ಬಾಗಲಕೋಟೆ: ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಜಿಲ್ಲೆಯ ಬಹುಭಾಗ ಭೂಮಿ ಕಳೆದುಕೊಂಡು ಮುಳುಗಡೆ ಜಿಲ್ಲೆ ಎಂದೇ ಕರೆಸಿಕೊಳ್ಳುವ ಜಿಲ್ಲೆಗೆ ಮತ್ತೂಂದು ನಾಲ್ಕು ಪಥದ ಹೆದ್ದಾರಿ ಬರಲಿದೆ. ಈಗಾಗಲೇ ಕಾಲುವೆ ನಿರ್ಮಾಣ, ಪುನರ್ವಸತಿಕೇಂದ್ರ, ಅಪಾರ ಪ್ರಮಾಣದ ಹಿನ್ನೀರು ಪ್ರದೇಶ ಹಾಗೂ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ, ಗದಗ-ಹೊಟಗಿ ಜೋಡಿ ರೈಲು ಮಾರ್ಗ ನಿರ್ಮಾಣ ಹೀಗೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಭೂಮಿ ಕಳೆದುಕೊಂಡ ಜಿಲ್ಲೆಯ ರೈತರು ಇದೀಗ ಮತ್ತಷ್ಟು ಭೂಮಿ ನೀಡಿ ಅಭಿವೃದ್ಧಿಗೆ ಔದಾರ್ಯತೆ ಮೆರೆಯಬೇಕಿದೆ.
ಮುಳುಗಡೆಯೊಂದಿಗೆ ಹುಟ್ಟಿದ ಜಿಲ್ಲೆ: ಕಳೆದ 1997ರಲ್ಲಿ ಬಾಗಲಕೋಟೆ ಜಿಲ್ಲೆ ಹುಟ್ಟಿಕೊಳ್ಳುತ್ತಲೇ ಆಲಮಟ್ಟಿ ಹಿನ್ನೀರಿನಿಂದ ಜಿಲ್ಲೆಯ ಭೂಮಿ ಮುಳುಗಡೆ ಪ್ರಮಾಣವೂ ಹೆಚ್ಚುತ್ತ ಬಂದಿದೆ. ಜಲಾಶಯದಲ್ಲಿ 2002ರಿಂದ ನೀರು ನಿಲ್ಲಿಸಲು ಕ್ರಮೇಣ ಆರಂಭಿಸಿದ್ದರೂ, 1997ಕ್ಕೂ ಮುಂಚೆ ಜಿಲ್ಲೆಯ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿತ್ತು. ಇಂದಿಗೂ ಬೇರೆ ಬೇರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ನವನಗರ ನಿರ್ಮಾಣವೂ ಸೇರಿದಂತೆ ಜಿಲ್ಲೆಯಲ್ಲಿ ಪುನರ್ವಸತಿ ಕೇಂದ್ರಗಳು, ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈತರು ಭೂಮಿ ಕೊಟ್ಟಿದ್ದಾರೆ. ಒಂದು ಯೋಜನೆಗೆ ಭೂಮಿ ಕಳೆದುಕೊಂಡವರು, ಪಡೆದ ಪರಿಹಾರದಲ್ಲಿ ಬೇರೆಡೆ ಭೂಮಿ ಖರೀದಿಸಿ, ಹೊಸ ಬದುಕು ಕಟ್ಟಿಕೊಳ್ಳುವಾಗಲೇ ಮತ್ತೂಂದು ಯೋಜನೆಗೆ ಹೊಸ ಭೂಮಿ ಕಳೆದುಕೊಂಡ ಉದಾಹರಣೆ ಜಿಲ್ಲೆಯಲ್ಲಿವೆ. ಯುಕೆಪಿ ಯೋಜನೆ ಭೂಮಿ ಕೊಟ್ಟವರು, ಮುಚಖಂಡಿ, ಶಿಗಿಕೇರಿ, ನೀರಲಕೇರಿ ಬಳಿ ಹೊಸದಾಗಿ ಭೂಮಿ ಪಡೆದು, ಕೃಷಿ ಆರಂಭಿಸಿದ್ದರು. ಅವರೀಗ, ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗಕ್ಕೆ ಮತ್ತೆ ಭೂಮಿ ಕಳೆದುಕೊಂಡಿದ್ದಾರೆ. ಹೀಗಾಗಿ ಮುಳುಗಡೆ, ಸ್ವಾಧೀನ ಎಂಬ ಭೂತ ನಿರಂತರ ಬೆನ್ನತ್ತಿದೆ ಎಂಬುದು ಕೆಲ ರೈತರ ಬೇಸರ.
ಜಿಲ್ಲೆಯಲ್ಲಿ ಹಲವು ರಾಷ್ಟ್ರೀಯ ಹೆದ್ದಾರಿಗಳಿವೆ. ಹೊಸಪೇಟೆ-ಸೊಲ್ಲಾಪುರ ಹೆದ್ದಾರಿ ಸಂಖ್ಯೆ 50 (ಮೊದಲು ಎನ್‌ಎಚ್-13), ಹುಬ್ಬಳ್ಳಿ-ಸೊಲ್ಲಾಪುರ ಸಂಖ್ಯೆ 218, ರಾಯಚೂರು-ಬಾಚಿ ಸಂಖ್ಯೆ 167 ಪ್ರಮುಖ ಹೆದ್ದಾರಿಗಳಾಗಿವೆ. ಹೊಸಪೇಟೆ-ವಿಜಯಪುರ ಈಗಾಗಲೇ 4 ಪಥದ ರಸ್ತೆಯಾಗಿ ನಿರ್ಮಾಣಗೊಂಡಿದೆ. ಈಗ ಉಳಿದ ವಿಜಯಪುರ-ಸೊಲ್ಲಾಪುರ ವರೆಗೆ ಹೆದ್ದಾರಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದಕ್ಕಾಗಿ ಹಲವು ಸಾವಿರಾರು ರೈತರು ಭೂಮಿ ಕೊಟ್ಟಿದ್ದಾರೆ.
ಭಾರತ ವಾಲಾ: ಭಾರತ ವಾಲಾ ಎಂಬ ಪ್ರಮುಖ ರಾಷ್ಟ್ರೀಯ ಯೋಜನೆಯಡಿ ಗೋವಾ-ಹೈದರಾಬಾದ್ ನಾಲ್ಕು ಪಥದ ಹೆದ್ದಾರಿ ನಿರ್ಮಾಣಗೊಳ್ಳಲಿದ್ದು, ಇದು ಸದ್ಯ ಇರುವ ರಾಯಚೂರು-ಬಾಚಿ ಸಂಖ್ಯೆ 167 ಹೆದ್ದಾರಿಯಲ್ಲೇ ವಿಲೀನಗೊಂಡು ನಿರ್ಮಾಣಗೊಳ್ಳಲಿದೆ. ಆಗ ಲೋಕಾಪುರ, ಕಲಾದಗಿ, ಗದ್ದನಕೇರಿ ಕ್ರಾಸ್, ಬಾಗಲಕೋಟೆ, ಶಿರೂರ, ಕಮತಗಿ ಕ್ರಾಸ್, ಅಮೀನಗಡ, ಹುನಗುಂದ ಮಾರ್ಗವಾಗಿ ಈ ಹೆದ್ದಾರಿ ಹಾದು ಹೋಗಲಿದೆ. ಆಗ ಮತ್ತೆ ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಮೂರು ತಾಲೂಕಿನ ರೈತರು ಭಾರತ ವಾಲಾ ಹೆದ್ದಾರಿಗೆ ಭೂಮಿ ಕೊಡಬೇಕು. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ವಿಭಾಗ ಈಗಾಗಲೇ ಜಿಲ್ಲೆಯಲ್ಲಿ ಅಗತ್ಯ ಭೂಮಿಯ ಸಮೀಕ್ಷೆ ಪೂರ್ಣಗೊಳಿಸಿದೆ.
ಮತ್ತೂಂದು ಹೆದ್ದಾರಿ: ಈ ಎರಡು ಪ್ರಮುಖ ಹೆದ್ದಾರಿಗಳ ಜತೆಗೆ ಜಿಲ್ಲೆಗೆ ಮತ್ತೂಂದು ಹೆದ್ದಾರಿ ಹಾದು ಹೋಗಲಿದೆ. ಅದು ಹುಬ್ಬಳ್ಳಿ-ಸೊಲ್ಲಾಪುರ ಸಂಖ್ಯೆ 218, ನಾಲ್ಕು ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆದರೆ, ಕಳೆದ 2015ರಲ್ಲಿ ಮಂಜೂರಾಗಿದ್ದ 349 ಕೋಟಿ ಮೊತ್ತದ ಹುಬ್ಬಳ್ಳಿ-ಕೊರ್ತಿ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಇದಕ್ಕಾಗಿ 349 ಕೋಟಿ ಖರ್ಚು ಮಾಡಲಾಗುತ್ತಿದೆ. ಇದೆಲ್ಲದರ ಮಧ್ಯೆ ಈಗ ಅದೇ ಮಾರ್ಗವನ್ನು ನಾಲ್ಕು ಪಥ ರಸ್ತೆಯನ್ನಾಗಿ ಮಾಡಲು ಪುನಃ ಮಂಜೂರಾತಿ ದೊರೆತಿದೆ. ಇದು ನರಗುಂದ ಮೂಲಕ ಹಾದು, ಕುಳಗೇರಿ ಕ್ರಾಸ್, ಕೆರೂರ, ಹೂಲಗೇರಿ, ಗದ್ದನಕೇರಿ ಕ್ರಾಸ್, ಅನಗವಾಡಿ ಪು.ಕೇ, ಬೀಳಗಿ ಕ್ರಾಸ್, ಕೊರ್ತಿ ಮೂಲಕ ಹಾಯ್ದು ಕೊಲ್ಹಾರ ಮೂಲಕ ವಿಜಯಪುರ ತೆರಳಲಿದೆ. ಈ ಹೆದ್ದಾರಿ ನಾಲ್ಕು ಪಥವಾಗಿ ಪರಿವರ್ತನೆ ಯಾಗಲು ಬಾದಾಮಿ, ಬಾಗಲಕೋಟೆ, ಬೀಳಗಿ ತಾಲೂಕಿನ ಜನ ಮತ್ತೆ ಭೂಮಿ ಕೊಟ್ಟು, ಅಭಿವೃದ್ಧಿಗೆ ಸಹಕಾರ ಕೊಡಬೇಕಾದ ಅನಿವಾರ್ಯತೆ ಇದೆ.
ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ, ಹೆಚ್ಚಾಗಿ ವಾಣಿಜ್ಯ ವಾಹಣ ಓಡಾಡುವ ಹುಬ್ಬಳ್ಳಿ-ಸೊಲ್ಲಾಪುರ ನಾಲ್ಕು ಪಥ ರಸ್ತೆಯನ್ನಾಗಿ ನಿರ್ಮಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಈಚೆಗೆ ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಅವರು, ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿಯ ಹುಬ್ಬಳ್ಳಿ-ವಿಜಯಪುರವರೆಗೆ ಚತುಸ್ಪಥ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದ್ದಾರೆ.
–ಗೋವಿಂದ ಕಾರಜೋಳ, ಡಿಸಿಎಂ, ಲೋಕೋಪಯೋಗಿ ಸಚಿವರು
-ಶ್ರೀಶೈಲ ಕೆ. ಬಿರಾದಾರ