ಹುಬ್ಬಳ್ಳಿ: ಯುವ ಫುಟ್‌ಬಾಲ್ ಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನ್ಪೋರ್ಟಿಂಗ್ ಹುಬ್ಬಳ್ಳಿ ಫುಟ್‌ಬಾಲ್ ಅಕಾಡೆಮಿ ಆರಂಭಿಸಲಾಗಿದ್ದು, ಆಸಕ್ತ ಪಟುಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಸಾಕರ್ ಲೀಗ್ ಜೆರ್ಸಿ ಬಿಡುಗಡೆಗೊಳಿಸಿದ ನಂತರ ಅವರು ಮಾತನಾಡಿದರು. ಈ ಭಾಗದಲ್ಲಿ ಸಾಕಷ್ಟು ಫುಟ್‌ಬಾಲ್ ಪ್ರತಿಭೆಯ ಪಟುಗಳಿದ್ದಾರೆ. ಅವರಿಗೆ ಉತ್ತೇಜನದ ಕೊರತೆಯಿದೆ.
ಪ್ರೋತ್ಸಾಹದ ಕೊರತೆಯಿಂದಾಗಿ ಪಟುಗಳು ಆಸಕ್ತಿ ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಸಾಕರ್ ಲೀಗ್ ಆಯೋಜಿಸಲಾಗುತ್ತಿದೆ ಎಂದರು. ಫುಟ್‌ಬಾಲ್ ಜನಪ್ರಿಯಗೊಳ್ಳುವುದು ಅವಶ್ಯಕ. ಯುವಕರು ಆಸಕ್ತಿಯ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಪಠ್ಯದೊಂದಿಗೆ ಆಟಗಳಲ್ಲಿಯೂ ಸಾಧನೆ ಮಾಡಬೇಕು.
ಉಣಕಲ್ಲ ಭಾಗದಲ್ಲಿ ಸಾಕಷ್ಟು ಕುಸ್ತಿ ಪಟುಗಳಿದ್ದು, ಕುಸ್ತಿಗೆ ಸೌಲಭ್ಯಗಳ ಕೊರತೆಯಿತ್ತು. ಕ್ರೀಡಾ ಸಚಿವ ಮಧ್ವರಾಜ್ ಅವರಿಗೆ ಮನವಿ ಮಾಡಿ ಕುಸ್ತಿ ಮ್ಯಾಟ್ ಕೊಡಿಸಲಾಗಿದೆ. ಈಗ ಉಣಕಲ್ಲನಲ್ಲಿ ಕುಸ್ತಿಪಟುಗಳು ಹೊಸ ಮ್ಯಾಟ್‌ನಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ.
ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ಸಿಗುವಂತಾಗಬೇಕು ಎಂದರು. ಶ್ರೀನಿವಾಸ ಶಾಸಿ ಮಾತನಾಡಿ, ಇತ್ತೀಚೆಗೆ ಅಕಾಡೆಮಿ ನೋಂದಣಿ ಮಾಡಲಾಗಿದೆ. ಮೊದಲ ಲೀಗ್‌ಗೆ ಈಗಾಗಲೇ 16 ತಂಡಗಳು ಹೆಸರು ನೋಂದಾಯಿಸಿವೆ. ಸುಮಾರು 30 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪ್ರತಿ ಶನಿವಾರ ಹಾಗೂ ರವಿವಾರ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್‌ನಲ್ಲಿ ಅಂಕಗಳ ಆಧಾರದ ಮೇಲೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ನಡೆಸಲಾಗುವುದು ಎಂದು ತಿಳಿಸಿದರು. ಮಲ್ಲಿಕಾರ್ಜುನ ಸಾವಕಾರ, ಸ್ವಪ್ನಿಲ್ ಕುಮಟಾಕರ ಇದ್ದರು.