ಹುಬ್ಬಳ್ಳಿ : ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಇಂಜಿನ್ ಬದಲಾವಣೆ ವೇಳೆ ಭಾರೀ ವಿಳಂಬವಾದ ಕಾರಣದಿಂದ ರಾಜ್ಯ ಪೊಲೀಸ್ ಇಲಾಖೆಯ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದ ಉತ್ತರ ಕರ್ನಾಟಕ ಭಾಗದ 2 ಸಾವಿರಕ್ಕೂ ಹೆಚ್ಚು ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಾಗದೆ ತೀವ್ರ ಆಘಾತ ಅನುಭವಿಸಬೇಕಾಗಿತು.
ಸಿಆರ್,ಡಿಆರ್ ಪರೀಕ್ಷೆಗೆಂದು ಉತ್ತರ ಕರ್ನಾಟಕ ಭಾಗದಿಂದ ಸಾವಿರಾರು ಅಭ್ಯರ್ಥಿಗಳು ರೈಲನ್ನೇರಿ ಬೆಂಗಳೂರು , ತುಮಕೂರು,ಮೈಸೂರಿನ ಪರೀಕ್ಷಾ ಕೇಂದ್ರಗಳತ್ತ ಪ್ರಯಾಣಿಸುತ್ತಿದ್ದರು.
ರೈಲು ವಿಳಂಬವಾದ ಬಳಿಕ ಪರೀಕ್ಷಾರ್ಥಿಗಳು ಹುಬ್ಬಳ್ಳಿ ನಿಲ್ದಾಣದಲ್ಲಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ರೈಲ್ವೇ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದರು. ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಡಿಸಿಪಿ ರೇಣುಕಾ ಸುಕುಮಾರ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಸಿ ಡಿಜಿ ಅವರೊಂದಿಗೆ ಮಾತನಾಡಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಭರವಸೆ ನೀಡಿ ಸಮಧಾನ ಪಡಿಸಿದರು.
ಕಂಬಾರಗಾವಿ ನಿಲ್ದಾಣದಲ್ಲಿ ಇಂಜಿನ್ ತೆಗೆದುಕೊಂಡು ಹೋದ ಸಿಬಂದಿ ತಡವಾಗಿ ಬಂದುದರಿಂದ 7 ಗಂಟೆಗಳ ಕಾಲ ವಿಳಂಳವಾಗಿದೆ ಎಂದು ತಿಳಿದು ಬಂದಿದೆ.
ಮರು ಪರೀಕ್ಷೆಗೆ ಅವಕಾಶ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಭ್ಯರ್ಥಿಗಳು ನಿರಾಶರಾಗುವುದು ಬೇಡ ಮರು ಪರೀಕ್ಷಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.