ವಾಸ, ಧೈರ್ಯ ಹಾಗೂ ಶಾಂತಿ ಕಳೆದುಕೊಳ್ಳದಿರುವ ಮುಂತಾದ ನಮ್ಮ ಹಿರಿಯರು ಸಮಾಜಕ್ಕೆ ನೀಡಿದ ಸಂಪ್ರದಾಯಗಳನ್ನು ಮರೆಯಕೂಡದು ಎಂದು ಮೌನಯೋಗಿ ಕಲಬುರಗಿ “ಸಮಾಧಾನ’ದ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ನುಡಿದರು.

Advertisement

ವರ್ಷವಿಡೀ ಮೌನವಿದ್ದು ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ದಿನ ಮಾತನಾಡುವ ಅವರು, ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆಗೆ ಒಳಗಾಗಿ ನಾವು ಕಠಿಣ ಪರಿಶ್ರಮ ಮರೆಯುತ್ತಿದ್ದೇವೆ. ಹಿಂದೆ ಮಹಿಳೆಯರಿಗೆ ಸಹಜ ಹೆರಿಗೆ ಆಗುತ್ತಿದ್ದವು. ಇದಕ್ಕೆಲ್ಲ ದುಡಿಮೆಯೇ ಕಾರಣ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಆದರೆ ಇಂದು ವೈದ್ಯರು ಒಂಭತ್ತು ತಿಂಗಳು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಹೇಳಿ ಶಸ್ತ್ರಚಿಕಿತ್ಸೆ ಮುಖಾಂತರವೇ ಹೆರಿಗೆ ಮಾಡಿಸಿ ಹಣ ಸುಲಿಯುತ್ತಿದ್ದಾರೆ. ಹಿಂದೆಯೆಲ್ಲ ಹೆರಿಗೆ ಸಮೀಪಿಸುತ್ತಿದ್ದ ದಿನಗಳಲ್ಲೂ ಕೆಲಸ ಮಾಡುತ್ತಿದ್ದರು.

ಗರ್ಭಿಣಿಯರು ಕಲ್ಲಲ್ಲಿ ಬೀಸುವುದನ್ನು ಮಾಡಿದರೆ ಸಹಜ ಹೆರಿಗೆ ಆಗುತ್ತದೆ. ಅದೇ ರೀತಿ ಆತ್ಮವಿಶ್ವಾಸ, ಧೈರ್ಯ ಹಾಗೂ ಶಾಂತಿಯನ್ನು ಕಳೆದುಕೊಳ್ಳದೆ ಮುನ್ನಡೆದರೆ ಏನೆಲ್ಲ ಸಾಧನೆ ಮಾಡಬಹುದು. ಇದಕ್ಕೆ ಹುಟ್ಟಿನಿಂದ ಅಂಧವಾಗಿ ಅಗಾಧ ಜ್ಞಾನ ರೂಪಿಸಿಕೊಂಡಿರುವ ಅಥಣಿಯ ಬಸವರಾಜ ಶಂಕರ ಉಮರಾಣಿಯೇ ಸಾಕ್ಷಿ ಹಾಗೂ ಮಾದರಿಯಾಗಿದ್ದಾರೆ ಎಂದರು.
ಸೈನಿಕ ಸೇವೆ ಕಡ್ಡಾಯವಾಗಲಿ: ಕೆಲವು ವಿದೇಶಗಳಲ್ಲಿ ಇರುವಂತೆ ನಮ್ಮ ದೇಶದಲ್ಲೂ ಸೈನಿಕ ಸೇವೆ ಕಡ್ಡಾಯವಾಗಬೇಕು. ಹೀಗಾದಲ್ಲಿ ಬಡವ ಶ್ರೀಮಂತರಲ್ಲದೇ ಎಲ್ಲರ ಮಕ್ಕಳು ದೇಶ ಸೇವೆಯಲ್ಲಿ
ತೊಡಗಲು ಸಾಧ್ಯವಾಗುತ್ತದೆ. ದೇಶದ ಸಲುವಾಗಿ ಮಕ್ಕಳನ್ನು ಕಳುಹಿಸಲು ಪೂರಕವಾಗಿ ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಎಂದು ಕರೆ ನೀಡಿದರು.

ಗೊಗ್ಗೆಹಳ್ಳಿಯ ಸಂಗಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಒಂದು ನಿಮಿಷ ಮೌನ ಒಂದು ಗಂಟೆಗೆ ಪ್ರೇರಣೆಯಾಗುವುದರಿಂದ ಆಧ್ಯಾತ್ಮ ಮೌನ, ಜ್ಞಾನ ಹಾಗೂ ಯೋಗ ಅಳವಡಿಸಿಕೊಳ್ಳುವುದರ ಮೂಲಕ ಸಂಸ್ಕಾರಯುತರಾಗಬೇಕು. ಆತ್ಮಶುದ್ಧಿಗೆ ಔಷಧಿ ಯಿಲ್ಲ. ನಡೆ-ನುಡಿಯೇ ಪರಿಹಾರ ಎಂದು ಹೇಳಿದರು.

Advertisement

ಜಡೆ ಹಿರೇಮಠ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮೂಡಿಯ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಗುರುವಿನ
ಕೃಪೆಯಿದ್ದಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು. ಇದೇ ವೇಳೆ ಅಂಧ ಪ್ರತಿಭೆ ಬಸವರಾಜ ಉಮರಾಣಿ ಪ್ರತಿಭೆ ಪ್ರದರ್ಶಿಸಿದರು. ಶತಮಾನದ ಕಾಲದಿಂದಲೂ ಯಾವ ದಿನಾಂಕ, ಯಾವ ವಾರ ಎನ್ನುವುದನ್ನು ಅರಳು ಹುರಿದಂತೆ ಹೇಳಿದರಲ್ಲದೇ ಗಣಿತವನ್ನು ಯಾರೂ ಊಹಿಸದ ರೀತಿಯಲ್ಲಿ ಪ್ರಸ್ತುತಪಡಿಸಿದರು. ನಂತರ ಮೌನಯೋಗಿಗಳು ಬಸವರಾಜ ಉಮರಾಣಿ ಅವರನ್ನು ಸನ್ಮಾನಿಸಿದರು.

ಮನೋ ವೈದ್ಯರಾದ ಡಾ| ಮಹೇಶ ಹಾಗೂ “ಮಾನವ ಕಂಪ್ಯೂಟರ್‌’ ಎಂದೇ ಖ್ಯಾತರಾದ ಬಸವರಾಜ ಉಮರಾಣಿ ಮಾತನಾಡಿದರು. ಶಿವಾನಂದ ಬಿರಾಜದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಭಗವತಿ ನಿರೂಪಿಸಿದರು.

ಮೊಬೈಲ್‌, ಟಿವಿ ಅವಶ್ಯಕತೆ ಇದ್ದಾಗ ಮಾತ್ರ ಬಳಸಿ. ಅದರಲ್ಲೂ ಮಕ್ಕಳ ಕೈಗೆ ಕೊಡಬೇಡಿ. ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಗಂಡು ಮಕ್ಕಳಿಗೆ 24 ವರ್ಷಕ್ಕೆ ಮದುವೆ ಮಾಡಿಸಿ. ತದನಂತರ ಓದಲಿ. ಹಲವರು ತಮ್ಮ ಮಕ್ಕಳು ಹಾಳಾಗಿರುವ ಬಗ್ಗೆ ನಿವೇದನೆ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿರುವುದರಿಂದ ಈ ಮಾತನ್ನು ಹೇಳಲಾಗುತ್ತಿದೆ. ಘಟನೆ ನಂತರ ಚಿಂತಿಸಿ ಫಲವಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು

Advertisement

Udayavani is now on Telegram. Click here to join our channel and stay updated with the latest news.

Next