Advertisement

ಹುಬ್ಬಳ್ಳಿ: ಇನ್ನಷ್ಟು ಸ್ಥಳಾವಕಾಶ ನಿರೀಕ್ಷೆಯಲ್ಲಿ ನಮ್ಮ ಕ್ಲಿನಿಕ್‌-ಉತ್ತಮ ಸ್ಪಂದನೆ

03:30 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇಲ್ಲಿನ ಭೈರಿದೇವಕೊಪ್ಪದ ರೇಣುಕಾ ನಗರದಲ್ಲಿ ಆರಂಭಗೊಂಡಿದ್ದ ರಾಜ್ಯದ ಮೊದಲ “ನಮ್ಮ ಕ್ಲಿನಿಕ್‌’ ಗೆ ಜನರ ಸ್ಪಂದನೆ ಮುಂದುವರಿದಿದ್ದು, ನಿತ್ಯವೂ ಸರಾಸರಿ 50-70 ಜನರು ತಪಾಸಣೆ, ಚಿಕಿತ್ಸೆಗೆ
ಆಗಮಿಸುತ್ತಿದ್ದಾರೆ. ಜನಾನುಕೂಲದ ದೃಷ್ಟಿಯಿಂದ ಕ್ಲಿನಿಕ್‌ಗೆ ಇನ್ನಷ್ಟು ದೊಡ್ಡದಾದ ಕಟ್ಟಡದ ಅವಶ್ಯಕತೆ ಇದೆ.

Advertisement

ಚುನಾವಣಾ ಹೊಸ್ತಿಲಲ್ಲಿ ಅಂದಿನ ಬಿಜೆಪಿ ಸರ್ಕಾರ ಆರಂಭಿಸಿದ್ದ “ನಮ್ಮ ಕ್ಲಿನಿಕ್‌’ ಚುನಾವಣಾ ಪೂರ್ವದ ಭರವಸೆಯಂತಿದ್ದು, ಎಷ್ಟು ದಿನ ನಡೆಯುತ್ತದೆಯೋ ಎಂಬ ಅನಿಸಿಕೆ ಕೆಲವರದ್ದಾಗಿತ್ತು. ಸರ್ಕಾರ ಬದಲಾದರೂ ನಮ್ಮ ಕ್ಲಿನಿಕ್‌ ನಿರಾತಂಕವಾಗಿ ಮುಂದುವರಿದಿದೆ.ಭೈರಿದೇವಕೊಪ್ಪದ ರೇಣುಕಾನಗರದಲ್ಲಿನ ಕ್ಲಿನಿಕ್‌ ಸುತ್ತಮುತ್ತಲ ಬಡಾವಣೆಗಳ ಜನರ ಆರೋಗ್ಯ ಸೇವೆಗೆ ಉತ್ತಮ ಆಸರೆಯಾಗಿದೆ.

ಒಂದೇ ಸೂರಿನಡಿ ಪ್ರಾಥಮಿಕ ಹಂತದ ವಿವಿಧ ಆರೋಗ್ಯ ಸೇವೆಗಳು ಬಡವರಿಗೆ ದೊರೆಯುವಂತಾಗಬೇಕು ಎಂಬ ಪರಿಕಲ್ಪನೆ
ನಮ್ಮ ಕ್ಲಿನಿಕ್‌ನದ್ದಾಗಿದೆ. ಕ್ಲಿನಿಕ್‌ನಲ್ಲಿ ಪ್ರಸ್ತುತ ಒಬ್ಬ ವೈದ್ಯಾಧಿಕಾರಿ, ಒಬ್ಬ ಲ್ಯಾಬ್‌ ತಂತ್ರಜ್ಞ, ಒಬ್ಬರು ಸ್ಟಾಫ್‌ ನರ್ಸ್‌, ಒಬ್ಬರು ಡಿ ಗ್ರುಪ್‌ ನೌಕರ ಸೇರಿ ಒಟ್ಟು ನಾಲ್ಕು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಧುಮೇಹ, ರಕ್ತದೊತ್ತಡ, ಮೂತ್ರ ಪರೀಕ್ಷೆ, ಗರ್ಭಧಾರಣೆ, ಡೆಂಘೀ, ಮಲೇರಿಯಾ, ಹಿಮೊಗ್ಲೋಬಿನ್‌, ಎಚ್‌ಐವಿ, ಎಚ್‌ಬಿಎಸ್‌ಎಜಿ, ವಿಡಿಆರ್‌ಎಲ್‌, ವಾಟರ್‌ ಟೆಸ್ಟ್‌, ಕಫ ಪರೀಕ್ಷೆ, ವಿಐಎ, ಅಯೋಡಿನ್‌ ಮತ್ತು ಸಾಲ್ಟ್ ಪರೀಕ್ಷೆ-ತಪಾಸಣೆ ಕೈಗೊಳ್ಳಲಾಗುತ್ತಿದೆ.

ನಮ್ಮ ಕ್ಲಿನಿಕ್‌ಗೆ ಬರುವ ಜನರ ವಿವಿಧ ವ್ಯಾದಿಗಳಿಗೆ ಅಗತ್ಯವಿರುವ ಎಲ್ಲ ತರಹದ ಔಷಧಿಗಳನ್ನು ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿದೆ. ಔಷಧ ಸಂಗ್ರಹ ಇಲ್ಲದ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಹೊರಗಡೆ ಬರೆದುಕೊಡಲಾಗುತ್ತದೆ. ಸಾರ್ವಜನಿಕರು ಕೆಮ್ಮು, ಜ್ವರ, ಶೀತ, ಮೈ-ಕೈ ನೋವು, ಕಣ್ಣಿನ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳ ತಪಾಸಣೆ, ಚಿಕಿತ್ಸೆಗೆ ಬಂದಾಗ ಪರಿಶೀಲನೆ ನಡೆಸಿ ಅದಕ್ಕೆ ಸೂಕ್ತ ಔಷಧೋಪಚಾರ ಮಾಡಲಾಗುತ್ತದೆ. ಇನ್ನು ಹೆಚ್ಚಿನ ಚಿಕಿತ್ಸೆ ಅಗತ್ಯವೆನಿಸಿದರೆ ಕಿಮ್ಸ್‌ಗೆ ಕಳುಹಿಸಿಕೊಡಲಾಗುತ್ತಿದೆ.

Advertisement

ನಮ್ಮ ಕ್ಲಿನಿಕ್‌ಗೆ ಭೈರಿದೇವಕೊಪ್ಪ, ರೇಣುಕಾ ನಗರ, ಉಣಕಲ್ಲ, ನವನಗರ, ಎಪಿಎಂಸಿ, ಅಮರಗೋಳ, ಶಾಂತಿ ಕಾಲೋನಿ, ಶ್ರೀನಗರ, ಸಾಯಿನಗರ, ಜ್ಯೋತಿ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಜನರು ಆಗಮಿಸಿ ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆ.

ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 4:30ರ ವರೆಗೆ ಸೇವೆ ನೀಡುತ್ತಿದೆ. ಮಹಾನಗರದ ವಿವಿಧ ಕಡೆಗಳಲ್ಲಿ ಇನ್ನಷ್ಟು ಕ್ಲಿನಿಕ್‌ ಆರಂಭಿಸಲಾಗುವುದು ಎಂಬ ಭರವಸೆ ಸರ್ಕಾರದಿಂದ ದೊರೆತಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.

ಕ್ಲಿನಿಕ್‌ ಇನ್ನೂ ದೊಡ್ಡದಾಗಬೇಕು ಸದ್ಯ ಭೈರಿದೇವಕೊಪ್ಪದ “ನಮ್ಮ ಕ್ಲಿನಿಕ್‌’ ತುಂಬಾ ಚಿಕ್ಕದಾಗಿದೆ. ಇದನ್ನು ಇನ್ನೂ ಸ್ವಲ್ಪ ದೊಡ್ಡದು ಮಾಡುವ ಮೂಲಕ ಎರಡು ಕೊಠಡಿಗಳನ್ನು ಕಟ್ಟಿಸಿದಲ್ಲಿ ನಮ್ಮ ಕ್ಲಿನಿಕ್‌ಗೆ ಹೆಚ್ಚಿನ ಮೆರಗು ಬರಲಿದೆ.

ನಮ್ಮ ಕ್ಲಿನಿಕ್‌ನಿಂದ ತುಂಬಾ ಅನುಕೂಲವಾಗಿದೆ. ಈ ಹಿಂದೆ ಆರೋಗ್ಯದಲ್ಲಿ ಏರುಪೇರು ಆದಲ್ಲಿ ಖಾಸಗಿ ಆಸ್ಪತ್ರೆ, ಇಲ್ಲವೇ ನವನಗರ, ಕಿಮ್ಸ್‌ ಹೋಗುವ ಸ್ಥಿತಿ ಇತ್ತು. ಆದರೆ ಕಳೆದ ಒಂದು ವರ್ಷದಿಂದ  ಇಲ್ಲಿ ನಮ್ಮ ಕ್ಲಿನಿಕ್‌ ಆರಂಭವಾದಾಗಿನಿಂದ
ಇಲ್ಲಿಯೇ ಚಿಕಿತ್ಸೆ ಸಿಗುತ್ತಿದೆ.
ಜ್ಯೋತಿ ಬಾಗಲಿ,
ರೇಣುಕಾನಗರ ನಿ.

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next