ಹುಬ್ಬಳ್ಳಿ: ಒಂದೂವರೆ ವರ್ಷದಲ್ಲಿ ಸರ್ಕಾರ ಹಾಗೂ ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಭ್ರಷ್ಟಾಚಾರ ಶುರುವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿ ತೆಲಂಗಾಣಕ್ಕೆ ಕೊಟ್ಟಿದೆ ಎಂದಾಗ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ವರ್ಗಾವಣೆ ಮಾಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಕೆಲ ಪ್ರಮುಖ ಅಧಿಕಾರಿಗಳು ಸಿಕ್ಕಿದ್ದಾರೆ. ಹೈದರಾಬಾದ್ ಕಂಪನಿಗಳಿಗೆ ಹಣ ಹೋಗಿದೆ. ಇದು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರಗೆ ಗೊತ್ತಿದ್ದೆ ಮಾಡಿದ್ದು ಎಂದು ಆರೋಪಿಸಿದರು.
ಯಾವುದೇ ಆರೋಪ ಇಲ್ಲದೆ ನಮ್ಮ ಮೇಲೆ 40 ಪರ್ಸೆಂಟ್ ಕಮೀಷನ್ ಅರೋಪ ಮಾಡಿದರು. ಆದರೆ ಇದು 100 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಹರಿಹಾಯ್ದರು.
ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಇವರ ರಕ್ಷಣೆಗೆ ಸಿದ್ದರಾಮಯ್ಯ ನಿಂತಿದ್ದಾರೆ. ರಾಹುಲ್ ಗಾಂಧಿ ಈ ಬಗ್ಗೆ ಇಂದಿನವರೆಗೂ ಒಂದು ಮಾತಾಡಿಲ್ಲ. ಇದಕ್ಕೆ ರಾಹುಲ್ ಮತ್ತು ಸಿದ್ದರಾಮಯ್ಯ ಇಬ್ಬರು ಜವಾಬ್ದಾರರು. 40 ದಿನವಾದರೂ ನಾಗೇಂದ್ರಗೆ ನೋಟೀಸ್ ಕೊಟ್ಟಿರಲಿಲ್ಲ. ಇಡಿ ಪ್ರವೇಶಿಸಿದಾಗ ನೋಟೀಸ್ ಕೊಟ್ಟಿದ್ದಾರೆ. ಐಶಾರಾಮಿ ಹೋಟೆಲ್ ಗೆ ಕರೆದು ವಿಚಾರಣೆ ಮಾಡುವ ನಾಟಕ ಮಾಡಿದರು. ಹೋಟೆಲ್ ನ ಬಿಲ್ ಕಟ್ಟಿದ್ದು ಕೂಡ ಎಸ್‌ಐಟಿ ಎಂದರು.
ಮಿಸ್ಟರ್ ಮೋದಿ, ಮಿಸ್ಟರ್ ಯಡಿಯೂರಪ್ಪ ಎಂಬುವ ಮಿಸ್ಟರ್ ಸಿದ್ದರಾಮಯ್ಯ ನಿಮ್ಮ ಸರ್ಕಾರದಲ್ಲಿ ಏನು ನಡೆದಿದೆ. ದದ್ದಲ್ ಹೋಗಿ ಬಂಧಿಸಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪರಮ ಕಡು ಭ್ರಷ್ಟ ಸರ್ಕಾರ. ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ ಇದ್ದಾರೆ ಎಂದರು.
ಸಿದ್ದರಾಮಯ್ಯನವರಿಗೆ ವಿಜಯನಗರದಲ್ಲಿ ನಿಮಗೆ ಸೈಟ್ ಯಾಕೆ ಕೊಟ್ಟರು ಎಂಬ ಬಗ್ಗೆ ಉತ್ತರಿಸಲಿ. 2013ರ ಚುನಾವಣೆ ಅಫಡವಿಟ್‌ನಲ್ಲಿ ಅವರು ಮಾಹಿತಿ ಕೊಟ್ಟಿಲ್ಲ. ಮುಡಾ ಹಗರಣದಲ್ಲಿ ಇದು 200 ಪರ್ಸೆಂಟ್ ಸರ್ಕಾರ. 14 ಸೈಟ್ ಹೊಡೆದಿದ್ದಾರೆ ಎಂದರು.
ಬಿಜೆಪಿಯವರು ಸೈಟ್ ಕೊಟ್ಟರು ಎನ್ನುತ್ತಿದ್ದಾರೆ. ಆಗ ನೀವು ಬೇಡ ಎನ್ನಬೇಕಿತ್ತಲ್ಲ. ಆಕಸ್ಮಾತ್ ಬಿಜೆಪಿಯವರು ಕೊಟ್ಟಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಿ. ವ್ಯವಸ್ಥಿತವಾಗಿ ಸೈಟ್ ಹೊಡೆದಿದ್ದಾರೆ. ನೀವು ಏನೂ ಮಾಡಿಲ್ಲ ಅಂದರೆ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಮಾಡಲು ಹೋದರೆ ಬಂಧಿಸುತ್ತಾರೆ. ಆ ಮೂಲಕ ಸಂವಿಧಾನ ಹತ್ಯೆ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದು ಹರಿಹಾಯ್ದರು.
ಯಾವುದೇ ಹಣಕಾಸಿನ ಯೋಜನೆ ಇಲ್ಲದೆ ಗ್ಯಾರಂಟಿ ಯೋಜನೆ ರೂಪಿಸಿದ್ದಾರೆ. ರಾಯರೆಡ್ಡಿ ಅವರ ಹೇಳಿದ್ದಂತೆ, ಅಹಿಂದ ಅಹಿಂದ ಅಂದುಕೊಂಡು ಎಸ್‌ಸಿ, ಎಸ್‌ಟಿ ಹಣ ಗ್ಯಾರಂಟಿಗೆ ಉಪಯೋಗ ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಕಡುಭ್ರಷ್ಟ ಅಪ್ರಾಮಾಣಿಕ ಮುಖ್ಯಮಂತ್ರಿ ಎಂದರು.
ಮೋದಿ, ಜೋಶಿ ರಾಜೀನಾಮೆ ಕೊಡಬೇಕೆಂಬ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಚಿಲ್ಲರೆ ಅಸಂಬಂಧಿತ ಹೇಳಿಕೆಗೆ ಉತ್ತರ ಕೊಡಲ್ಲ. ಮೋದಿ ಏನು ಸೈಟ್ ತಗೊಂಡಿದ್ದಾರೆಯೇ? ಇದು ದಪ್ಪ ಚರ್ಮದ ಸರ್ಕಾರ. ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದರು.