ವಿಜಯನಗರ: ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದ ಗಲಾಟೆ ಒಂದು ವ್ಯವಸ್ಥಿತ ಸಂಚು ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಮೊದಲೇ ಕಲ್ಲು ಸಂಗ್ರಹ ಮಾಡಲಾಗಿತ್ತು ಎಂಬ ಮಾಹಿತಿಯಿದೆ. ಕೆಜಿ ಹಳ್ಳಿ ಡಿಜೆ ಹಳ್ಳಿ ಘಟನೆ ಮಾದರಿಯಲ್ಲಿಯೇ ಇದು ನಡೆದಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ರಾತ್ರಿ ಒಬ್ಬ ಯುವಕ ತನ್ನ ಮೊಬೈಲ್ ವಾಟ್ಸಪ್ ನಲ್ಲಿ ವಿವಾದಿತ ಸ್ಟೇಟಸ್ ಪೋಸ್ಟ್ ಹಾಕಿದ್ದ. ಅದರಿಂದ ಗಲಾಟೆ ಆರಂಭವಾಗಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ. ಈಗಾಗಲೇ ಪೋಸ್ಟ್ ಹಾಕಿದ ವ್ಯಕ್ತಿ ಸೇರಿದಂತೆ ಹಲವರ ಬಂಧನವಾಗಿದೆ. ಕಾನೂನು ಕೈಗೆತ್ತಿಕೊಳ್ಳುವರನ್ನು ಬಿಡುವ ಮಾತೇ ಇಲ್ಲ..ಯಾವುದೇ ಧರ್ಮದವರಾಗಲಿ ಅವರನ್ನು ಬಿಡುವ ಮಾತೇ ಇಲ್ಲ ಎಂದರು.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ದಳ್ಳುರಿಗೆ ಕಾರಣವಾದ ಪೋಸ್ಟ್; ಆಸ್ಪತ್ರೆ,ಪೊಲೀಸ್, ದೇವಸ್ಥಾನಗಳೇ ಟಾರ್ಗೆಟ್!
ನಾಲ್ಕು ಮಂದಿ ಪೊಲೀಸರು ಹಾಗು ಕೆಲ ಸಿಬ್ಬಂದಿಗೆ ಗಾಯವಾಗಿದೆ. ಓರ್ವ ಪಿಎಸ್ಐಗೆ ಗಂಭೀರ ಗಾಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ ಎಂದರು.
ವಿವಾದಿತ ಪೋಸ್ಟ್ ಹಾಕಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಠಾಣೆಯಿಂದ ಹೊರಗೆ ಕಳುಹಿಸಿ ಎಂದು ಗಲಾಟೆ ಮಾಡಿದರು. ಅಲ್ಲಿಂದ ಆರಂಭವಾದ ಗಲಾಟೆ ನಿರಂತರವಾಗಿ ನಡೆಯುತ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.