ಹುಬ್ಬಳ್ಳಿ: ನಗರದ ಕಿಮ್ಸ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಶೇ. 90ಕ್ಕೂ ಅಧಿಕ ಪ್ರಮಾಣದಷ್ಟು ಮುಗಿದಿದೆ. ಎಸ್‌ಟಿಪಿ ಪ್ಲಾಂಟ್ ಸೇರಿದಂತೆ ಶೇ. 30 ಉಪಕರಣಗಳ ಅಳವಡಿಕೆ ಹಾಗೂ ಸಿಬ್ಬಂದಿ ನೇಮಕ ಬಾಕಿಯಿದ್ದು, ಮಾಸಾಂತ್ಯದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಅಲ್ಲಿಯ ವರೆಗೆ ಈ ಆಸ್ಪತ್ರೆಯು ಸಾರ್ವಜನಿಕರ ಸೇವೆಗೆ ಲಭ್ಯವಾಗುವುದು ಕಷ್ಟ.
ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಂದಾಜು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಿವಿಲ್ ಕಾಮಗಾರಿ ಶೇ. 98 ಮುಗಿದಿದೆ. ಉಪಕರಣಗಳ ಅಳವಡಿಕೆ ಶೇ. 70 ಆಗಿದ್ದು, ಪ್ರಮುಖವಾಗಿ ಶಸ್ತ್ರಚಿಕಿತ್ಸಾ ಘಟಕ, ವೈದ್ಯಕೀಯ ಗ್ಯಾಸ್ ಪೈಪಿಂಗ್ ಸಿಸ್ಟಮ್ ಅಳವಡಿಕೆ, ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಬಾಕಿ ಉಳಿದಿದೆ. ಜೊತೆಗೆ ಗ್ರುಪ್ ಸಿ ಹಾಗೂ ಡಿ ನೇಮಕಾತಿ ಆಗಬೇಕಿದೆ.
ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ 3ರ ಅಡಿ 120 ಕೋಟಿ ರೂ. ಹಾಗೂ ರಾಜ್ಯ ಸರಕಾರದ 30 ಕೋಟಿ ರೂ. ಅನುದಾನ ಸೇರಿ ಒಟ್ಟು 150 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದ್ಲರಲ್ಲಿ ಸಿವಿಲ್ ಕಾಮಗಾರಿಯ ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಪ್ಲಂಬಿಂಗ್‌ಗೆ 75 ಕೋಟಿ ರೂ. ಹಾಗೂ ವೈದ್ಯಕೀಯ ಗ್ಯಾಸ್ ಪೈಪಿಂಗ್ ಸಿಸ್ಟಮ್, ಮಾಡೂಲರ್ ಆಪರೇಶನ್ ಥೇಟರ್, ವೈದ್ಯಕೀಯ ಉಪಕರಣಗಳಿಗೆ ಗೆ 65 ಕೋಟಿ ರೂ. ಹಾಗೂ ವೈದ್ಯಕೀಯ ಪೀಠೊಪಕರಣ, ಆಡಳಿತಾತ್ಮಕ ಪೀಠೊಪಕರಣಕ್ಕೆ 10 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಕೇಂದ್ರ ಸರಕಾರ ಸ್ವಾಮ್ಯದ ಹೈದರಾಬಾದ್ ಮೂಲದ ಎಚ್‌ಎಲ್‌ಎಲ್-ಹೈಟ್ಸ್ ಕಂಪನಿ ಈ ಕಾಮಗಾರಿಯ ನಿರ್ವಹಣೆ ಮಾಡುತ್ತಿದೆ. ನಾಸಿಕ್ ಮೂಲದ ಹರ್ಷ ಕನ್‌ಸ್ಟ್ರಕ್ಷನ್ ಕಂಪನಿಯು ಅಂದಾಜು 1ಲಕ್ಷ 70 ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸುತ್ತಿದೆ.
ಹರ್ಷ ಕಂಪನಿಗೆ 69.70 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಕೊಡಲು 2016ರ ಆ. 12ರಂದು ಟೆಂಡರ್ ನೀಡಲಾಗಿತ್ತು. ಅದರಂತೆ ಕಂಪನಿ ಕಾಮಗಾರಿ ಆರಂಭಿಸಿ, 2018ರ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡದ ಮುಂಭಾಗದಲ್ಲಿದ್ದ ಶವಾಗಾರ ಸ್ಥಳಾಂತರ, ತ್ಯಾಜ್ಯ ಶುದ್ಧೀಕರಣ ಘಟಕಕ್ಕೆ ರಾಜ್ಯ ಸರಕಾರದ ಅನುದಾನ ನೀಡುವಲ್ಲಿ ಹಾಗೂ ಅಗ್ನಿಶಾಮಕದಳ ಇಲಾಖೆಯಿಂದ ಅನುಮತಿ ದೊರೆಯದ್ದರಿಂದ ಕಟ್ಟಡ ಕಾಮಗಾರಿ ವಿಳಂಬವಾಗಿತ್ತು. ಎಪ್ರಿಲ್ ಮೊದಲ ವಾರದಲ್ಲಿ ಶವಾಗಾರ ಸ್ಥಳಾಂತರ ಮಾಡಲಾಗಿದ್ದು, ಅದರ ಕಟ್ಟಡ ತೆರವುಗೊಳಿಸಲಾಗಿದೆ.
ನೇಮಕಾತಿ ಸವಾಲು
ಕಟ್ಟಡದಲ್ಲಿ ಈಗಾಗಲೇ ಫ್ಲೋರಿಂಗ್, ಬಾಗಿಲು ಅಳವಡಿಕೆ, ಸೀಲಿಂಗ್ ಕಾಮಗಾರಿ ಸೇರಿದಂತೆ ಶೇ. 90ಕ್ಕೂ ಅಧಿಕ ಸಿವಿಲ್ ಕಾಮಗಾರಿ ಮುಗಿದಿದೆ. ಆದರೆ ಶಸ್ತ್ರಚಿಕಿತ್ಸಾ ಘಟಕ ಹಾಗೂ ಎಂಜಿಪಿಎಸ್, ಎಸ್‌ಟಿಪಿ ಅಳವಡಿಕೆ ಕಾಮಗಾರಿ ಬಾಕಿ ಉಳಿದಿದೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಸಿ ಮತ್ತು ಡಿ ಗ್ರುಪ್ ಸಿಬ್ಬಂದಿಯ ನೇಮಕಾತಿಯೇ ದೊಡ್ಡ ಸವಾಲಾಗಲಿದ್ದು, ಅದನ್ನು ಎಷ್ಟು ಬೇಗ ಬಗೆಹರಿಸಲಾಗುವುದೋ ಅಷ್ಟೇ ಬೇಗನೆ ಈ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಿಮ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶಸ್ತ್ರಚಿಕಿತ್ಸಾ ಘಟಕ, ಗ್ಯಾಸ್ ಪೈಪಿಂಗ್ ಸಿಸ್ಟಮ್ ಅಳವಡಿಕೆ, ಎಸ್‌ಟಿಪಿ ಪ್ಲಾಂಟ್ ಕಾಮಗಾರಿ ಬಾಕಿ ಉಳಿದಿದೆ. ತಿಂಗಳಾತ್ಯದಲ್ಲಿ ಅವು ಪೂರ್ಣಗೊಳ್ಳಲಿವೆ. ಸಿ ಹಾಗೂ ಡಿ ಗ್ರುಪ್ ನೇಮಕಾತಿ ಆಗಬೇಕಿದೆ. ಆಸ್ಪತ್ರೆ ಉದ್ಘಾಟನೆಗೆ ಯಾವುದೇ ಸಮಸ್ಯೆಯಿಲ್ಲ.
. ಡಾ| ರಾಮಲಿಂಗಪ್ಪ ಅಂಟರತಾನಿ,
ಪ್ರಭಾರಿ ನಿರ್ದೇಶಕ, ಕಿಮ್ಸ್