Advertisement

ಸೇಫ್ ಸಿಟಿ 

05:22 PM Oct 22, 2018 | Team Udayavani |

ಹುಬ್ಬಳ್ಳಿ: ಅವಳಿ ನಗರದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷತೆ ಕಲ್ಪಿಸಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೇಫ್ ಸಿಟಿಗಾಗಿ ಮಹಾನಗರ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಕೇಂದ್ರ ಸರಕಾರದ ನಿರ್ಭಯ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇಫ್ ಸಿಟಿ ನಿರ್ಭಯ ಅನುದಾನಕ್ಕಾಗಿ ಕಳೆದ ತಿಂಗಳು ಪೊಲೀಸ್‌ ಕಮಿಷನರೇಟ್‌ ವತಿಯಿಂದ ವಿಸ್ತೃತ ಯೋಜನೆ ತಯಾರಿಸಿ ಪೊಲೀಸ್‌ ಮಹಾನಿರ್ದೇಶಕರಿಗೆ ಕಳುಹಿಸಿದ್ದು, ಅಲ್ಲಿಂದ ಗೃಹ ಇಲಾಖೆಗೆ ರವಾನೆಯಾಗಿದೆ.

Advertisement

204 ಕಿಮೀ ರಸ್ತೆಗಳನ್ನು ಹೊಂದಿರುವ ಮಹಾನಗರದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿವೆ. ಸಮೂಹ ಸಾರಿಗೆ ವಾಹನಗಳನ್ನು ಹೊರತುಪಡಿಸಿ ಸುಮಾರು 4.27 ಲಕ್ಷ ವಾಹನಗಳಿವೆ. ಪ್ರಮುಖ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಾಣಿಜ್ಯಾತ್ಮಕವಾಗಿ ಅಭಿವೃದ್ಧಿ, ಹಲವು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ವಿಮಾನಸೇವೆ ಆರಂಭವಾಗಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಹಾನಗರದಲ್ಲಿ ಮಹಿಳೆ-ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅತ್ಯಾಧುನಿಕ ವ್ಯವಸ್ಥೆ ಅಗತ್ಯವಾಗಿದೆ. ಹೀಗಾಗಿ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಸುಮಾರು 81.70 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ.

ಅತ್ಯಾಧುನಿಕ ಸಿಸಿ ಕ್ಯಾಮೆರಾ: ನಗರದ ಪ್ರಮುಖ ಸ್ಥಳಗಳಲ್ಲಿ ವಿವಿಧ ರೀತಿಯ ಅತ್ಯಾಧುನಿಕ ಕ್ಯಾಮೆರಾ ಹಾಗೂ ಸಿಸಿ ಕ್ಯಾಮೆರಾಗಳ ಅಳವಡಿಕೆ ಪ್ರಸ್ತಾವನೆಯಲ್ಲಿವೆ. ವಾಹನದಲ್ಲಿ ಕುಳಿತಿರುವವರನ್ನು ಗುರುತಿಸುವ, ವಾಹನಗಳ ನಂಬರ್‌ ಪ್ಲೇಟ್‌ನ ಸ್ಪಷ್ಟ ಚಿತ್ರಣ, ಪನೋರಮಾ ಚಿತ್ರ ತೆಗೆಯುವ ಕ್ಯಾಮೆರಾ, ಅಲ್ಟ್ರಾ ಹೈ ಡೆಫಿನಿಷನ್‌ ಕ್ಯಾಮೆರಾ ಸೇರಿದಂತೆ 500ಕ್ಕೂ ಹೆಚ್ಚು ಕ್ಯಾಮೆರಾಗಳ ಬೇಡಿಕೆ ಇಡಲಾಗಿದೆ.

ಯಾವ ಸೌಲಭ್ಯ?
ಖಾಸಗಿ ಕಂಪನಿಯೊಂದರ ಮೂಲಕ ಸಮೀಕ್ಷೆ ನಡೆಸಿ ಯೋಜನೆ ತಯಾರಿಸಲಾಗಿದೆ. 81 ಕೋಟಿ ರೂ. ಪ್ರಸ್ತಾವನೆಯಲ್ಲಿ 2 ಕಮಾಂಡ್‌ ಕಂಟ್ರೋಲ್‌ ಕೇಂದ್ರ, ಗಸ್ತು ತಿರುಗಲು 10 ಮೊಬೈಲ್‌ ಠಾಣೆಗಳು, ತುರ್ತು ಸಂದರ್ಭದಲ್ಲಿ ಪೊಲೀಸರನ್ನು ಅಲರ್ಟ್‌ ಮಾಡುವ 200 ಕೇಂದ್ರಗಳು, ಇಲಾಖೆಯಿಂದ ತಕ್ಷಣವೇ ಜನರಿಗೆ ಮಾಹಿತಿ ನೀಡುವ ತಂತ್ರಜ್ಞಾನ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಪೂರಕ ಮೊಬೈಲ್‌ ಆ್ಯಪ್‌, ಪೊಲೀಸ್‌ ಠಾಣೆ, ಸಾರ್ವಜನಿಕ ಸ್ಥಳದಲ್ಲಿ ಸಹಾಯವಾಣಿ, ಅಪರಾಧ ಪತ್ತೆಗೆ ಪೂರಕವಾದ ಸಾಫ್ಟ್‌ವೇರ್‌ ಬೇಡಿಕೆಗಳು ಪ್ರಸ್ತಾವನೆಯಲ್ಲಿವೆ.

ಪಾಲಿಕೆ ಕಾಸು ಉಳಿಕೆ
ಕೆಲ ವಾರ್ಡ್‌ಗಳಲ್ಲಿ ಪಾಲಿಕೆ ಅನುದಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿರ್ವಹಣೆಯನ್ನು ಪೊಲೀಸರಿಗೆ ನೀಡಲಾಗಿದೆ. ಇನ್ನೂ ಕೆಲವೆಡೆ ಪೊಲೀಸ್‌ ಇಲಾಖೆಯಿಂದ ಕ್ಯಾಮೆರಾ ಅಳವಡಿಸಲಾಗಿದೆ. ನಿರ್ಭಯ ಅನುದಾನದಲ್ಲಿ ನೆರವು ದೊರೆತರೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಬಳಸುವ ಪಾಲಿಕೆ ಅನುದಾನವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.

Advertisement

ಅನುಕೂಲವೇನು?
ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಪೂರಕವಾಗಿ ನಿರ್ಭಯ  ಅನುದಾನದಡಿ ಪ್ರಮುಖ ನಗರಗಳಿಗೆ ಕೇಂದ್ರ ಸರಕಾರ ನೆರವು ನೀಡುತ್ತದೆ. ತುರ್ತು ಸಂದರ್ಭದಲ್ಲಿ ಕಂಟ್ರೋಲ್‌ ಕೇಂದ್ರಕ್ಕೆ ಎಚ್ಚರಿಕೆ ನೀಡುವಂತೆ 200 ಕೇಂದ್ರಗಳು ನಗರದ ಆಯಕಟ್ಟಿನ ಸ್ಥಳಗಳಲ್ಲಿ ಇರಲಿವೆ. ತಕ್ಷಣವೇ ಆ ಸ್ಥಳಕ್ಕೆ ಮೊಬೈಲ್‌ ಠಾಣೆ ಪೊಲೀಸರು ಆಗಮಿಸಲು ನೆರವಾಗುತ್ತದೆ. ಸುರಕ್ಷತೆ ದೃಷ್ಟಿಯಲ್ಲಿ ಮಹಿಳೆಯರು ಮೊಬೈಲ್‌ ಮೂಲಕ ಸಂದೇಶ ರವಾನಿಸುವ ಅತ್ಯಾಧುನಿಕ ಆ್ಯಪ್‌ ಗಳು  ದೊರೆಯಲಿವೆ. ವಿವಿಧ ಭಾಗದಲ್ಲಿ ಅಳವಡಿಸುವ ಕ್ಯಾಮೆರಾಗಳಿಂದ ಅಪರಾಧ ಕೃತ್ಯಗಳ ಪತ್ತೆಗೆ ಹೆಚ್ಚಿನ ನೆರವು ದೊರೆಯಲಿದೆ.

ರಾಜ್ಯ ಸರಕಾರದಿಂದ ಪ್ರಸ್ತಾವನೆಯನ್ನು ಆದಷ್ಟು ಬೇಗ ಕೇಂದ್ರಕ್ಕೆ ಕಳುಹಿಸಿದರೆ ಸಂಬಂಧಿಸಿದ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಕಳೆದ ವಾರ ಪ್ರಸ್ತಾವನೆ ಕುರಿತು ಪರಿಶೀಲಿಸಿದಾಗ ಇನ್ನೂ ಬಂದಿರಲಿಲ್ಲ. ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ತಲುಪುತ್ತಿದ್ದಂತೆ ಅನುದಾನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಪೊಲೀಸ್‌ ಇಲಾಖೆಯಿಂದ ಒಂದು ಪ್ರಸ್ತಾವನೆ ಪ್ರತಿ ನನಗೆ ತಲುಪಿಸಿದರೆ ಉತ್ತಮ.
 ಪ್ರಹ್ಲಾದ ಜೋಶಿ, ಸಂಸದ 

ನಗರದ ಸುರಕ್ಷತೆ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಅಗತ್ಯವಾಗಿದೆ. ಕೇಂದ್ರ ಸರಕಾರ ಪ್ರಸ್ತಾವನೆಗೆ ಪೂರಕವಾಗಿ ಅನುದಾನ ನೀಡಿದರೆ ಮಕ್ಕಳ ಮತ್ತು ಮಹಿಳೆಯರ ರಕ್ಷಣೆಗೆ ನೆರವಾಗಲಿದೆ. ಸುರಕ್ಷತೆ ದೃಷ್ಟಿಯಿಂದ ಆ್ಯಪ್‌, ಮೊಬೈಲ್‌ ಠಾಣೆ ಸೇರಿದಂತೆ ಹಲವು ಸೌಲಭ್ಯಗಳು ಹೆಚ್ಚಾಗುತ್ತವೆ. ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಕಡಿವಾಣ ಹಾಗೂ ಅವುಗಳು ಮೇಲೆ ನಿಗಾ ಇಡಲು ಅನುಕೂಲವಾಗುತ್ತದೆ.
 ಬಿ.ಎಸ್‌. ನೇಮಗೌಡ, ಡಿಸಿಪಿ

„ಹೇಮರಡ್ಡಿ ಸೈದಾಪುರ 

Advertisement

Udayavani is now on Telegram. Click here to join our channel and stay updated with the latest news.

Next