Advertisement

ಕೊನೇ ಕ್ಷಣದಲ್ಲಿ ಪವಡಿಸದಿರಲಿ ಪಿಒಪಿ ಗಣಪ!

03:56 PM Aug 27, 2018 | Team Udayavani |

ಹುಬ್ಬಳ್ಳಿ: ನಗರದ ಮೂರ್ತಿಕಾರರು ಮಣ್ಣಿನ ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸುವಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಕೊನೆ ಕ್ಷಣದಲ್ಲಿ ಮತ್ತೆ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳು ನಗರಕ್ಕೆ ಬಂದರೆ? ಎಂಬ ಆತಂಕ ಅವರನ್ನು ಕಾಡುತ್ತಿದೆ.

Advertisement

ಮೂರು ವರ್ಷಗಳ ಹಿಂದೆಯೇ ಜಿಲ್ಲಾಡಳಿತ ಪಿಒಪಿ ಗಣಪತಿಗಳ ಪ್ರತಿಷ್ಠಾಪನೆಗೆ ನಿಷೇಧ ಹೇರಿದೆ. ಆದರೆ ಕಳೆದೆರಡು ವರ್ಷ ನಗರದಲ್ಲಿ ಹಲವೆಡೆ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆದಿರುವುದರಿಂದ ಪಿಒಪಿ ಸಂಪೂರ್ಣ ನಿಷೇಧದ ಬಗ್ಗೆ ಮಣ್ಣಿನ ಮೂರ್ತಿಕಾರರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಎತ್ತರ ತಗ್ಗುವ ಸಾಧ್ಯತೆ: ಪ್ರತಿವರ್ಷ ಅವಳಿ ನಗರದಲ್ಲಿ ಸುಮಾರು 900ಕ್ಕೂ ಅಧಿಕ 5 ಅಡಿಗಿಂತ ಹೆಚ್ಚು ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆದರೆ ಜಿಲ್ಲಾಡಳಿತ ಹೇರಿರುವ ನಿಷೇಧದಿಂದ ಈ ಬಾರಿ ಗಣೇಶ ಮೂರ್ತಿಯ ಎತ್ತರ ಗಣನೀಯ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದೆ.

ಕಳೆದ ನಾಲ್ಕೈದು ದಿನಗಳಿಂದ ಮೂರ್ತಿಕಾರರ ಬಳಿ ಬರುವ ಗಣೇಶ ಮಂಡಳದವರು 6 ಅಡಿ, 7 ಅಡಿ ಗಣೇಶ ಮೂರ್ತಿಗಳು ಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಆದರೆ 5-6 ಅಡಿಗಿಂತ ಹೆಚ್ಚಿನ ಮಣ್ಣಿನ ಗಣೇಶ ಮೂರ್ತಿಗಳ ತಯಾರಿ ಅಷ್ಟು ಸುಲಭದ ಕೆಲಸವಲ್ಲ. ಅದು ಕೂಡಾ ಈ ಸಮಯದಲ್ಲಿ ಸಾಧ್ಯವಿಲ್ಲ ಎಂಬುದು ಕಲಾವಿದರ ಹೇಳಿಕೆ. ದೊಡ್ಡ ಮೂರ್ತಿ ಬಯಸುವ ಗಣೇಶ ಮಂಡಳದವರು ಪಿಒಪಿ ಮೊರೆ ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈಗಾಗಲೇ ನೂರಾರು ಗಣೇಶ ಮೂರ್ತಿಗಳನ್ನು ಬುಕ್‌ ಮಾಡಲಾಗಿದ್ದರೆ, ಕೆಲವು ಮಂಡಳದವರು ಪರ ಊರಿನಿಂದ ಮೂರ್ತಿಗಳನ್ನು ತರುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಸಣ್ಣ ಮಣ್ಣಿನ ಗಣಪತಿ
ಮನೆಯಲ್ಲಿ ಪ್ರತಿಷ್ಠಾಪನೆ ಮಾಡುವ ಚಿಕ್ಕ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಕಲಾವಿದರು ನಿರತರಾಗಿದ್ದಾರೆ. ಇಲ್ಲಿನ ಬಮ್ಮಾಪುರ ಓಣಿಯ ಕಲಾವಿದ ಮಂಜುನಾಥ ಕಾಂಬ್ಳೆ ಅವರು ಈ ಬಾರಿ 1 ಅಡಿಯಿಂದ 2 ಅಡಿಯ ಸುಮಾರು 250 ಗಣೇಶ ಮೂರ್ತಿ ತಯಾರಿಸಿದ್ದಾರೆ. 6 ಅಡಿಯ ಮೂರು ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಮೂರ್ತಿಗಳ ದರ ಕಳೆದ ವರ್ಷಕ್ಕಿಂತ ಅಲ್ಪ ಹೆಚ್ಚಳವಾಗಿದೆ. ಈ ಬಾರಿ ನಮ್ಮಲ್ಲಿನ ಗಣೇಶ ಮೂರ್ತಿಗಳ ದರ 1 ಸಾವಿರದಿಂದ 18 ಸಾವಿರ ದವರೆಗೆ ಇದೆ ಎಂದು ಕಾಂಬ್ಳೆ ಹೇಳುತ್ತಾರೆ. ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿಗೆ ಅವಕಾಶ ನೀಡಲೇಬಾರದು ಎಂಬುದು ಇನ್ನೋರ್ವ ಕಲಾವಿದ ವಿನಾಯಕ ಮುರಗೋಡ ಅವರ ಒತ್ತಾಯ.

ಪಿಒಪಿಗೆ ಮಣ್ಣಿನ ಲೇಪನ ಸಾಧ್ಯತೆ
ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಗಣೇಶ ಮೂರ್ತಿಗಳ ಮೇಲ್ಪದರಕ್ಕೆ ಮಣ್ಣಿನ ಲೇಪನ ಮಾಡಿ ಮಣ್ಣಿನ ಮೂರ್ತಿಗಳೆಂದು ಮಾರಾಟ ಮಾಡುವ ಸಾಧ್ಯತೆಯಿದೆ. ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡದೇ ಪೂರ್ತಿ ಮಣ್ಣಿನಿಂದ ಮಾಡಿದ ಮೂರ್ತಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂಬುದು ಮಣ್ಣಿನ ಮೂರ್ತಿಕಾರರ ಮನವಿ.

Advertisement

ನಗರದ ಹೊರಭಾಗದಲ್ಲಿ ಸಂಗ್ರಹ?
ಪುಣೆ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಪಿಒಪಿ ಗಣೇಶ ಮೂರ್ತಿಗಳನ್ನು ಕೊನೆಯ ಕ್ಷಣದಲ್ಲಿ ಮಾರುಕಟ್ಟೆಗೆ ತರುವ ಉದ್ದೇಶದಿಂದ ಧಾರವಾಡದ ಹೊರವಲಯದಲ್ಲಿ ಶೇಖರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿಯಮ ಉಲ್ಲಂಘನೆಗೆ 10 ಸಾವಿರ ದಂಡ ಯಾತಕ್ಕೂ ಸಾಲದು
ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ 10 ಸಾವಿರ ದಂಡ ಹಾಗೂ 3 ತಿಂಗಳ ಜೈಲುವಾಸ ಎಂದು ಹೇಳಲಾಗಿದೆ. ಆದರೆ ದೊಡ್ಡ ದೊಡ್ಡ ಮಂಡಳದವರಿಗೆ 10 ಸಾವಿರ ಬದಲಾಗಿ 50 ಸಾವಿರ ದಂಡ ವಿಧಿಸಿದರೂ ಅವರು ನಿರಾತಂಕವಾಗಿ ದಂಡದ ಹಣ ತುಂಬಲು ಸಿದ್ಧರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದಾಜೀಬಾನ ಪೇಟೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವ ಹುಬ್ಬಳ್ಳಿ ಕಾ ರಾಜಾ ಈ ಬಾರಿ ಕೂಡಾ ಪ್ರತಿಷ್ಠಾಪನೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅವಳಿ ನಗರದಲ್ಲಿ ಜಲಮೂಲಗಳ ಕೊರತೆ ಇದೆ. ಇರುವ ಜಲಮೂಲಗಳನ್ನು ಉಳಿಸಿಕೊಳ್ಳುವ ಸ್ಥಿತಿ ನಮ್ಮದಾಗಿದೆ. ಆದ್ದರಿಂದ ಸಾರ್ವಜನಿಕರು ಕೂಡಾ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡದೆ ಮಣ್ಣಿನಿಂದ ತಯಾರಿಸಿದ ಪರಿಸರ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಯಾವುದೇ ಕಾರಣಕ್ಕೂ ಈ ಬಾರಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. 
ಶ್ರೀಧರ ಟಿ.ಎನ್‌., ಪರಿಸರ ಅಭಿಯಂತ 

ಪಿಒಪಿ ಗಣೇಶ ಮೂರ್ತಿ ಬದಲು ಎಲ್ಲರೂ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು ಶೇ.30 ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಜಿಲ್ಲಾದ್ಯಂತ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡದಂತೆ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು.
.ಮಂಜುನಾಥ ಹಿರೇಮಠ,
ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕ

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next