Advertisement

ಹುಬ್ಬಳ್ಳಿ:ಅಭಿವೃದ್ಧಿ-ಉದ್ಯೋಗ ಸೃಷ್ಟಿಗೆ ಕೇಂದ್ರ ಬದ್ಧ-ಸಚಿವ ಡಾ| ಮುಂಜಪರ

02:42 PM May 17, 2023 | Team Udayavani |

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ವರ್ಷಕ್ಕೆ 10 ಲಕ್ಷ ಉದ್ಯೋಗಗಳನ್ನು ನೀಡುವ ಗುರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ದೇಶದ ಅಭಿವೃದ್ಧಿ, ನಿರೋದ್ಯೋಗಿಗಳಿಗೆ ಉದ್ಯೋಗದಂತಹ ಹಲವು ವಿಚಾರಗಳಲ್ಲಿ ಪ್ರಧಾನಿ ಹಾಗೂ ನಮ್ಮ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಯುಷ್‌ ಇಲಾಖೆ ರಾಜ್ಯ ಸಚಿವ ಡಾ| ಮುಂಜಪರ ಮಹೇಂದ್ರಭಾಯಿ ಕಲುಭಾಯಿ ಹೇಳಿದರು.

Advertisement

ಮಂಗಳವಾರ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಅಂಚೆ ಇಲಾಖೆಯು ಗೃಹ ಇಲಾಖೆ, ರೈಲ್ವೆ ಇಲಾಖೆ, ನಿಮಾನ್ಸ್‌ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ರೈಲ್ವೆ ಹಾಗೂ ಅಂಚೆ ಇಲಾಖೆಯಲ್ಲಿ ನೇಮಕ ಹೊಂದಿದವರಿಗೆ ನೇಮಕಾತಿ ಪತ್ರ ನೀಡಿ ಮಾತನಾಡಿದರು.

ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಅರ್ಹ ಯುವಕರಿಗೆ ಉದ್ಯೋಗ ನೀಡುವ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಂಡಿದ್ದಾರೆ. ಅದರಂತೆ ಪ್ರತಿ ವರ್ಷ 10 ಲಕ್ಷ ಉದ್ಯೋಗ ನೀಡುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. 5ನೇ ಉದ್ಯೋಗ ಮೇಳದ ಮೂಲಕ ಅವರ ಕನಸನ್ನು ನನಸು ಮಾಡಲಾಗುತ್ತಿದೆ. ದೇಶದಲ್ಲಿ 45 ಕಡೆ, ರಾಜ್ಯದಲ್ಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಈ ಉದ್ಯೋಗ ಮೇಳದ ಮೂಲಕ ನೇಮಕಾತಿ ಪತ್ರ ನೀಡಲಾಗುತ್ತಿದೆ. ದೇಶಾದ್ಯಂತ 71 ಸಾವಿರ ಯುವಕರಿಗೆ ನೇಮಕಾತಿ ಪತ್ರ ನೀಡಲಾಗಿದೆ.

ಹುಬ್ಬಳ್ಳಿಯಲ್ಲಿ 201 ಯುವಕರಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ತಿಳಿಸಿದರು. ನೇಮಕಾತಿ ಆದೇಶ ಪಡೆದ ಬೈಲಹೊಂಗಲದ ಅಭಿಷೇಕ ಚಿಪ್ಪಲಕಟ್ಟಿ ಮಾತನಾಡಿ, ಇಷ್ಟೊಂದು ಸರಳವಾಗಿ ನೌಕರಿ ದೊರೆಯಲಿದೆ ಎನ್ನುವ ನಿರೀಕ್ಷೆಯಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಆಧಾರದ ಮೇಲೆ ನೌಕರಿ ದೊರೆತಿದೆ. ಕಡಿಮೆ ಅವಧಿಯಲ್ಲಿ ನೇಮಕಾತಿ ಆದೇಶ ಪತ್ರ ನೀಡಿದ್ದು, ಅಂಚೆ ಇಲಾಖೆಯಲ್ಲಿ ಅದರಲ್ಲೂ ಕರ್ನಾಟಕದಲ್ಲೇ ಕೆಲಸ ಮಾಡುವ ಭಾಗ್ಯ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉದ್ಯೋಗ ಮೇಳದಲ್ಲಿ ಸಾಂಕೇತಿಕವಾಗಿ 25 ಅಭ್ಯರ್ಥಿಗಳಿಗೆ ಅಂಚೆ ಇಲಾಖೆ ಹಾಗೂ ರೈಲ್ವೆ ಇಲಾಖೆ ವಿವಿಧ ಹುದ್ದೆಗಳಿಗೆ ನೇಮಕ ಹೊಂದಿದವರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಯಿತು. ಈಗಾಗಲೇ ಮನೆಗೆ ನೇಮಕಾತಿ ಆದೇಶ ಪತ್ರ ಬಂದಿದ್ದು, ಕಾರ್ಯಕ್ರಮದ ಮೂಲಕ ಪುನಃ ನೇಮಕಾತಿ ಆದೇಶ ಪ್ರತಿ ನೀಡಿರುವುದು ಸಂತಸ ಮೂಡಿಸಿದೆ ಎಂದು ಅಭ್ಯರ್ಥಿಗಳು ಖುಷಿ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆಯ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಸಂತೋಷ ವರ್ಮಾ ಹಾಗೂ ಪೋಸ್ಟ್‌ ಮಾಸ್ಟರ್‌ ಜನರಲ್‌ ಶಶಿಕುಮಾರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next