Advertisement

ಹುಬ್ಬಳ್ಳಿ: ಆಧಾರ್‌ ಕೇಂದ್ರಗಳಿಗೆ ಮುಗಿಬಿದ್ದ ಜನತೆ

03:27 PM Jun 10, 2023 | Team Udayavani |

ಹುಬ್ಬಳ್ಳಿ: ಆಧಾರ್‌ ಕಾರ್ಡ್‌ ಇಲ್ಲದೆ ಯಾವುದೇ ಸೌಲಭ್ಯವಿಲ್ಲ ಎನ್ನುವಷ್ಟು ಅಗತ್ಯವಾಗಿದ್ದು, ಹೊಸ ಕಾರ್ಡ್‌ ಮಾಡಿಸಲು ಹಾಗೂ ತಿದ್ದುಪಡಿಗಾಗಿ ಜನರು ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. ಶಾಲೆ ಆರಂಭ, ಪಾನ್‌ಕಾರ್ಡ್‌ಗೆ ಲಿಂಕ್‌, ಸರಕಾರದ
ಹೊಸ ಯೋಜನೆಗಳಿಂದಾಗಿ ಆಧಾರ್‌ ಸೇವಾ ಕೇಂದ್ರಗಳು ಗಿಜುಗುಡುವಂತವಾಗಿದೆ. ಜನದಟ್ಟಣೆ ನಿಯಂತ್ರಣಕ್ಕಾಗಿ ಕೆಲವೆಡೆ ಒಂದೆರಡು ದಿನ ಟೋಕನ್‌ ನೀಡುವಂತಾಗಿದೆ.

Advertisement

ನಗರದಲ್ಲಿರುವ ಆಧಾರ್‌ ಸೇವಾ ಕೇಂದ್ರ ಸೇರಿದಂತೆ ಕರ್ನಾಟಕ ಒನ್‌, ಖಾಸಗಿ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ನ ವಿವಿಧ ಕಾರ್ಯಗಳಿಗಾಗಿ ಜನರ ಮುಗಿಬಿದ್ದಿದ್ದಾರೆ. ಚಿಟಗುಪ್ಪಿ ಪಾರ್ಕ್‌ನಲ್ಲಿರುವ ಆಧಾರ್‌ ಸೇವಾ ಕೇಂದ್ರದಲ್ಲಿ ದಿನನಿತ್ಯವೂ ನೂರಾರು ಜನರು ಆಧಾರ್‌ ಕಾರ್ಡ್‌ ತಿದ್ದುಪಡಿ, ಹೊಸ ಆಧಾರ್‌ ಕಾರ್ಡ್‌ಗಾಗಿ ಓಡಾಡುತ್ತಿದ್ದಾರೆ.

ಮಹಾನಗರ ವ್ಯಾಪ್ತಿಯಲ್ಲಿ ಇದು ದೊಡ್ಡ ಕೇಂದ್ರವಾಗಿದ್ದು, ಕಡಿಮೆ ಶುಲ್ಕವಾಗಿರುವುದರಿಂದ ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಈ ಕೇಂದ್ರದಲ್ಲಿ 6 ಕೌಂಟರ್‌ಗಳಿದ್ದು 12 ಜನ ಸಿಬ್ಬಂದಿ ನಿತ್ಯ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಸುಮಾರು 250ರಿಂದ 300 ಆಧಾರ್‌ ಕಾರ್ಡ್‌ ಮಾಡಬಹುದಾಗಿದೆ. ಅದು ಕೂಡಾ ಸರಿಯಾಗಿ ಸರ್ವರ್‌ ಇದ್ದರೆ ಮಾತ್ರ. ಹೆಚ್ಚಿನ ಜನಸಂದಣಿ ಇದ್ದಲ್ಲಿ ಮೂರು ದಿನದೊಳಗಿನ ಕೂಪನ್‌ ನೀಡಿ ಕಳುಹಿಸಲಾಗುತ್ತಿದೆ.

ಶಾಲೆಗಳು ಆರಂಭ: ಆಧಾರ್‌-ಪಾನ್‌ ಲಿಂಕ್‌ ಒಂದೆಡೆಯಾದರೆ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಆಧಾರ್‌ ಕಾರ್ಡಿನಲ್ಲಿನ ಕೆಲ ತಿದ್ದುಪಡಿ ಮಾಡಿಸುತ್ತಿದ್ದಾರೆ. ಹೀಗಾಗಿ ಜನದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಕಳೆದ ಒಂದು ವಾರದಿಂದ ದಟ್ಟಣೆ ಹೆಚ್ಚಾಗಿದ್ದು, ಶಾಲೆ ಆರಂಭದ ಪೂರ್ವ ಮೊಬೈಲ್‌ ನಂಬರ್‌ ಬದಲಾವಣೆ, ವಿಳಾಸ, ಹೆಸರು ತಿದ್ದುಪಡಿ ಸೇರಿದಂತೆ ಇತರೆ ಯಾವುದೇ ಕಾರ್ಯಕ್ಕೂ ಇಷ್ಟೊಂದು ಜನರು ಇರಲಿಲ್ಲ.

ದಿನಕ್ಕೆ 250 ಆಧಾರ್‌ ಕಾರ್ಡ್‌: ಈ ಸೇವಾ ಕೇಂದ್ರದಲ್ಲಿ ದಿನಕ್ಕೆ 250 ಕಾರ್ಡ್‌ ಗಳ ಕಾರ್ಯ ಆಗುತ್ತಿದೆ. ಆದರೆ ಕಳೆದ ಮೂರ್‍ನಾಲ್ಕು ದಿನಗಳಿಂದ ಜನದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದು ಅಥವಾ ಎರಡು ದಿನಗಳ ನಂತರದಲ್ಲಿ ಬರುವಂತೆ ಟೋಕನ್‌ ನೀಡಲಾಗುತ್ತಿದೆ. ಇಷ್ಟೊಂದು ಸಾಮರ್ಥ್ಯವಿದ್ದರೂ ಕೆಲವೊಮ್ಮೆ ಸರ್ವರ್‌ ಕಣ್ಣಮುಚ್ಚಾಲೆ ಇರುತ್ತದೆ. ಸರ್ವರ್‌ ಸಮಸ್ಯೆ ಇಲ್ಲದಿದ್ದರೆ 250 ಟಾಗೇìಟ್‌ ಮುಟ್ಟಬಹುದಾಗಿದೆ.ಒಂದು ವೇಳೆ ಸರ್ವರ್‌ ಕೈ ಕೊಟ್ಟರೆ ದೇವರೆ ಗತಿ ಎನ್ನುವಂತಾಗಿದೆ.

Advertisement

ಈ ಸಮಸ್ಯೆ ಕೇವಲ ಆಧಾರ್‌ ಸೇವಾ ಕೇಂದ್ರ ಅಷ್ಟೇ ಅಲ್ಲದೇ ಹು-ಧಾ ಮಹಾನಗರದಲ್ಲಿರುವ 11 ಕರ್ನಾಟಕ ಒನ್‌ ಕೇಂದ್ರಗಳು, ಅಂಚೆ ಕಚೇರಿಗಳು ಹಾಗೂ ಖಾಸಗಿ ಬ್ಯಾಂಕ್‌, ಆಧಾರ್‌ ಸೇವಾ ಕೇಂದ್ರಗಳಲ್ಲೂ ದಟ್ಟಣೆ ಹೆಚ್ಚಾಗಿದೆ. ಆದರೆ ಇಂತಹ ಕೇಂದ್ರಗಳಿಗೆ ಜನರು ತೆರಳಿದರೆ ಕಾಯುವ ಪ್ರಮೇಯ ಇರುವುದಿಲ್ಲ. ನಿರೀಕ್ಷಿತ ಸಮಯಕ್ಕಿಂತ ಹೆಚ್ಚುಕಡಿಮೆ ಅವಧಿಯಲ್ಲಿ ಕೆಲಸ ಮುಗಿಯಲಿದೆ.

ಕೇಂದ್ರಗಳಲ್ಲಿ ಉಚಿತವಿಲ್ಲ
ಕಳೆದ ಕೆಲವು ದಿನಗಳ ಜೂ.15ರವರೆಗೆ ಉಚಿತವಾಗಿ ಆಧಾರ್‌ ಕಾರ್ಡ್‌ ತಿದ್ದುಪಡಿ ಎನ್ನುವ ಮಾಹಿತಿ ಹರಿದಾಡಿದ ಪರಿಣಾಮ ಇಷ್ಟೊಂದು ದಟ್ಟಣೆಗೆ ಕಾರಣವಾಗಿರುವ ಸಾಧ್ಯತೆಯಿದೆ. ಕೇವಲ ಆನ್‌ಲೈನ್‌ ಮಾತ್ರ ಉಚಿತವಾಗಿ ಮಾಡಿಕೊಳ್ಳಬಹುದಾಗಿದ್ದು, ಜನರು ತಪ್ಪಾಗಿ ಅರ್ಥೈಸಿಕೊಂಡು ಆಗಮಿಸುತ್ತಿದ್ದಾರೆ. ಆನ್‌ ಲೈನ್‌ ಹೊರತುಪಡಿಸಿ ಇತರೆ ಎಲ್ಲಾ ಕೇಂದ್ರಗಳಲ್ಲೂ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆಧಾರ್‌ ಸೇವಾ ಕೇಂದ್ರಗಳಿಗೆ ಜನರು ಮುಗಿಬೀಳದೆ ಇತರೆ ಕೇಂದ್ರ, ಬ್ಯಾಂಕ್‌ಗಳಿಗೆ ತೆರಳಿದರೆ ಕಡಿಮೆ ಅವಧಿಯಲ್ಲಿ ಸೇವೆ ಪಡೆಯಬಹುದಾಗಿದೆ. ಇನ್ನೂ ನಾಲ್ಕೈದು ದಿನ ಕಾದರೆ ಸುಲಭವಾಗಿ ಈ ಸೇವೆ ಪಡೆಯಬಹುದಾಗಿದೆ.

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದರೆ ಮಾತ್ರ ಮೂರು ದಿನಗಳ ಟೋಕನ್‌ ನೀಡಿ ಕಳುಹಿಸಲಾಗುತ್ತಿದೆ. ಸರ್ವರ್‌ ಸಮಸ್ಯೆ ಎದುರಾದರೆ ಇದು ಮತ್ತಷ್ಟು ವಿಳಂಬವಾಗಲಿದೆ. ಇತ್ತೀಚೆಗೆ ಕೇವಲ ಜಿಲ್ಲೆ ಅಷ್ಟೇ ಅಲ್ಲದೇ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರದಿಂದಲೂ ಜನರು ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳಲು ನಮ್ಮ ಕೇಂದ್ರಕ್ಕೆ ಬರುತ್ತಿದ್ದಾರೆ.
ರೋಹಿತ್‌ ಎಂ.,
ಆಧಾರ್‌ ಸೇವಾ ಕೇಂದ್ರದ ಮುಖ್ಯಸ್ಥ

ಕರ್ನಾಟಕ ಒನ್‌ ಕೇಂದ್ರದ 11 ಶಾಖೆಗಳಲ್ಲೂ ಆಧಾರ್‌ ಕಾರ್ಡ್‌ ಮಾಡಲಾಗುತ್ತಿದೆ. ಕೆಲವೊಂದು ಕೇಂದ್ರಗಳಲ್ಲಿ ಜನರೇ ಇರುವುದಿಲ್ಲ, ಇನ್ನು ಕೆಲವು ಕೇಂದ್ರಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುತ್ತದೆ. ಆದ್ದರಿಂದ ಜನರು ಖಾಲಿ ಇರುವ ಕೇಂದ್ರಗಳ ಮಾಹಿತಿ ಪಡೆದುಕೊಂಡು ಅಲ್ಲಿ ಹೋಗಿ ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳಬಹುದು.
ಮಧುಮತಿ ಸಂದಿಮನಿ,
ಜಿಲ್ಲಾ ಸಂಯೋಜಕಿ, ಕರ್ನಾಟಕ ಒನ್‌

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next