ಹುಬ್ಬಳ್ಳಿ: 2009ರಿಂದ 2012ರವರೆಗೆ ಬಿಜೆಪಿ ಸರ್ಕಾರದಲ್ಲಿ ಕಂಡಿದ್ದ ಬಂಡಾಯಕ್ಕೂ, ಪ್ರಸ್ತುತ ಸಮ್ಮಿಶ್ರ ಸರ್ಕಾರದ ಶಾಸಕರ ಬಂಡಾಯಕ್ಕೂ ಹಲವು ಸಾಮ್ಯತೆಗಳು ಕಂಡು ಬರುತ್ತಿವೆ. 2009ರ ಬಿಜೆಪಿ ಬಂಡಾಯದ ವೇಳೆ ಕಂಡರಿಯದ ಪ್ರವಾಹ ಸ್ಥಿತಿ ಇತ್ತು. ಆದರೆ, ಈಗಿನ ಸಮ್ಮಿಶ್ರ ಸರ್ಕಾರದ ಶಾಸಕರು ಬರದ ಸ್ಥಿತಿಯಲ್ಲಿ ಬಂಡಾಯ ಸ್ಫೋಟಗೊಳಿಸಿರುವುದು ಪ್ರಕೃತಿಯ ಕಾಕತಾಳಿಯ ಎನ್ನುವಂತಿದೆ.
Advertisement
ಬಿಜೆಪಿ ಸರ್ಕಾರದಲ್ಲಿ ನಡೆದ ಬಂಡಾಯದ ವಿದ್ಯಮಾನ ಸೂಕ್ಷ್ಮವಾಗಿ ಗಮನಿಸಿದರೆ ಅಂದಿನ ಘಟನಾವಳಿಗಳೇ ಇಂದು ಮರುಕಳಿಸಿದವೇ ಎಂಬಂತೆ ಗೋಚರಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನ ನಂತರ 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಂತರದಲ್ಲಿ ಮಿತ್ರಪಕ್ಷಗಳಲ್ಲಿನ ಅಧಿಕಾರ ಹಂಚಿಕೆ ಜಗಳ ವಿಕೋಪಕ್ಕೆ ತಿರುಗಿ 2008ರಲ್ಲಿ ರಾಜ್ಯಕ್ಕೆ ಮಧ್ಯಂತರ ಚುನಾವಣೆ ಎದುರಾಗಿತ್ತು. ಜೆಡಿಎಸ್‌ನಿಂದ ವಚನಭ್ರಷ್ಟವಾಗಿದೆ ಎಂಬ ಪ್ರಚಾರದ ಅನುಕಂಪದಡಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರ ಹಿಡಿಯುವ ಸಾಹಸ ಮಾಡಿತ್ತು. ಬಹುಮತಕ್ಕೆ ಕೊರತೆ ತುಂಬಿಕೊಳ್ಳಲು ಐವರು ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆದಿತ್ತು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2008ರ ಮೇ 30ರಂದು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುತ್ತಿದ್ದಂತೆಯೇ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿತ್ತು. ಬಂಡಾಯ ಶಾಸಕರು ವಿಶೇಷ ವಿಮಾನ, ಐಷಾರಾಮಿ ಬಸ್‌ಗಳಲ್ಲಿ ರೆಸಾರ್ಟ್‌ನಿಂದ ರೆಸಾರ್ಟ್, ನಗರದಿಂದ ನಗರಕ್ಕೆ ವಾಸ್ತವ್ಯ ಬದಲಾಯಿಸಿದ್ದರು.
Related Articles
Advertisement
ಒಂದು ವರ್ಷ ಕಳೆಯುವುದರೊಳಗಾಗಿ ಯಾರು ಪಟ್ಟು ಹಿಡಿದು ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದರೋ ಅವರೇ ಸದಾನಂದಗೌಡರ ವಿರುದ್ಧ ಸಮರ ಸಾರಿದ್ದರು. ಅಂತಿಮವಾಗಿ 2012, ಜು.12ರಂದು ಜಗದೀಶ ಶೆಟ್ಟರ್, ಬಿಜೆಪಿ ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಬಿಜೆಪಿ ಆಡಳಿತದಲ್ಲಿ ಅಂದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಕೇಂದ್ರದ ಯುಪಿಎ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಆಗ ಯಡಿಯೂರಪ್ಪ ನೇತೃತ್ವದ 105 ಶಾಸಕರು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ ಅವರ ಮುಂದೆ ಪೆರೇಡ್ ನಡೆಸಿದ್ದರು. ಸ್ಪೀಕರ್ ಆಗಿದ್ದ ಬೋಪಯ್ಯ ಅವರು 11 ಬಿಜೆಪಿ ಭಿನ್ನಮತೀಯ ಶಾಸಕರು ಹಾಗೂ ಐವರು ಪಕ್ಷೇತರ ಶಾಸಕರನ್ನು ಅಮಾನತುಗೊಳಿಸಿದ್ದು, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಂತರ, ಬಿಜೆಪಿ ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು 11 ಶಾಸಕರು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದು, ಆಂತರಿಕ ಭಿನ್ನಾಭಿಪ್ರಾಯ, ಒಡಕಿನಿಂದಲೇ 2013ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದೆ ಪತನಗೊಂಡಿದ್ದು ಇದೀಗ ಇತಿಹಾಸ.
ಪ್ರಸ್ತುತ ಬಂಡಾಯ ಭಿನ್ನವಾಗಿಲ್ಲ: ಪ್ರಸ್ತುತ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಈಗಾಗಲೇ 17 ಶಾಸಕರು ರಾಜೀನಾಮೆ ನೀಡಿದ್ದು, ಬಂಡಾಯ ಶಾಸಕರು ವಿಶೇಷ ವಿಮಾನದಲ್ಲಿ ಮುಂಬೈನಲ್ಲಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಗೋವಾ, ಪುಣೆಗೆ ವಾಸ್ತವ್ಯ ಬದಲಾಯಿಸಬೇಕೆಂಬ ಯತ್ನಗಳು ನಡೆದಿದ್ದವಾದರೂ, ಕೊನೆ ಕ್ಷಣದಲ್ಲಿ ಮುಂಬೈನಲ್ಲೇ ಉಳಿಯುವ ನಿಲುವು ತಾಳಲಾಯಿತು ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ ಅವರು ಮುಂಬೈನಲ್ಲಿನ ಅತೃಪ್ತ ಶಾಸಕರ ಮನವೊಲಿಸಿ ಕರೆತರುವ ನಿಟ್ಟಿನಲ್ಲಿ ಮುಂಬೈಗೆ ತೆರಳಿದ್ದಾರೆ. ಆದರೆ, ಶಾಸಕರಿರುವ ಹೋಟೆಲ್ ಒಳಗೆ ಪ್ರವೇಶಕ್ಕೂ ಅವಕಾಶ ನೀಡದೆ ಗಂಟೆಗಟ್ಟಲೇ ಮಳೆಯಲ್ಲೂ ಗೇಟ್ ಹೊರಗೆ ನಿಲ್ಲುವಂತಾಯಿತು. ಡಿಕೆಶಿ ಶಿಕಾರಿಗೆ ಹೋಗಿದ್ದಾರೆ ಎಂದರೆ ಯಶಸ್ಸು ಖಚಿತ ಎಂಬ ಮಾತು ಈ ಪ್ರಕರಣದಲ್ಲಿ ಸುಳ್ಳಾಗಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ವರ್ಷದ ಬರದ ಸ್ಥಿತಿ ಈ ಬಾರಿಯ ಮುಂಗಾರಿಗೂ ವಿಸ್ತರಿಸಿದಂತಿದೆ. ಮುಂಗಾರು ಮಳೆ ಕೊರತೆಯಿಂದಾಗಿ ಅನೇಕ ಜಿಲ್ಲೆಗಳಲ್ಲಿ ಬರ ಸ್ಥಿತಿ ಇದ್ದರೂ ಅನೇಕ ಶಾಸಕರು ಮುಂಬೈ ರೆಸಾರ್ಟ್ ವಾಸದಲ್ಲಿದ್ದಾರೆ. ಈ ಹಿಂದಿನಂತೆ ಈಗಲೂ ಅತೃಪ್ತ ಶಾಸಕರು ‘ಬಂಧಿ’ಯಾಗಿದ್ದಾರೆಂಬ ಆರೋಪ ಕೇಳಿ ಬರತೊಡಗಿದೆ.