ಹುಬ್ಬಳ್ಳಿ: ಜಲ ಸಂರಕ್ಷಣೆ, ನೀರಿನ ಸದ್ಬಳಕೆಯ ಸಹಭಾಗಿತ್ವ ಮಹದಾಸೆಯೊಂದಿಗೆ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಆರಂಭಿಸಲಾಗಿತ್ತು. ರಾಜ್ಯದಲ್ಲಿ ಇಲ್ಲಿವರೆಗೆ ನೋಂದಣಿಯಾದ ಒಟ್ಟು ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ಶೇ.50ರಷ್ಟು ಸಂಘಗಳು ನಿಷ್ಕ್ರಿಯವಾಗಿವೆ.
Advertisement
ನೀರಾವರಿ ಸೌಲಭ್ಯದಡಿ ಎಲ್ಲರಿಗೂ ಸಮಾನ ನೀರು ಹಂಚಿಕೆ, ಮುಖ್ಯವಾಗಿ ಕೊನೆ ಭಾಗದ ರೈತರಿಗೆ ನೀರು ತಲುಪಬೇಕು ಎಂಬ ಉದ್ದೇಶದಿಂದ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸ್ಪಷ್ಟ ರೂಪ ನೀಡಲಾಗಿತ್ತು. ಆರಂಭದಲ್ಲೇ ರಾಜಕೀಯ ಸೋಂಕು ಪಡೆದಂತಾಗಿದ್ದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ.
Related Articles
Advertisement
ನೀರಾವರಿ ಪ್ರದೇಶ ಎಷ್ಟು?: ತುಂಗಭದ್ರ ಪ್ರೊಜೆಕ್ಟ್ ಅಡಿಯಲ್ಲಿ ಸುಮಾರು 4,66,339 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೆ, ಮಲಪ್ರಭಾ-ಘಟಪ್ರಭಾ ಅಡಿಯಲ್ಲಿ 6,50,377 ಹೇಕ್ಟರ್, ಕಾವೇರಿ ಪ್ರೊಜೆಕ್ಟ್ ಅಡಿಯಲ್ಲಿ 7,00,558 ಹೆಕ್ಟೇರ್, ಕೃಷ್ಣ ಮೇಲ್ದಂಡೆ ಪ್ರೊಜೆಕ್ಟ್ ಅಡಿಯಲ್ಲಿ 6,48,200 ಹೆಕ್ಟೇರ್, ಭದ್ರಜಲಾಶಯ ಪ್ರೊಜೆಕ್ಟ್ ಅಡಿಯಲ್ಲಿ 2,66,217 ಹೆಕ್ಟೇರ್, ನೀರಾವರಿ ವಲಯ ಪ್ರೊಜೆಕ್ಟ್ ಅಡಿಯಲ್ಲಿ 1,45,066 ಹೆಕ್ಟೇರ್ ನೀರಾವರಿ ಪ್ರದೇಶ ಬರುತ್ತದೆ.
ನೀರಾವರಿ ಪ್ರದೇಶದಲ್ಲಿ ನೀರಿನ ನಿರ್ವಹಣೆ ಹಾಗೂ ನೀರಿನ ಸದ್ಬಳಕೆ ಉದ್ದೇಶದೊಂದಿಗೆ ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ಆರಂಭಿಸಲಾಗಿತ್ತು. ಇದುವರೆಗೆ ರಾಜ್ಯದಲ್ಲಿ ಸುಮಾರು 3,235 ನೀರು ಬಳಕೆದಾರರ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಇದರಲ್ಲಿ 2,313 ಸಂಘಗಳು ಪರಸ್ಪರ ತಿಳಿವಳಿಕೆ ಒಡಂಬಡಿಕೆ ಮಾಡಿಕೊಂಡಿವೆ. ಇದರಲ್ಲಿ 1,669 ಸಂಘಗಳು ಮಾತ್ರ ವಾಸ್ತವಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.
ರಾಜ್ಯದಲ್ಲಿನ ನೀರಾವರಿ ಪ್ರದೇಶ ವ್ಯಾಪ್ತಿಗನುಗುಣವಾಗಿ ನೀರಾವರಿ ನಿರ್ವಹಣೆಗೆ ಸುಮಾರು 5,000ಗಳ ರಚನೆ ಗುರಿ ಹೊಂದಲಾಗಿತ್ತು. ಇದುವರೆಗೆ ನೋಂದಣಿ ಆಗಿದ್ದು 3,235 ಮಾತ್ರ ಅದರಲ್ಲಿ ಅರ್ಧದಷ್ಟು ಸಂಘಗಳಲ್ಲಿ ಸಮರ್ಪಕ ಕಾರ್ಯನಿರ್ವಹಣೆ ತೋರದೆ ನಿಷ್ಕ್ರಿಯತೆಗೆ ಜಾರಿವೆ. ಇದ್ದ 1,669 ಸಂಘಗಳಲ್ಲಿಯ ಕೆಲವೊಂದು ಅತ್ಯುತ್ತಮ ಸಾಧನೆ ತೋರಿದರೆ, ಇನ್ನು ಕೆಲವು ಹಲವು ಸಮಸ್ಯೆಗಳ ಸುಳಿಗೆ ಸಿಲುಕಿವೆ. ಸಮಸ್ಯೆಗಳಿಂದ ಹೊರಬರಲು ಸೆಣಸುತ್ತಿವೆ.
ನೀರನ ಬಳಕೆ ಸಾಮರ್ಥ್ಯ ಹೆಚ್ಚಳ, ನೀರಿನ ಹಂಚಿಕೆಯಲ್ಲಿ ಸಮಾನತೆ, ಭೂಮಿ-ನೀರಿನ ಉತ್ಪಾದಕತೆ ಹೆಚ್ಚಿಸುವುದು, ನೀರಿನ ಬಳಕೆಯಲ್ಲಿ ಆರ್ಥಿಕತೆ ಮಿತವ್ಯಯ ಅರಿವು, ನೆಲ-ಜಲ ಸಂರಕ್ಷಣೆ, ಬೆಳೆ ಉತ್ಪಾದಕತೆ ಹಾಗೂ ಆದಾಯ ಹೆಚ್ಚಳದ ಮೂಲಕ ರೈತರ ಒಟ್ಟಾರೆ ಕ್ಷೇಮಾಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ನೀರಾವರಿ ನಿರ್ವಹಣೆಯಲ್ಲಿ ರೈತರು, ಬಳಕೆದಾರರ ಸಹಭಾತ್ವವನ್ನು ಪರಿಣಾಮಕಾರಿಯಾಗಿ ಹೊಂದುವ ಮಹತ್ವದ ಉದ್ದೇಶದೊಂದಿಗೆ ಆರಂಭವಾಗಿದ್ದ ನೀರು ಬಳಕೆದಾರರ ಸಹಕಾರ ಸಂಘಗಳಲ್ಲಿ ಇಂದು ಅನೇಕವೂ ಇದ್ದು ಇಲ್ಲದ ಸ್ಥಿತಿಗೆ ತಲುಪಿದ್ದು, ಅವುಗಳ ಪುನಶ್ಚೇತನಕ್ಕೆ ಸರ್ಕಾರ ಪ್ರಮಾಣಿಕ ಯತ್ನ ತೋರಬೇಕಿದೆ. ಜತೆಗೆ ಪಾಲುದಾರರು ತಮ್ಮ ಸಕ್ರಿಯತೆ ತೋರಬೇಕಾಗಿದೆ.
ರಾಜಕೀಯ ಮುಕ್ತವಾಗಲಿನೀರು ಬಳಕೆದಾರರ ಸಹಕಾರ ಸಂಘಗಳ ಆರಂಭಿಕ ಸಂದರ್ಭದಲ್ಲೇ ಇವುಗಳನ್ನು ರಾಜಕೀಯ ಗಂಜಿ ಕೇಂದ್ರ ಮಾದರಿಯಲ್ಲಿ ಬಿಂಬಿಸುವ ಯತ್ನ ನಡೆದಿತ್ತು. ಇದರಿಂದಾಗಿಯೇ ಸಂಘದ ಮುಖ್ಯಸ್ಥನ ಬೆಂಬಲಿಸುವ ಪಕ್ಷದ ಆಧಾರದಲ್ಲೇ ಅವುಗಳನ್ನು ನೋಡಿದವರೆ ಹೆಚ್ಚು. ಆ ಪಕ್ಷಗಳ ಬೆಂಬಲಿಗರೇ ಸಂಘದಲ್ಲಿ ಮೇಲುಗೈ ಪಡೆದು ಉದಾಹರಣೆಗಳು ಇಲ್ಲದಿಲ್ಲ. ನೀರು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಜಾತಿ, ಮತ, ಧರ್ಮ, ಪಕ್ಷಗಳನ್ನು ಮೀರಿದ್ದು ಎಂಬ ತಿಳಿವಳಿಕೆ ಬರಬೇಕಾಗಿದೆ. ಮೂಲ ಉದ್ದೇಶದ ಅರಿವಿನೊಂದಿಗೆ ಸಂಘಗಳನ್ನು ಆದಷ್ಟು ರಾಜಕೀಯ ಸೋಂಕಿನಿಂದ ಮುಕ್ತವಾಗಿಸಬೇಕಿದೆ. ಜಾಗತಿಕವಾಗಿ ಜಲಕ್ಷಾಮ ತೀವ್ರತೆ ಪಡೆಯುತ್ತಿದೆ. ನಗರಗಳು ಬೆಳೆದಂತೆ ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂಬಂತೆ ಜಲಾಶಯಗಳ ಮೇಲೆ ಅವಲಂಬನೆ-ಒತ್ತಡ ಹೆಚ್ಚುತ್ತಿದ್ದು, ಕೃಷಿಗೆ ನೀರು ಕೊರತೆ ಹೆಚ್ಚುತ್ತಲೇ ಸಾಗುತ್ತಿದೆ. ಎರಡು ಬೆಳೆಗಳಿಗೆ ನೀರು ಸಿಗುತ್ತಿರುವ ಪ್ರದೇಶದ ಕೃಷಿ ಒಂದೇ ಬೆಳೆಗೆ ಬಂದು ನಿಂತಿದೆ. ಒಂದು ಬೆಳೆ ಬೆಳೆಯುವರಿಗೆ ನೀರಿಲ್ಲದೆ, ನೀರಾವರಿ ಸೌಲಭ್ಯ ಹೊಂದಿದ್ದರೂ ಮಳೆಗಾಗಿ ಮುಗಿಲು ನೋಡಬೇಕಾಗಿದೆ. ಜಲಕ್ಷಾಮ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಜಲ ಸಂರಕ್ಷಣೆ, ಸದ್ಬಳಕೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಜಲಜಾಗೃತಿ, ಲಭ್ಯ ನೀರಿನ ಸದ್ಬಳಕೆ ನಿಟ್ಟಿನಲ್ಲಿ ಅರಿವಿನ ಅಭಿಯಾನದಡಿ ‘ಉದಯವಾಣಿ’ಯ ಯತ್ನವಿದು.