ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಂಸಿ ಯಾರ್ಡ್‌ನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕ್ಯಾಶ್ ಕೌಂಟರ್ ಸಿಬ್ಬಂದಿಗೆ ಚಾಕು ತೋರಿಸಿ ಹಣ ಸುಲಿಗೆಗೆ ಯತ್ನಿಸಿದ್ದ ಓರ್ವನನ್ನು ಪೊಲೀಸರು ಗುರುವಾರ ಸಂಜೆ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ನಗರದ ಗೋಪನಕೊಪ್ಪ ನಿವಾಸಿ ಮಂಜುನಾಥ ಹಬೀಬ ಎಂಬಾತನಾಗಿದ್ದು, ಪೊಲೀಸರು ಈತನಿಂದ ಸುಲಿಗೆಗೆ ಬಳಸಿದ್ದ ಎರಡು ಚಾಕು, ಬ್ಯಾಗ್ ವಶಪಡಿಸಿಕೊಂಡಿದ್ದಾರೆ.
ಸಂಜೆ 4:30ರ ಸುಮಾರಿಗೆ ಮುಖಕ್ಕೆ ಮಾಸ್ಕ್ ಹಾಕಿ, ಕೈಯಲ್ಲಿ ಚಾಕು ಹಿಡಿದುಕೊಂಡು ಬಂದಿದ್ದ ಈತನು ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು ಪ್ರಾಣ ಬೆದರಿಕೆ ಹಾಕಿ 10 ಲಕ್ಷ ರೂ. ಕೊಡು ಎಂದು ಹೇಳುತ್ತಲೇ ಕ್ಯಾಶ್ ಕೌಂಟರ್ ಹತ್ತಿರ ಹೋಗಿದ್ದಾನೆ. ಆಗ ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿದವನೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಕುರಿತು ಎಪಿಎಂಸಿ-ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣೆಯ ಇನ್ಸ್‌ಪೆಕ್ಟರ್ ಸಮಿವುಲ್ಲಾ ಕೆ. ಮತ್ತವರ ಸಿಬ್ಬಂದಿಗಳ ತಂಡವು ಬ್ಯಾಂಕ್ ಸಿಬ್ಬಂದಿಗಳ ಸಹಾಯದಿಂದ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಈ ಘಟನೆ ನಡೆದ ಐದು ತಾಸಿನೊಳಗೆ ಸುಲಿಗೆಗೆ ಯತ್ನಿಸಿದವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಈತನು ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದರಿಂದ ಈ ಸುಲಿಗೆ ಕೃತ್ಯಕ್ಕೆ ಮುಂದಾಗಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.