ಹುಬ್ಬಳ್ಳಿ: 2020ರ ಅಂತ್ಯಕ್ಕೆ ದೇಶದ ಪ್ರಮುಖ 21 ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದ್ದರಿಂದ ಈಗಲೇ ನಾವು ಎಚ್ಚರಿಕೆ ವಹಿಸಬೇಕು. ಪ್ರತಿ ಉದ್ಯಮಿ ಸಾಮಾಜಿಕ ಜವಾಬ್ದಾರಿ ಮೆರೆದು ನೀರು ಉಳಿಸಲು ಪ್ರಯತ್ನಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಭರತ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸೂಕ್ಷ್ಮ, ಲಘು, ಮಧ್ಯಮ ಉದ್ಯಮಗಳ ಮಂತ್ರಾಲಯ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಜೆಸಿ ನಗರದ ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಿದ್ದ ಮಳೆ ನೀರು ಕೊಯ್ಲು, ಸೌರಶಕ್ತಿ, ಇ-ತ್ಯಾಜ್ಯ ನಿರ್ವಹಣೆ ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ ದೊರೆಯುವ ಯೋಜನೆ ಮತ್ತು ಆರ್ಥಿಕ ನೆರವು ಕುರಿತ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಎನರ್ಜಿ ಬಳಕೆಯಿಂದ, ಅದರಿಂದ ಉತ್ಪಾದಿತ ಉತ್ಪನ್ನ ಉಪಯೋಗಿಸುವುದರಿಂದ ಲಾಭವಾಗುತ್ತದೆ. ಸರಕಾರದ ಕೈಗಾರಿಕಾ ನೀತಿ ತುಂಬಾ ಉಪಯುಕ್ತವಾಗಿದೆ. ಕಾರ್ಖಾನೆಗೆ ಬಳಸುವ ನೀರನ್ನು ಮರುಪೂರ್ಣ ಮಾಡುವ ವ್ಯವಸ್ಥೆಯಿದ್ದು, ಅದನ್ನು ಬಳಸಿಕೊಳ್ಳಬೇಕು. ಕೈಗಾರಿಕಾ ಘಟಕದಲ್ಲಿ ಮಳೆನೀರು ಕೊಯ್ಲು ಹಾಗೂ ತ್ಯಾಜ್ಯನೀರು ಪುನರ್ ಬಳಕೆಗೆ ವ್ಯವಸ್ಥೆ ಮಾಡಿಕೊಂಡರೆ, ಅದಕ್ಕೆ ಉಪಕರಣಗಳನ್ನು ಬಳಸಿದರೆ ಸರಕಾರದಿಂದ ಶೇ. 75 ಸಬ್ಸಿಡಿ ದೊರೆಯುತ್ತದೆ. ಕೈಗಾರಿಕಾ ನೀತಿ ಅನ್ವಯ ಎಲ್ಲ ಕಾರ್ಖಾನೆಗಳು ಕೆಲಸ ಮಾಡಬೇಕು ಎಂದರು.
ಒಆರ್‌ಬಿ ಸೌರಶಕ್ತಿ ಕಂಪೆನಿಯ ಪ್ರತಿನಿಧಿ ರಮೇಶ ಎಂ.ಪಿ. ಮಾತನಾಡಿ, ಪ್ರಾಕೃತಿಕವಾಗಿ ದೊರೆಯುವ ಶಕ್ತಿ ಬಳಸುವಂತಾಗಬೇಕು. ಸೌರಶಕ್ತಿಯಿಂದ ಗಳಿಕೆ ಮಾಡಿದ ಯುನಿಟ್ಅನ್ನು ಗ್ರೀಡ್‌ನಲ್ಲಿ ಉಳಿಸಿಕೊಂಡು ರಾತ್ರಿಯಲ್ಲಿ ಮನೆಯಲ್ಲಿ ವಿದ್ಯುತ್ ಆಗಿ ಬಳಸಬಹುದು. ಇದರಿಂದ ವಿದ್ಯುತ್ ಕೊರತೆ ಆಗುವುದಿಲ್ಲ. ದೊರೆಯುವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ವಾಣಿಶ್ರೀ ಹಡಗಲಿ ಮಾತನಾಡಿ, ಟಿವಿ, ಡಿವಿಡಿ, ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಇನ್ನಿತರೆ ಇಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಇ-ತ್ಯಾಜ್ಯ ಹೆಚ್ಚಾಗುತ್ತಿದೆ. ಇದರ ಪರಿಣಾಮ ಮನುಷ್ಯನ ಜೀವನದ ಮೇಲೆ ಆಗುತ್ತಿದೆ. ಕಿಡ್ನಿ, ಡಿಎನ್‌ಎ, ಮೆದುಳಿಗೆ ಹಾನಿ ಆಗುತ್ತಿದೆ. ಇ-ತ್ಯಾಜ್ಯ ಪುನರ್ ಬಳಕೆ ಇಲ್ಲವೆ ಮರುಪೂರ್ಣಗೊಳಿಸಲು ಹಾಗೂ ಹೊಸ ಉದ್ಯಮ ಸ್ಥಾಪಿಸಲು ಅವಕಾಶವಿದೆ. ಒಂದು ವರ್ಷದಲ್ಲಿ ಶೇ. 27 ಮಾತ್ರ ಇ-ತ್ಯಾಜ್ಯ ನಿರ್ವಹಣೆ ಮರುಪೂರ್ಣ ಮಾಡುತ್ತಿದ್ದೇವೆ. ಅದು ಹೆಚ್ಚಾಗಬೇಕು ಎಂದರು.
ಕೆಸಿಸಿಐ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಕಚೇರಿ ಮಹಾಪ್ರಬಂಧಕ ರಾಮಕೃಷ್ಣ ನಾಯರ್, ಎಂಎಸ್‌ಎಂಇ-ಡಿಐ ನಿರ್ದೇಶಕ ಮಿಲಿಂದ ಬಾರಪತ್ರೆ, ಸಹಾಯಕ ನಿರ್ದೇಶಕ ಆರ್.ಬಿ. ಅರ್ಕಸಾಲಿ, ರಮೇಶ ಪಾಟೀಲ, ಅಶೋಕ ತೋಳನ್ನವರ, ಕೆಸಿಸಿಐನ ಮಹಿಳಾ ವಿಭಾಗದ ಅಧ್ಯಕ್ಷೆ ರತಿ ಶ್ರೀನಿವಾಸನ್, ಶ್ರೀನಿವಾಸ ಡಿ., ಸುದರ್ಶನ ಡಿ. ಮೊದಲಾದವರಿದ್ದರು. ಮಹೇಂದ್ರ ಲದ್ದಡ ಸ್ವಾಗತಿಸಿದರು. ಅಶೋಕ ಗಡಾದ ನಿರೂಪಿಸಿದರು. ವಿನಯ ಜವಳಿ ವಂದಿಸಿದರು.
ದೀಪಾವಳಿ ಸೇರಿದಂತೆ ಇನ್ನಿತರೆ ಹಬ್ಬಗಳ ಸಂದರ್ಭದಲ್ಲಿ, ಗುರುಗಾಂವ್ ಒಳಗೊಂಡು ಕೈಗಾರಿಕಾ ಪ್ರದೇಶಗಳಲ್ಲಿ ವಾಯುಮಾಲಿನ್ಯ ಮಿತಿ ಮೀರುತ್ತಿದೆ. ನಮಗೆ ಅತ್ಯಂತ ಅವಶ್ಯವಾದ ಸಾಂಪ್ರದಾಯಿಕ ಬಳಕೆ, ಸಂಪನ್ಮೂಲ ಕ್ಷೀಣಿಸುತ್ತಿದೆ. ಪ್ರತಿಯೊಬ್ಬ ನಾಗರಿಕರು, ಉದ್ಯಮದಾರರು ಆ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
•
ಭರತ,
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ