Advertisement

Hubli; ಪಿಎಫ್ಐ ಮಾದರಿಯಲ್ಲಿ‌ ಎಸ್‌ಡಿಪಿಐ ಪಕ್ಷವನ್ನೂ ನಿಷೇಧಿಸಬೇಕು: ಪ್ರಮೋದ ಮುತಾಲಿಕ್

12:02 PM Sep 09, 2024 | Team Udayavani |

ಹುಬ್ಬಳ್ಳಿ: ಎಸ್ ಡಿಪಿಐ‌ ದೇಶದ್ರೋಹಿ‌ ಪಕ್ಷವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಪಿಎಫ್ಐ ಮಾದರಿಯಲ್ಲಿ‌ ಅದನ್ನೂ ನಿಷೇಧಿಸಬೇಕು ಎಂದು ಶ್ರೀ ರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ‌ ಆಗ್ರಹಿಸಿದರು.

Advertisement

ಸೋಮವಾರ (ಸೆ.09) ಇಲ್ಲಿನ ಈದ್ಗಾ ಮೈದಾನದಲ್ಲಿ ರಾಣಿ ಚನ್ನಮ್ಮ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ವೇಳೆ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ‌ ಮಾತನಾಡಿದರು.

ಹಿಂದೂಗಳು ಶಾಂತಿಪ್ರಿಯರು ಎಂಬುದನ್ನು ತೋರಿಸುತ್ತ ಬಂದಿದ್ದೇವೆ. ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಗಲಭೆ-ಗಲಾಟೆ ಆಗುತ್ತವೆ ಎಂದು ಹೇಳಿದ್ದರು ಆದರೆ ಮೂರು ವರ್ಷಗಳಿಂದ ಶಾಂತಿಯುತ ಆಚರಣೆಯಾಗಿದೆ. ಗಣೇಶೋತ್ಸವ ವಿರೋಧಿಗಳು ಸಹಕಾರಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪು ನೆಪದಲ್ಲಿ‌ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿ.ಜೆ ಬಳಕೆಗೆ ನಿರ್ಬಂಧಿಸಿರುವುದು ಸರಿಯಲ್ಲ. ಮಸೀದಿ ಧ್ವನಿವರ್ಧಕಕ್ಕೂ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಅಲ್ಲಿ ಕ್ರಮವಿಲ್ಲದೆ ವರ್ಷಕ್ಕೊಮ್ಮ ಆಚರಿಸುವ ಗಣೇಶೋತ್ಸವಕ್ಕೆ ಮಾತ್ರ ಯಾಕೆ? ಡಬಲ್ ಡಿ.ಜೆ. ಹಾಕಿ ಸಂಭ್ರಮಿಸಿ ಎಂದು ಗಣೇಶೋತ್ಸವ ಸಮಿತಿಗಳಿಗೆ ಕರೆ ನೀಡುತ್ತೇನೆ ಎಂದರು.

ಗಣೇಶ ಪ್ರಸಾದಕ್ಕೆ ನಿರ್ಬಂಧ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ. ಬಿಜೆಪಿಯೂ ಅಧಿಕಾರದಲ್ಲಿದ್ದಾಗ ಹಿಂದೂ ವಿರೋಧಿ ನೀತಿ ಅನುಸರಿಸಿ ನಮ್ಮನ್ನು ಬಂಧಿಸಿತ್ತು. ಮೋದಿಗೆ ನಮ್ಮ ಬೆಂಬಲ ಅಚಲ; ಸ್ಥಳೀಯ ಬಿಜೆಪಿ ನಾಯಕರಿಗಲ್ಲ. ಮೋದಿ ಇಲ್ಲವಾದರೆ ದೇಶ ಮಾರಾಟ ಮಾಡುವ ರಾಹುಲ್ ಗಾಂಧಿ ಬರುತ್ತಾನೆ ಎಂದು ಕಿಡಿಕಾರಿದರು.

Advertisement

ವಿಸರ್ಜನೆ ಮೆರವಣಿಗೆ

ರಾಣಿ ಚನ್ನಮ್ಮ ಗಜಾನನ ಮಹಾಮಂಡಳ‌ವು ಇಲ್ಲಿನ‌ ಈದ್ಗಾ‌ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಗೆ ಸೋಮವಾರ ಬೆಳಿಗ್ಗೆ11:50 ಗಂಟೆ ಸುಮಾರಿಗೆ ಆರಂಭಗೊಂಡಿತು. ಮೂರು ದಿನಗಳಿಂದ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಆರ್ ಎಸ್ ಎಸ್ ಪ್ರಮುಖ‌ ಮಂಗೇಶ ಭೇಂಡೆ, ಮಾಜಿ ಸಚಿವರಾದ ಸಿ.ಟಿ.ರವಿ, ಶಂಕರ ಪಾಟೀಲ‌ ಮುನೇನಕೊಪ್ಪ ಇನ್ನಿತರರು‌ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next