Advertisement

10 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಸೂಚನೆ

12:56 PM Jun 22, 2019 | Naveen |

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಎಲ್ಲ ವಸತಿರಹಿತ ಕುಟುಂಬಗಳಿಗೆ ಹತ್ತು ಸಾವಿರ ಮನೆ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

Advertisement

ಕುಂದಗೋಳ ನಗರದ ಸವಾಯಿ ಗಂಧರ್ವ ಸಮುದಾಯ ಭವನದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕುಂದಗೋಳ ತಾಲೂಕಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಿದ್ಧವಿದೆ. ಅಧಿಕಾರಿಗಳು ಸಮನ್ವಯದಿಂದ ಯೋಜನೆಗಳನ್ನು ರೂಪಿಸಬೇಕು. ತಾಲೂಕಿನ ಎಲ್ಲ ಗ್ರಾಪಂ, ಪಪಂ ಮಟ್ಟದಲ್ಲಿ ಸಮೀಕ್ಷೆ ನಡೆಸಿ ವಸತಿ ಹಾಗೂ ನಿವೇಶನ ಹೀನರನ್ನು ಗುರುತಿಸಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಲು ಹಾಗೂ ನಿವೇಶನ ಇಲ್ಲದವರಿಗೆ ನಿವೇಶನ ಹಂಚಲು ಗ್ರಾಮಗಳಲ್ಲಿ ಖಾಸಗಿ ಜಮೀನು ಖರೀದಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದರು.

ಉದ್ಯೋಗ ಖಾತ್ರಿ ನೀಡಿ: ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ಕುಂದಗೋಳ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 100 ಕೋಟಿ ಮೊತ್ತದ ಕಾಮಗಾರಿಗಳ ಯೋಜನೆ ರೂಪಿಸಬೇಕು. ಸಾರ್ವಜನಿಕ ಆಸ್ತಿ ನಿರ್ಮಾಣ, ವೈಯಕ್ತಿಕವಾಗಿ ರೈತರಿಗೆ ಅನುಕೂಲವಾಗುವಂತೆ ಮನೆ, ಕುರಿ, ದನದಕೊಟ್ಟಿಗೆ, ಶೌಚಾಲಯ, ರೇಷ್ಮೆ ಘಟಕಗಳನ್ನು ನಿರ್ಮಿಸಿಕೊಡಬೇಕು ಎಂದು ಸೂಚಿಸಿದರು.

ಕೇಂದ್ರಸ್ಥಾನದಲ್ಲೇ ನೆಲೆಸಿ: ಕುಂದಗೋಳ ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿಯೇ ವಾಸಿಸಬೇಕು. ಗ್ರಾಮ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ವಾಸವಾಗಿದ್ದು, ಜನರಿಗೆ ಸಹಾಯಕ್ಕೆ ಮನೆಗಳಲ್ಲೂ ಲಭ್ಯವಿರಬೇಕು. ಮುಂದಿನ ಪರಿಶೀಲನಾ ಸಭೆ ವೇಳೆಗೆ ಎಲ್ಲ ಅಧಿಕಾರಿಗಳು ತಮ್ಮ ವಿಳಾಸ ಒದಗಿಸಬೇಕು. ಕೇಂದ್ರಸ್ಥಾನದಲ್ಲಿ ವಾಸ ಮಾಡಲು ಸಾಧ್ಯವಾಗದವರು ಬೇಕಾದಲ್ಲಿ ಹೋಗಬಹುದು ಎಂದು ತಾಕೀತು ಮಾಡಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಡಾ| ಜಯಮಾಲಾ ಮಾತನಾಡಿ, ರಾಜ್ಯ ಸರ್ಕಾರ ದಮನಿತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಸಾವಿರ ಮನೆಗಳನ್ನು ವಿವಿಧ ಯೋಜನೆಯಡಿ ಮೀಸಲಿರಿಸಿದೆ. ಕುಂದಗೋಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ 212 ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಸ್ವಚ್ಛ ಭಾರತ ಆಂದೋಲನ ಅಡಿ ಮಕ್ಕಳಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ಮಿಸಬೇಕು. ತಾಲೂಕಿನ ಸ್ತ್ರೀ ಶಕ್ತಿ ಮಹಿಳಾ ಗುಂಪುಗಳನ್ನು ರಚಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಕುಂದಗೊಳದಲ್ಲಿ ಈವರೆಗೆ ಶೇ.1ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಜೂನ್‌ ತಿಂಗಳಲ್ಲಿ 57 ಮಿಮೀ ಮಳೆಯಾಗಿತ್ತು, ಪ್ರಸಕ್ತ ವರ್ಷದಲ್ಲಿ 35 ಮಿಮೀ ಮಾತ್ರ ಮಳೆಯಾಗಿದೆ. ತಾಲೂಕಿನಲ್ಲಿ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು, ಯಾವುದೇ ಕೊರತೆಯಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ, ವಸತಿ, ಸಮಾಜ ಕಲ್ಯಾಣ, ಆಹಾರ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ತೋಟಗಾರಿಕೆ, ಕಂದಾಯ, ಪೊಲೀಸ್‌ ಇಲಾಖೆಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.

ವಸತಿ ಸಚಿವ ಎನ್‌. ನಾಗರಾಜ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌, ಅರಣ್ಯ ಸಚಿವ ಆರ್‌.ಶಂಕರ್‌, ಶಾಸಕ ಪ್ರಸಾದ್‌ ಅಬ್ಬಯ್ಯ, ಶಾಸಕಿ ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯರಾದ ಶ್ರೀನಿವಾಸ ಮಾನೆ, ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಜಿಪಂ ಸಿಇಒ ಡಾ| ಬಿ. ಸತೀಶ, ಎಸ್ಪಿ ಸಂಗೀತಾ ಜಿ. ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next