ಹುಬ್ಬಳ್ಳಿ :ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಲಭೆಗೆ ಪ್ರಚೋದನೆ ನೀಡಿದ್ದ ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿ ವಾಸಿಂ ಪಠಾಣನನ್ನು ವಶಕ್ಕೆ ಪಡೆದು, ಹಳೇ ಹುಬ್ಬಳ್ಳಿ ಠಾಣೆಗೆ ಕರೆದುಕೊಂಡು ಬರಲಾಗಿದೆ.
ಗಲಭೆ ನಂತರ ಮುಂಬಯಿಗೆ ಪಲಾಯಗೈದಿದ್ದ ಈತನನ್ನು ಖಚಿತ ಮಾಹಿತಿ ಮೇರೆಗೆ ತನಿಖಾಧಿಕಾರಿ ಅಲ್ತಾಫ ಮುಲ್ಲಾ ನೇತೃತ್ವದ ತಂಡ ಮುಂಬಯಿಯಲ್ಲಿ ವಶಕ್ಕೆ ಪಡೆದು, ವಿಮಾನ ಮೂಲಕ ಬೆಳಗಾವಿಗೆ ಕರೆತಂದು ಅಲ್ಲಿಂದ ರಸ್ತೆ ಮೂಲಕ ಹಳೇಹುಬ್ಬಳ್ಳಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕಿನ ಟ್ವೀಟ್ ಕಾರಣ: ಡಿ.ಕೆ. ಶಿವಕುಮಾರ್
ವಾಸಿಂ ಈ ಹಿಂದೆ ಲಾರಿ ಚಾಲಕನಾಗಿದ್ದ. ಈಗ ಜಿಮ್ ನಡೆಸಿಕೊಂಡಿದ್ದಾನೆ. ಇತ್ತೀಚೆಗೆ ಮೌಲ್ವಿ ತರ ಬಟ್ಟೆ ಹಾಕಿಕೊಂಡು ಓಡಾಡುತಿದ್ದ. ಅಲ್ಲದೇ ತನ್ನದೇ ಆದ ಬೆಂಬಲಿಗರ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರಕರಣದ ಮತ್ತಿಬ್ಬರಾದ ಮುಲ್ಲಾ ಓಣಿಯ ನಿವಾಸಿ ತಫೆಲ್ ಮುಲ್ಲಾ ಹಾಗೂ ಮಂಟೂರು ರಸ್ತೆ ಹರಿಶ್ಚಂದ್ರ ಕಾಲೋನಿಯ ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಪಾರಿಯನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.