ಹುಬ್ಬಳ್ಳಿ: ನಮ್ಮ ಮಕ್ಕಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆಯದೇ ಕಲಿಸಿ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು. ಗೋಕುಲ ರಸ್ತೆ ಚವ್ಹಾಣ ಗ್ರೀನ್ ಗಾರ್ಡನ್ ನಲ್ಲಿ ರವಿವಾರ ಬಣಜಿಗ ಸಮಾಜದಿಂದ ನಡೆದ ಸಂಕ್ರಾತಿ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಇಂದಿನ ಮಕ್ಕಳ ಮೊಬೈಲ್ ಹುಳಗಳಾಗುತ್ತಿದ್ದು, ಅದನ್ನು ತಪ್ಪಿಸಬೇಕಾಗಿದೆ. ಅವರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು. ಭೂಮಿಯಲ್ಲಿ ಮನುಷ್ಯನಿಗೆ ಅಮೃತ ಸಿಗಲಿಲ್ಲ. ಆದರೆ ಹಾಲನ್ನು ಅಮೃತ ಎಂದರು. ಅದನ್ನು ತೆಗೆದುಕೊಂಡ ಮೇಲೆ ಬೇರೆನೂ ಬೇಡ. ಜೀವನದಲ್ಲಿ ಕಲಿಯುವುದು ಬಹಳಷ್ಟಿದೆ. ಕಲಿಯುವುದು ಎಂದಿಗೂ ಮುಗಿಯುವುದಿಲ್ಲ.
ನಾನು ಬಣಜಿಗ ಸಮಾಜದಲ್ಲಿ ಹುಟ್ಟಿರುವುದಕ್ಕೆ ಸಾರ್ಥಕವಾಯಿತು. ನನಗೆ ಚಿತ್ರರಂಗಕ್ಕೆ ಬಂದಾಗ ಹೆಸರು ಬದಲಾಯಿಸಿಕೊಳ್ಳಲು ಬಹಳ ಒತ್ತಡ ಬಂತು. ಆದರೆ ನಮ್ಮ ಹಿರಿಯರ ಹೆಸರು ಆದ್ದರಿಂದ ಬದಲಾವಣೆ ಅಸಾಧ್ಯ ಎಂದೆ. ನಮ್ಮ ಶಾಸ್ತ್ರ, ಸಂಪ್ರದಾಯ ನಮ್ಮ ಮಕ್ಕಳಿಗೆ ಕಲಿಸಿ ಕೊಡಬೇಕು. ಬಣಜಿಗರು ತಕ್ಕಡಿ ಜೊತೆಗೆ ಉತ್ತಮ ಸಂಸ್ಕೃತಿ ಸಂಪ್ರದಾಯ ಕಲಿಸಿ. ಉತ್ತಮ ಶಿಕ್ಷಣ ಕೊಡಿಸಿ ಎಂದರು.
ನಾನು ಇಲ್ಲಿಗೆ ಬಂದರೆ ಗಂಗೂಬಾಯಿ ಹಾನಗಲ್ಲ ಅವರ ನಿವಾಸಕ್ಕೆ ಹಾಗೂ ಸದ್ಗುರು ಸಿದ್ಧಾರೂಢಸ್ವಾಮಿ ದರ್ಶನ ಪಡೆಯದೇ ಹೋಗುವುದಿಲ್ಲ. ವೀರಶೈವ ಸಮಾಜ ಮಹಾವೃಕ್ಷ. ಅದರಡಿ ನಾವೆಲ್ಲರೂ ಚೆನ್ನಾಗಿದ್ದೇವೆ. ಕಾಲ ಬಂದಾಗ ಹೋಗಲೇಬೇಕು. ಇರುವಷ್ಟು ದಿನ ನಂದನವನವಾಗಿ ಇರಬೇಕು. ಸಂಕ್ರಮಣ ಒಂದೇ ದಿನವಾಗದೇ ಇರುವಷ್ಟು ದಿನ ಸಂಕ್ರಮಣವಾಗಿರಬೇಕು. ಆಡಿಸುವವನು ಅವನೇ, ಆಡುವವರು ನಾವು. ಎಷ್ಟೇ ಎತ್ತರ ಬೆಳೆದರೂ ಅಹಂಕಾರ ದೂರವಿಡಬೇಕು. ಆತ್ಮಕ್ಕೆ ಸಾವಿಲ್ಲ. ದೇಹಕ್ಕೆ ಸಾವಿದೆ ಎಂಬುದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಎ.ಸಿ.ವಾಲಿ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಜಯ ಕುಮಾರ ಬಿಸನಳ್ಳಿ, ರುದ್ರಣ್ಣ ಹೊಸಕೇರಿ, ಮಲ್ಲಿಕಾರ್ಜುನ ಸಾವುಕಾರ, ಶಿವಾನಂದ ನಿಂಗನೂರ, ಅಜ್ಜಪ್ಪ ಬೆಂಡಿಗೇರಿ, ವೀರೇಶ ಹಂಡಗಿ, ಈರಣ್ಣಾ ಕಾಡಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ರ, ಚೈತ್ರಾ ಶಿರೂರ, ಗುರುಪಾದಪ್ಪ ಶಿರೂರ, ಕಿರಣ ಹುಬ್ಬಳ್ಳಿ, ಸಿದ್ರಾಮ ಶಿರಗುಪ್ಪಿ ಇನ್ನಿತರರಿದ್ದರು.
ಐದಾರು ಮುಖ್ಯಮಂತ್ರಿ ನೀಡಿದ ಸಮಾಜ ಬಣಜಿಗ ಸಮಾಜ ಎಂಬುದನ್ನು ನಾವೆಲ್ಲರೂ ಹೆಮ್ಮೆಯಿಂದ ಹೇಳಬೇಕು. ಬಣಜಿಗ ಸಮಾಜದ ಶಕ್ತಿ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಎಲ್ಲರೂ ಸಂಘಟಿತರಾಗಿ ಮುನ್ನಡೆಯೋಣ. ಬಣಜಿಗ ಸಮಾಜದ ಯಾವುದೇ ಕಾರ್ಯಕ್ರಮ ಇದ್ದರು ನಾನು ಬರುತ್ತೇನೆ.
ದೊಡ್ಡಣ್ಣ, ಹಿರಿಯ ನಟ