Advertisement

ಯೋಗ ಭಾರತೀಯ ಸಂಸ್ಕೃತಿ-ಪರಂಪರೆಯ ದಿಕ್ಸೂಚಿ: ಶೆಟ್ಟರ

12:48 PM Jun 22, 2019 | Naveen |

ಹುಬ್ಬಳ್ಳಿ: ಯೋಗ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ದಿಕ್ಸೂಚಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದಿರಾ ಗಾಜಿನಮನೆಯಲ್ಲಿ ಸ್ಥಳೀಯ ಯೋಗ ಸ್ಪರ್ಶ ಪ್ರತಿಷ್ಠಾನ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ (ಎಸ್‌ಪಿವೈಎಸ್‌ಎಸ್‌) ಹುಬ್ಬಳ್ಳಿ ಶಾಖೆ ಹಾಗೂ ಆರೋಗ್ಯ ಭಾರತಿ, ಲೋಕಹಿತ ಟ್ರಸ್ಟ್‌, ಕನಕದಾಸ ಶಿಕ್ಷಣ ಸಂಸ್ಥೆ, ಆಯುಷ್‌ ಫೆಡರೇಶನ್‌ ಆಫ್‌ ಇಂಡಿಯಾ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗದಿಂದ ದೈಹಿಕ ಆರೋಗ್ಯ ಪಡೆದು ಆಸ್ಪತ್ರೆಯ ಖರ್ಚು ಉಳಿಸಬಹುದು. ಮಾನಸಿಕ ನೆಮ್ಮದಿಯಿಂದ ಜೀವನದಲ್ಲಿ ಉನ್ನತಿ ಸಾಧಿಸಲೂ ಸಾಧ್ಯ. ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವಾಗ ಪ್ರಧಾನಿ ಮೋದಿ ಅವರು ವಿಶ್ವ ಯೋಗ ದಿನ ಆಚರಣೆ ಮಾಡಿದ್ದು ಸ್ತುತ್ಯಾರ್ಹವಾಗಿದೆ. ಇದರಿಂದ ಯುವಕರು ನಮ್ಮ ಸಂಸ್ಕೃತಿ, ಪರಂಪರೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಯೋಗವನ್ನು ಕಳೆದ 15 ವರ್ಷಗಳಿಂದ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದು, ಒತ್ತಡದ ಪರಿಸ್ಥಿತಿಯಲ್ಲೂ ಸ್ಥಿತಪ್ರಜ್ಞೆಯಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ವಿಶ್ವಯೋಗ ದಿನವನ್ನು ವಿಶ್ವ ಸಂಸ್ಥೆಯ 177 ದೇಶಗಳು ಅನುಮೋದಿಸಿ ಆಚರಿಸುವುದಕ್ಕೆ ಕಾರಣೀಭೂತರಾದ ನರೇಂದ್ರ ಮೋದಿ ಶ್ಲಾಘನಾರ್ಹ ಕೊಡುಗೆ ನೀಡುತ್ತಿದ್ದಾರೆ. ನಗರದ ನೃಪತುಂಗ ಬೆಟ್ಟದ ಹತ್ತಿರ ಧ್ಯಾನಮಂದಿರ ಪ್ರಾರಂಭಿಸಿದ್ದು, ಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಎಸ್‌ಪಿವೈಎಸ್‌ಎಸ್‌ ಮಂಗಳೂರು ಪ್ರಾಂತ ಸಂಚಾಲಕ ರವೀಶ ಅಣ್ಣ ಮಾತನಾಡಿ, ಯೋಗ ಕೇವಲ ಆರೋಗ್ಯ ದೃಷ್ಟಿಯಿಂದ ಮಾಡುವ ದೈಹಿಕ ಕಸರತ್ತಲ್ಲ. ಅದು ಒಂದು ಸಂಪೂರ್ಣ ಜೀವನಶೈಲಿ, ಸಂಸ್ಕಾರ ಆಗಿದೆ. ವಿಶ್ವ ಯೋಗ ದಿನವನ್ನು ಒಂದು ದಿನದ ಉತ್ಸವವಾಗಿ ಆಚರಿಸುವುದಲ್ಲ, ನಿತ್ಯ ನಿರಂತರವಾಗಿ ಜೀವನದ ಭಾಗವಾಗಬೇಕು. ಯೋಗವನ್ನು ಬಾಲ್ಯದಿಂದಲೇ ಅಳವಡಿಸುವುದು ಅತೀ ಸೂಕ್ತ ಎಂದರು.

Advertisement

ಲೋಕಹಿತ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀಧರ ನಾಡಿಗೇರ ಮಾತನಾಡಿ, ಕುಟುಂಬ ಪದ್ಧತಿ, ಸಾಮಾಜಿಕ ಸಾಮರಸ್ಯ, ಆಧ್ಯಾತ್ಮ, ಯೋಗ, ಪ್ರಾಣಾಯಾಮ ಮೊದಲಾದ ಅಪೂರ್ವ ಕೊಡುಗೆಗಳನ್ನು ಭಾರತ ವಿಶ್ವಕ್ಕೆ ನೀಡಿದೆ. ವಿಶ್ವಗುರು ಪಟ್ಟ ಪಡೆಯಲು ಯೋಗ ಪ್ರಮುಖ ಸಾಧನವಾಗಲಿದೆ ಎಂದು ಹೇಳಿದರು.

ಡಾ| ಸಿದ್ದನಗೌಡ ಪಾಟೀಲ ಮಾತನಾಡಿದರು. ಹಿರಿಯ ಯೋಗ ಶಿಕ್ಷಣ ಪ್ರಮುಖ ಸೋಮಲಿಂಗ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ವಿದ್ಯಾ ಸಂಸ್ಥೆಯ ಶಾಂತಣ್ಣಾ ಕಡಿವಾಳ, ಡಾ| ಸಂದೀಪ ಕುಲಕರ್ಣಿ, ದಯಾನಂದ ಮಗಜಿಕೊಂಡಿ, ಕಾರ್ಯಕ್ರಮ ಸಂಚಾಲಕ ಯಶವಂತ ಚವ್ಹಾಣ, ಸಂಚಾಲಕಿ ಪ್ರಮೀಳಾ ಭಟ್ ಮೊದಲಾದವರಿದ್ದರು.

ಯೋಗ-ಪ್ರಾಣಾಯಾಮ ಅಭ್ಯಾಸದಲ್ಲಿ 1000ಕ್ಕೂ ಅಧಿಕ ಯೋಗಾಸಕ್ತರು ಪಾಲ್ಗೊಂಡಿದ್ದರು. ಜಯಶ್ರೀ ಹಡಪದ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಕೈಲಾಸ ಹಿರೇಮಠ ಸ್ವಾಗತಿಸಿದರು. ಶ್ರೀಮತಿ ಅಮರಾವತಿ ನಿರೂಪಿಸಿದರು. ಪವನ ಸಾರಥಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next