ಹುಬ್ಬಳ್ಳಿ: ಯುವಕರಿದ್ದರೆ ದೇಶ. ದೇಶವಿದ್ದರೆ ಯುವಕರು. ಆದ್ದರಿಂದ ಯುವ ಜನಾಂಗ ಸದಾ ತಮ್ಮಲ್ಲಿನ ಶಕ್ತಿ ಸದ್ಬಳಕೆ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಕೆ.ಎಂ. ಹೊಸಮನಿ ಹೇಳಿದರು.
ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿಯಲ್ಲಿ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ನೆಸ್ಸೆಸ್ ಕೋಶ, ಕೆಯುಡಿ, ಕೆಎಸ್‌ಎಸ್ ಸಮಿತಿ ಗದಗ-ಹುಬ್ಬಳ್ಳಿ, ಕೆಎಸ್‌ಎಸ್ ಪದವಿ ಮತ್ತು ಬಿಎಸ್‌ಡಬ್ಲ್ಯು, ಎನ್‌ಎಸ್‌ಎಸ್ ಘಟಕಗಳು, ನರೇಂದ್ರ ಯುವಕ ಮಂಡಳ ಹುಬ್ಬಳ್ಳಿ, ವಿನೂತನ ಯುವ ಮಂಡಳ ಶೇರೆವಾಡ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಜಗತ್ತಿನ ಉತ್ತಮ ನಡವಳಿಕೆಯಲ್ಲಿ ಹೆಚ್ಚು ಮಹತ್ವ ಪಡೆದಿದ್ದು, ಯುವಕರು ಏನನ್ನಾದರೂ ಸಾಧಿಸಬೇಕಾದರೆ ಏಕಾಗ್ರತೆ, ದೃಢ ನಿಶ್ಚಯ ಅವಶ್ಯ. ಭಾರತೀಯ ಪುರಾತನ ಗ್ರಂಥಗಳು, ಸ್ವಾಮಿ ವಿವೇಕಾನಂದರ ಚಿಂತನೆಗಳು, ಅವರ ದಿವ್ಯತ್ವದ ಶಕ್ತಿ ವಿಶ್ವಕ್ಕೆ ಸಾರಿ ಸಾರಿ ಹೇಳುತ್ತವೆ. ವಿವೇಕಾನಂದರು ಷಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತಿಗೆ ಹಿಂದೂ ಧರ್ಮ ತೋರಿಸಿಕೊಟ್ಟು ಇಂದಿಗೂ ವಿಶ್ವಕ್ಕೆ ಪರಿಚಿತರಾಗಿದ್ದಾರೆ. ಯುವಕರ ಮನಸ್ಸು ಉತ್ಸಾಹದಿಂದ, ಸದಾ ಲವಲವಿಕೆಯಿಂದ ಕೂಡಿರಬೇಕು. ಮನಸ್ಸು ದೃಢವಾಗಿಟ್ಟುಕೊಂಡು ಅದಕ್ಕೆ ಉತ್ತೇಜನ ನೀಡಿ ಸ್ವಾರ್ಥಕ್ಕಿಂತ ಪರರ ಹಿತವೇ ಶ್ರೇಷ್ಠ ಎಂದು ಭಾವಿಸಬೇಕು ಎಂದರು.
ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಜೀವನದಲ್ಲಿ ಶ್ರದ್ಧೆ, ನಿಷ್ಠೆ, ಆತ್ಮವಿಶ್ವಾಸ ಅಳವಡಿಸಿಕೊಳ್ಳವುದರಿಂದ ಸಾಧನೆಯ ಫಲ ನಮಗೆ ದೊರೆಯುತ್ತದೆ. ಯುವ ಶಕ್ತಿ ಹಾಳಾಗದಂತೆ ನೋಡಿಕೊಳ್ಳುವುದು ಶಿಕ್ಷಕರು ಮತ್ತು ಗುರು-ಹಿರಿಯರ ಆದ್ಯ ಜವಾಬ್ದಾರಿಯಾಗಿದೆ. ಯುವಕರು ವಿವೇಕಾನಂದರ ಚಿಂತನೆಗಳನ್ನು ತಮ್ಮಲ್ಲಿ ಕರಗತವಾಗಿಸಿಕೊಂಡಾಗ ದೇಶಕ್ಕೆ ಮಹಾನ್ ವಿಶ್ವಮಾನವರು ನೀಡಿದ ಕೋಡುಗೆಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.
ಉಪನ್ಯಾಸಕಿ ಡಾ| ಸುಜಾತಾ ಸೋಗೂರ ಮಾತನಾಡಿ, ಬಾಲ್ಯದಿಂದಲೇ ಭಾರತದ ಮಹಾನ್ ಗ್ರಂಥವಾದ ಭಗವದ್ಗೀತೆ ಬೋಧಿಸುವ ವ್ಯವಸ್ಥೆ ಇಂದಿನ ಯುವ ಸಮೂಹದಲ್ಲಿ ಬೆಳೆಸಬೇಕು ಎಂದರು.
ಎಪಿಎಂಸಿ ಅಧ್ಯಕ್ಷ ಜಗನ್ನಾಥ ಸಿದ್ದನಗೌಡ್ರ ಮಾತನಾಡಿ, ಯುವಕರು ಹೆಚ್ಚಿನ ಸಮಯ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡದೆ ನಮ್ಮ ನೆರೆ-ಹೊರೆಯ ಸಮಾಜದೊಂದಿಗೆ ಬೆರೆತು ಎಲ್ಲರೂ ಒಂದೇ ಎನ್ನುವ ಮನೋಭಾವ ತಾಳಬೇಕು ಎಂದು ಕಿವಿಮಾತು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ, ಕೆಎಸ್‌ಎಸ್ ಉಪಾಧ್ಯಕÒ ಶಾಂತಣ್ಣ ಕಡಿವಾಲ, ಎಚ್.ವಿ. ಬೆಳಗಲಿ, ಎಂ.ಬಿ. ದಲಪತಿ, ಪ್ರಾಚಾರ್ಯರಾದ ಡಾ| ಮಲ್ಲಿಕಾರ್ಜುನ ಕೆ., ಬಸವರಾಜ ಗೋರವರ ಮೊದಲಾದವರಿದ್ದರು. ಗಣ್ಯರು ಉತ್ತಮನಾಗು ಉಪಕಾರಿಯಾಗು ವಿವೇಕ ಬ್ಯಾಂಡ್ ಬಿಡುಗಡೆ ಮಾಡಿದರು.
ಪ್ರಾಚಾರ್ಯ ಪ್ರೊ| ಸಂದೀಪ ಬೂದಿಹಾಳ ಸ್ವಾಗತಿಸಿದರು. ಉಪನ್ಯಾಸಕ ಕೆ.ಬಿ. ಕುರಿ ನಿರೂಪಿಸಿದರು. ಲಿಂಗರಾಜ ನಿಡವಣಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಸ್. ಮಡ್ಲಿ ವಂದಿಸಿದರು.