Advertisement

ಬೀದಿಬದಿ ವ್ಯಾಪಾರಿಗಳಿಂದ ಪಾಲಿಕೆಗೆ ಮುತ್ತಿಗೆ

12:37 PM Jul 18, 2019 | Naveen |

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಕೆಇಸಿ ಎದುರು ಸನ್ಮಾರ್ಗ ಕಾಲೋನಿ (ಗಾಂಧಿ ನಗರ)ಯಲ್ಲಿ ವಾರದ ಸಂತೆ ಮುಂದುವರಿಸಬೇಕೆಂದು ಒತ್ತಾಯಿಸಿ ಬೀದಿಬದಿ ವ್ಯಾಪಾರಿಗಳು ಬುಧವಾರ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಕಳೆದ 24 ವರ್ಷಗಳಿಂದ ಸನ್ಮಾರ್ಗ ಕಾಲೋನಿಯಲ್ಲಿ ಪ್ರತಿ ರವಿವಾರ ಸಂತೆ ನಡೆಯುತ್ತಾ ಬಂದಿದೆ. ಆದರೆ ಬೆರಳೆಣಿಕೆಯ ಕೆಲ ನಾಗರಿಕರು ಸಂತೆಯಿಂದ ತೊಂದರೆಯಾಗುತ್ತ್ತಿದೆ ಎಂದು ಹೇಳಿದ್ದನ್ನು ನೆಪವಾಗಿಟ್ಟುಕೊಂಡು ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆ ಕಳೆದ ನಾಲ್ಕು ವಾರಗಳಿಂದ ಸಂತೆ ನಡೆಸಲು ಬಿಡುತ್ತಿಲ್ಲ. ಸಂತೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತಿಲ್ಲ. ಇದರಿಂದ ಆ ಪ್ರದೇಶದ ನಾಗರಿಕರಿಗೆ ಹಾಗೂ ಸಂತೆಯನ್ನೆ ನಂಬಿಕೊಂಡಿರುವ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ.

ಕೆಇಸಿ, ಗೋಕುಲ, ತಾರಿಹಾಳ, ರೇಣುಕಾ ನಗರ, ಕುಮಾರ ಪಾರ್ಕ್‌, ಸೆಂಟ್ರಲ್ ಎಕ್ಸಾಯಿಜ್‌ ಕಾಲೋನಿ, ಅರ್ಜುನ ವಿಹಾರ, ಮೊರಾರ್ಜಿ ನಗರ, ಆರ್‌.ಎಂ. ಲೋಹಿಯಾ ನಗರ ಸೇರಿದಂತೆ ಮುಂತಾದ ಪ್ರದೇಶದ ಜನರು ಕೆಇಸಿ ಎದುರಿನ ಸನ್ಮಾರ್ಗ ಕಾಲೋನಿ ವಾರದ ಸಂತೆಯನ್ನೆ ನಂಬಿಕೊಂಡಿದ್ದಾರೆ. ಈ 8-10 ಬಡಾವಣೆಗಳಲ್ಲಿ ಬಹುತೇಕ ನೌಕರರು, ಮಧ್ಯಮ ಕುಟುಂಬಗಳು ವಾಸಿಸುವ ಪ್ರದೇಶಗಳಾಗಿದ್ದು, ನಗರದ ಮುಖ್ಯ ಮಾರುಕಟ್ಟೆಗಳು ದೂರವಾಗುವುದರಿಂದ ವಯಸ್ಸಾದ ನಾಗರಿಕರು, ಅನಾರೋಗ್ಯ ಇರುವವರು, ಮಹಿಳೆಯರು ಮುಂತಾದವರಿಗೆ ದಶಕಗಳಿಂದ ಈ ಸಂತೆಯಿಂದ ಅನುಕೂಲವಾಗಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಸನ್ಮಾರ್ಗ ಕಾಲೋನಿ (ಗಾಂಧಿನಗರ)ಯಲ್ಲಿ ರವಿವಾರದ ವಾರದ ಸಂತೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕು.

ಹು-ಧಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷೆ ಹುಲಿಗೆಮ್ಮ ಚಲವಾದಿ, ಉಪಾಧ್ಯಕ್ಷ ಕತಾಲಸಾಬ್‌ ಮುಲ್ಲಾ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸದಸ್ಯರಾದ ಶಾಲಮ್ಮ ವಜ್ಜಣ್ಣವರ, ನೀಲವ್ವ ಗೌಡರ, ಚಂದ್ರವ್ವ ಬಂಡಿವಡ್ಡರ, ಸುಮಿತ್ರಾ ಚಲವಾದಿ, ಪ್ರೇಮ ರಾಠೊಡ, ರಸೂಲಸಾಬ ಕಂಚಗಾರ, ಪ್ರಭು ಎಮ್ಮೂಜಿ, ರಾಜೇಸಾಬ ಕೊಡ್ಲಿವಾಡ ಮೊದಲಾದವರಿದ್ದರು.

ಪ್ರಮುಖ ಬೇಡಿಕೆಗಳು
ಸನ್ಮಾರ್ಗ ಕಾಲೋನಿಯಲ್ಲಿ ನಡೆಯುವ ರವಿವಾರದ ವಾರದ ಸಂತೆಗೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಅದೇ ಸ್ಥಳದಲ್ಲಿ ಮುಂದುವರಿಸಬೇಕು. ಹು-ಧಾ ಮಹಾನಗರ ಪಾಲಿಕೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಮಿತಿ ರಚಿಸಬೇಕು. ಒಂದು ಲಕ್ಷ ಜನಸಂಖ್ಯೆ ಇರುವ ಪ್ರದೇಶಕ್ಕೊಂದು ಬೀದಿಬದಿ ವ್ಯಾಪಾರಸ್ಥರ ವಲಯ ಸಮಿತಿಗಳನ್ನು ನಿಯಮಾನುಸಾರ ರಚಿಸಬೇಕು. ಬೀದಿಬದಿ ವ್ಯಾಪಾರಸ್ಥರ ಸರ್ವೇ ನಡೆಸಿ ಎಲ್ಲಾ ಬೀದಿಬದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆಯಿಂದ ಗುರುತಿನ ಚೀಟಿ ನೀಡಬೇಕು. ವಾರದ ಸಂತೆ ಮುಗಿದ ನಂತರ ಉಳಿದ ತ್ಯಾಜ್ಯಗಳನ್ನು ಸಂಗ್ರಹಿಸಲು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಬೇಕು. ವಾರದ ಸಂತೆ ನಡೆಸುವ ಕುರಿತು ಸ್ಪಷ್ಟವಾದ ನಿಯಮಗಳನ್ನು ರೂಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next