ಹುಬ್ಬಳ್ಳಿ: ನಗರದ ಕಿಮ್ಸ್‌ನಲ್ಲಿ ಅಂದಾಜು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಕಾರ್ಯಾರಂಭಗೊಂಡಿದ್ದು,ಈ ಭಾಗದ ಬಡ ರೋಗಿಗಳ ಉತ್ತಮ ವೈದ್ಯಕೀಯ ಚಿಕಿತ್ಸಾ ಸೌಲಭ್ಯದ ಕನಸು ನನಸಾಗಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಅಡಿ 120 ಕೋಟಿ ರೂ. ಹಾಗೂ ರಾಜ್ಯ ಸರಕಾರದ 30 ಕೋಟಿ ರೂ. ಅನುದಾನ ಸೇರಿ ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ಅಂದಾಜು 6.5 ಎಕರೆ ಜಾಗದಲ್ಲಿ 200 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಮಾರ್ಚ್ 6ರಂದು ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯಿಂದಲೇ ಡಿಜಿಟಲ್ ತಂತ್ರಜ್ಞಾನ ಮೂಲಕ ಉದ್ಘಾಟಿಸಿದ್ದರು.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಾಸಿಕ್ ಮೂಲದ ಹರ್ಷ ಕನ್‌ಸ್ಟ್ರಕ್ಷನ್ ಕಂಪನಿ ಅಂದಾಜು 1.70 ಲಕ್ಷ ಚದುರಡಿ ವಿಸ್ತೀರ್ಣದಲ್ಲಿ ಜಿ+5 ಮಾದರಿಯಲ್ಲಿ ನಿರ್ಮಾಣ ಮಾಡಿದೆ. ಕೇಂದ್ರ ಸರಕಾರ ಸ್ವಾಮ್ಯದ ಹೈದರಾಬಾದ್ ಮೂಲದ ಎಚ್ಎಲ್ಎಲ್-ಹೈಟ್ಸ್ ಕಂಪನಿ ಈ ಕಾಮಗಾರಿಯ ನಿರ್ವಹಣೆ ಮಾಡುತ್ತಿದೆ. ಈಗಾಗಲೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಶೇ.90ಕ್ಕೂ ಅಧಿಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಶಸ್ತ್ರಚಿಕಿತ್ಸಾ ಘಟಕ ಕಾಮಗಾರಿ ಸೇರಿದಂತೆ ವೈದ್ಯಕೀಯ ಉಪಕರಣಗಳ ಅಳವಡಿಕೆ ಹಾಗೂ ಸಿಬ್ಬಂದಿ ನೇಮಕ ಬಾಕಿ ಉಳಿದಿದೆ. ಜತೆಗೆ ಇನ್ನು ಕೆಲ ವೈದ್ಯಕೀಯ ಉಪಕರಣಗಳು ಬರಬೇಕಿದೆ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ದೆಹಲಿಯ ಪ್ರತ್ಯೇಕ ತಂಡವೇ ಇವುಗಳನ್ನು ಅಳವಡಿಸಲಿದೆ. ವರ್ಷಾಂತ್ಯದೊಳಗೆ ಇದು ಪೂರ್ಣಗೊಳ್ಳಬಹುದು. ಸದ್ಯ ಶಸ್ತ್ರಚಿಕಿತ್ಸಾ ಘಟಕದ ಕಾಮಗಾರಿ ಪೂರ್ಣಗೊಂಡರೆ ನಗರದಲ್ಲಿನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಲು ಕಿಮ್ಸ್‌ನ ಆಡಳಿತ ಮಂಡಳಿಯವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ನಡೆಯುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಾಮಗಾರಿ ತುಲನೆ ಮಾಡಿದರೆ ಹುಬ್ಬಳ್ಳಿಯಲ್ಲಿನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಲ್ಲಿನ ಆಸ್ಪತ್ರೆಗಳ ಕಾಮಗಾರಿ ಇನ್ನು ಬಹಳಷ್ಟು ಬಾಕಿಯಿದೆ. ಹುಬ್ಬಳ್ಳಿಯಲ್ಲಿನ ಕಟ್ಟಡ ಕಾಮಗಾರಿ ನಿರ್ವಹಣೆ ಹೊತ್ತಿರುವ ಹರ್ಷ ಕಂಪೆನಿಯವರು ಬಾಕಿ ಉಳಿದಿರುವ ಕಾಮಗಾರಿಯನ್ನು ಭರದಿಂದ ಸಾಗಿಸುತ್ತಿದ್ದು, ಆಗಸ್ಟ್ ಇಲ್ಲವೆ ಸೆಪ್ಟಂಬರ್ ಮಾಸಾಂತ್ಯದೊಳಗೆ ಪೂರ್ಣಗೊಳಿಸಿ, ಕಿಮ್ಸ್‌ಗೆ ಹಸ್ತಾಂತರಿಸುವುದಾಗಿ ಹೇಳಿದೆ ಎಂದು ತಿಳಿದು ಬಂದಿದೆ.
ಯಾವ್ಯಾವ ಚಿಕಿತ್ಸೆ ಲಭ್ಯ: ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಆರಂಭಿಸಲಾದ ಒಪಿಡಿ ವಿಭಾಗದಲ್ಲಿ ರೋಗಿಗಳಿಗೆ ನೆಫ್ರಾಲಜಿ, ಶಸ್ತ್ರಚಿಕಿತ್ಸೆಯ ಗ್ಯಾಸ್ಟ್ರೋಎಂಟರಾಲಜಿ, ಯುರೋಲಜಿ, ಪಿಡ್ರಿಯಾಟ್ರಿಕ್ ಸರ್ಜರಿ, ನರವಿಜ್ಞಾನ (ನ್ಯೂರೊಲಜಿ), ನರವಿಜ್ಞಾನ ಶಸ್ತ್ರಚಿಕಿತ್ಸೆ, ಲ್ಯಾಬ್ ಮತ್ತು ಫಾರ್ಮಸಿ, ಇಂಜೆಕ್ಷನ್ ಮತ್ತು ಡ್ರೆಸ್ಸಿಂಗ್, ಕನ್ಸಲ್ಟಿಂಗ್ ರೂಮ್ ಸೌಲಭ್ಯ ದೊರೆಯಲಿದೆ. ಕಿಮ್ಸ್‌ನ ಆಡಳಿತ ಮಂಡಳಿ ಇದ್ದ ಸಿಬ್ಬಂದಿಯಲ್ಲಿಯೇ ಸೂಪರ್ ಸ್ಪೆಶಾಲಿಟಿ ಒಪಿಡಿ ವಿಭಾಗ ಆರಂಭಿಸಿದೆ.
ಈ ವಿಭಾಗದಲ್ಲಿ ವೈದ್ಯರು ರೋಗಿಗಳನ್ನು ತಪಾಸಣೆ ಮಾಡಿ, ಅವಶ್ಯವಾದರೆ ದಾಖಲು ಮಾಡಬಹುದು. ಅಲ್ಲಿಯೇ ರಕ್ತ ಸಂಗ್ರಹಣೆ, ಒಪಿಡಿ ಚೀಟಿ ಮಾಡುವುದು, ಸಣ್ಣ-ಪುಟ್ಟ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಇದ್ದರೆ ಅಲ್ಲಿಯೇ ಮಾಡಬಹುದಾಗಿದೆ. ದೊಡ್ಡ ಪ್ರಮಾಣದ್ದಾದರೆ ಮತ್ತೆ ಕಿಮ್ಸ್‌ನ ಮುಖ್ಯ ಆಸ್ಪತ್ರೆಗೆ ಕಳುಹಿಸಲಾಗುತ್ತ್ತದೆ.