Advertisement

ಹುಬ್ಬಳ್ಳಿ:ಕಮಲ ಪಾಳೆಯಕ್ಕೆ ಆಪರೇಷನ್‌ ಹಸ್ತ ಭೀತಿ

03:51 PM Jun 17, 2023 | Team Udayavani |

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಪರೇಷನ್‌ ಹಸ್ತದ ಭೀತಿಗೆ ಒಳಗಾಗಿದೆ. ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ರೆಸಾರ್ಟ್‌ ರಾಜಕೀಯಕ್ಕೆ ಮುಂದಾಗಿದೆ.

Advertisement

ಸರಿಸುಮಾರು 26-27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರ ವಿಚಾರವಾಗಿ ರೆಸಾರ್ಟ್‌ ರಾಜಕೀಯ ಶುರುವಾಗಿದೆ. ಪಾಲಿಕೆ ಎರಡನೇ ಅವಧಿಗೆ ಮಹಾಪೌರ- ಉಪಮಹಾಪೌರರ ಆಯ್ಕೆಗೆ ಮೀಸಲು ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ರಾಜ್ಯದಲ್ಲಿ ಅಧಿಕಾರ ಹಿಡಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಲ್ಲಿ ಪ್ರಭುತ್ವ ಸಾಧಿಸಲು ಹವಣಿಸುತ್ತಿದೆ. ಇದು ಹಲವು ವಿದ್ಯಮಾನಗಳಿಗೆ ಕಾರಣವಾಗತೊಡಗಿದೆ.

ಮುಖ್ಯವಾಗಿ ಮೂರು ದಶಕಗಳ ಕಾಲ ಬಿಜೆಪಿಯಲ್ಲೇ ಗುರುತಿಸಿಕೊಂಡು ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಕರಾಮತ್ತು ತೋರಿದರೆ ಹೇಗೆ ಎಂಬ ಆತಂಕ ಬಿಜೆಪಿಯನ್ನು ಕಾಡುವಂತಾಗಿದೆ. ಮಹಾನಗರ ಪಾಲಿಕೆ ಒಟ್ಟು 82 ಸದಸ್ಯ ಬಲವನ್ನು ಹೊಂದಿದ್ದು, ಬಿಜೆಪಿ 39 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಲ್ಲದೆ, ಪಕ್ಷೇತರರ ಬೆಂಬಲ, ಸಂಸದರು, ವಿಧಾನಸಭೆ-ವಿಧಾನಪರಿಷತ್ತು ಸದಸ್ಯರ ಬೆಂಬಲದೊಂದಿಗೆ ಸತತವಾಗಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಕಾಂಗ್ರೆಸ್‌ ಪಕ್ಷ 33 ಸ್ಥಾನಗಳೊಂದಿಗೆ ಎರಡನೇ ಅತಿ ದೊಡ್ಡ ಪಕ್ಷವಾಗಿತ್ತಲ್ಲದೆ, ವಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಬಿಜೆಪಿಯಲ್ಲಿ ತೀವ್ರ ಪೈಪೋಟಿ ನಡುವೆ ಅಂತಿಮ ಕ್ಷಣದಲ್ಲಿನ ಸಂಧಾನದೊಂದಿಗೆ ಈರೇಶ ಅಂಚಟಗೇರಿ ಮಹಾಪೌರರಾಗಿ, ಉಮಾ ಮುಕುಂದ ಉಪ ಮಹಾಪೌರರಾಗಿ ಆಯ್ಕೆಯಾಗಿದ್ದರು.

ಪಾಲಿಕೆ ಪ್ರಸ್ತುತ ಆಡಳಿತ ಮಂಡಳಿಯ ಎರಡನೇ ಅವಧಿಗೆ ಮಹಾಪೌರ-ಉಪ ಮಹಾಪೌರ ಚುನಾವಣೆ ಘೋಷಣೆಯಾಗಿದ್ದು, ಮಹಾಪೌರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಬಿಜೆಪಿಯಲ್ಲಿ ಹಲವರ ಹೆಸರುಗಳು ಕೇಳಿಬರುತ್ತಿವೆಯಾದರೂ ಪ್ರಮುಖವಾಗಿ ಧಾರವಾಡದ ಜ್ಯೋತಿ ಪಾಟೀಲ, ಹುಬ್ಬಳ್ಳಿಯ ರೂಪಾ ಶೆಟ್ಟಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.

Advertisement

ಮತ್ತೊಂದು ಕಡೆ ಸಂಖ್ಯಾಬಲ ಇಲ್ಲವಾದರೂ ಬದಲಾದ ರಾಜಕೀಯ ಸನ್ನಿವೇಶದ ಲಾಭ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧಿಕಾರದ ಯತ್ನಕ್ಕೆ ಮುಂದಾಗಿದೆ.

ಮಾಡಿದ್ದುಣ್ಣೋ ಮಹಾರಾಯ: ಈ ನಾಣ್ಣುಡಿ  ಬಿಜೆಪಿಗೆ ಅನ್ವಯವಾದಂತೆ ಭಾಸವಾಗುತ್ತಿದೆ. ರಾಜ್ಯ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಇನ್ನೊಂದು ಪಕ್ಷದ ಶಾಸಕರನ್ನು ಸೆಳೆದು ಆಪರೇಷನ್‌ ಕಮಲ ನಡೆಸಿದ್ದ ಬಿಜೆಪಿ, ಆಪರೇಷನ್‌ ಸಂಸ್ಕೃತಿ ಹುಟ್ಟುಹಾಕಿ ಅದಕ್ಕೊಂದು ಸ್ಪಷ್ಟ ರೂಪ ನೀಡಿತ್ತು. ಇದೀಗ ಅದೇ ಆಪರೇಷನ್‌ ಸಂಸ್ಕೃತಿ ಬಿಜೆಪಿಗೆ ಉಲ್ಟಾ ಹೊಡೆಯುತ್ತಿರುವಂತೆ ಭಾಸವಾಗತೊಡಗಿದೆ.

ಮಾಜಿ ಸಿಎಂ ಜಗದೀಶ ಶೆಟ್ಟರ ಅವರನ್ನು ಸೆಳೆದಿರುವ ಕಾಂಗ್ರೆಸ್‌ ಇದೀಗ ಅವರ ಮುಖೇನವೇ ಸುಮಾರು ಒಂದುವರೆ ಎರಡು ದಶಕಗಳಿಂದ ಕೈ ತಪ್ಪಿರುವ ಹು-ಧಾ ಮಹಾನಗರ ಪಾಲಿಕೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ತನ್ನದೇ ಯತ್ನಕ್ಕೆ ಮುಂದಾಗಿದೆ. ಅವಕಾಶ ಸಿಕ್ಕರೆ ಆಪರೇಷನ್‌ ಹಸ್ತಕ್ಕೂ ಮುಂದಾಗುವ ಮೂಲಕ ಬಿಜೆಪಿಗೆ ಆಪರೇಷನ್‌ ತಿರುಗೇಟಿಗೆ ಮುಂದಾಗಿದೆ. ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದು, ಅಭಿವೃದ್ಧಿಗೆ ಸಹಕಾರವಾಗಲಿದೆ ಎಂಬ ದಾಳ ಉರುಳಿಸಲು ಮುಂದಾಗಿದೆ. ಕಾಂಗ್ರೆಸ್‌ ನವರು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ನಮ್ಮ ಸದಸ್ಯರಿಗೆ ಆಮಿಷವೊಡ್ಡಲು ಮುಂದಾಗಿದ್ದಾರೆ ಎಂಬುದು ಬಿಜೆಪಿ ಆರೋಪವಾಗಿದೆ.

26-27 ವರ್ಷಗಳ ನಂತರ..
ಪಾಲಿಕೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಜನಸಂಘ, ಬಿಜೆಪಿ ಪಕ್ಷಗಳು ಅಧಿಕಾರ ನಡೆಸಿವೆ. ಜೆಡಿಎಸ್‌-ಕಾಂಗ್ರೆಸ್‌ -ಬಿಜೆಪಿ ಜತೆಗೂಡಿಯೂ ಅಧಿಕಾರ ಅನುಭವಿಸಿವೆ. ಪಾಲಿಕೆಯಲ್ಲಿ ಮಹಾಪೌರ-ಉಪಮಹಾಪೌರ ಸ್ಥಾನಗಳಿಗೆ ಎಷ್ಟೇ ಪೈಪೋಟಿ ಎದುರಾದರೂ ರೆಸಾರ್ಟ್‌ ರಾಜಕೀಯ ಆಗಿರಲಿಲ್ಲ. ಆದರೆ, ಈ ಹಿಂದೆ ಜನತಾ ಪರಿವಾರದಿಂದ ವಿಜಯಕುಮಾರ ಹೊಸಕೋಟೆಯವರು ಮಹಾಪೌರರಾಗುವ ಸಂದರ್ಭದಲ್ಲಿ ದೊಡ್ಡ ರಂಪಾಟವೇ ನಡೆದಿತ್ತು. ಪಾಲಿಕೆ ಆವರಣ ರಣರಂಗವಾಗಿ ಮಾರ್ಪಟ್ಟಿತ್ತು. ಜನತಾ ಪರಿವಾರದ ಕೆಲ ಸದಸ್ಯರನ್ನು ಬಿಜೆಪಿಯವರು ಸೆಳೆದುಕೊಂಡು ನವೀಲುತೀರ್ಥ ಅತಿಥಿಗೃಹ ಸೇರಿದಂತೆ ಕೆಲವೊಂದು ಕಡೆ ಇರಿಸಿದ್ದರು. ಇದಾದ ಸುಮಾರು 26-27 ವರ್ಷಗಳ ನಂತರದಲ್ಲಿ ಇದೀಗ ಸ್ಪಷ್ಟ ರೂಪದ ರೆಸಾರ್ಟ್‌ ರಾಜಕೀಯಕ್ಕೆ ಬಿಜೆಪಿ ಮುಂದಾಗಿದೆ.

ದಾಂಡೇಲಿ ರೆಸಾರ್ಟ್‌ಗೆ ಶಿಫ್ಟ್‌?
ಬಿಜೆಪಿ ಒಬ್ಬರು ಸಂಸದರು, ಇಬ್ಬರು ವಿಧಾನಸಭೆ ಸದಸ್ಯರು, ಇಬ್ಬರು ವಿಧಾನಪರಿಷತ್ತು ಸದಸ್ಯರನ್ನು ಹೊಂದಿದ್ದು, ಪಕ್ಷೇತರರ ಬೆಂಬಲದೊಂದಿಗೆ 42 ಸದಸ್ಯರ ಬಲದೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಆಪರೇಷನ್‌ ಹಸ್ತದ ಆತಂಕ ಒಂದೆಡೆಯಾದರೆ, ಮಾಜಿ ಸಿಎಂ ಜಗದೀಶ ಶೆಟ್ಟರ ಏನಾದರೂ ಮ್ಯಾಜಿಕ್‌ ಮಾಡಿಬಿಟ್ಟರೆ ಎಂಬ ಭೀತಿ ಬಿಜೆಪಿಗರನ್ನು ಕಾಡುತ್ತಿದೆ. ಅದಕ್ಕಾಗಿಯೇ ಯಾವುದೇ ಸಣ್ಣ ಲೋಪ-ನಿರ್ಲಕ್ಷéಕ್ಕೆ ಅವಕಾಶ ನೀಡುವುದು ಬೇಡ ಎಂಬ ಚಿಂತನೆಯೊಂದಿಗೆ ತನ್ನ ಬಹುತೇಕ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ದಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ ಎನ್ನಲಾಗಿದ್ದು, ಸದಸ್ಯರೆಲ್ಲರೂ ಜೂ.19ರಂದು ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಖ್ಯಾಬಲದ ಲೆಕ್ಕಾಚಾರ
ಪಾಲಿಕೆಯಲ್ಲಿ ಪಕ್ಷಗಳ ಸದಸ್ಯರ ಸಂಖ್ಯಾಬಲ ಗಮನಿಸಿದರೆ ಬಿಜೆಪಿ-ಕಾಂಗ್ರೆಸ್‌ ನಡುವೆ ದೊಡ್ಡ ಅಂತರವೇನು ಇಲ್ಲ. ಎರಡೂ ಪಕ್ಷಗಳ ನಡುವಿನ ಅಂತರ ಕೇವಲ 6 ಸ್ಥಾನಗಳು ಮಾತ್ರ. ಮತ್ತೂಂದೆಡೆ ಅಸಾದುದ್ದಿನ್‌ ಓವೈಸಿ ಪಕ್ಷದಿಂದ ಮೂವರು ಸದಸ್ಯರು ಆಯ್ಕೆಯಾಗಿದ್ದರೆ, ಒಟ್ಟಾರೆ 6 ಜನ ಪಕ್ಷೇತರ ಸದಸ್ಯರು ಇದ್ದಾರೆ.

ಪಕ್ಷೇತರರಲ್ಲಿ ಹಲವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರೂ, ಚಮತ್ಕಾರವೇನಾದರೂ ನಡೆದರೆ ಕಾಂಗ್ರೆಸ್‌ ಗೆ ಲಾಭವಾಗಬಾರದು ಎಂಬ ಮುನ್ನೆಚ್ಚರಿಕೆ ಬಿಜೆಪಿಯದ್ದಾಗಿದೆ. ಇದ್ದ ಸ್ಥಿತಿಯಲ್ಲಿಯೇ  ಮಹಾಪೌರ-ಉಪಮಹಾಪೌರ ಆಯ್ಕೆ ನಡೆದರೆ ಬಿಜೆಪಿ ಒಳಗೆ ಪೈಪೋಟಿ ನಡೆಯಬಹುದು, ಒಂದು ವೇಳೆ ಅಧಿಕಾರ ಕಿತ್ತುಕೊಳ್ಳುವ ಯತ್ನ ನಡೆದರೆ ಪರಿಸ್ಥಿತಿ ಸೂಕ್ಷ್ಮವಾಗಲಿದೆ. ಪಾಲಿಕೆಯಲ್ಲಿ ಅಧಿಕಾರ ಉಳಿಸಿಕೊಳ್ಳುವ-ಕಿತ್ತುಕೊಳ್ಳುವ ಪೈಪೋಟಿ ಯಾವ ಸ್ಥಿತಿಗೆ ತಲುಪಲಿದೆ ಎಂಬ ಕುತೂಹಲ, ಆತಂಕವಂತೂ ಮನೆ ಮಾಡಿದ್ದು, ಬಿಜೆಪಿ-ಕಾಂಗ್ರೆಸ್‌ ಏನೆಲ್ಲ ಸರ್ಕಸ್‌ಗೆ ಇಳಿಯಲಿವೆ ಕಾದು ನೋಡಬೇಕಾಗಿದೆ.

ಕೇಂದ್ರ ಸಚಿವ ಜೋಶಿ ನೇತೃತ್ವದಲ್ಲಿ ನಿರ್ಣಯ
ಪಾಲಿಕೆ ಮಹಾಪೌರ-ಉಪ ಮಹಾಪೌರ ಯಾರು ಎಂಬುದಕ್ಕೆ ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅಂತಿಮ ಮುದ್ರೆಯೊತ್ತುತ್ತಿದ್ದು. ಕಳೆದ ಮೂರು ದಶಕಗಳ ಪಾಲಿಕೆ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಜಗದೀಶ ಶೆಟ್ಟರ ಅನುಪಸ್ಥಿತಿಯಲ್ಲಿ ಬಿಜೆಪಿ ನಿರ್ಣಯ ಕೈಗೊಳ್ಳುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಬಿಜೆಪಿಯಿಂದ ಈ ಬಾರಿಯ ಮಹಾಪೌರ, ಉಪ ಮಹಾಪೌರ ಯಾರು ಎಂಬುದು
ನಿರ್ಧಾರವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಪ್ರಸ್ತುತ ಬ್ರೆಜಿಲ್‌, ಉರುಗ್ವೆ ದೇಶಗಳ ಪ್ರವಾಸದಲ್ಲಿದ್ದು, ಅವರು ಸ್ವದೇಶಕ್ಕೆ ಮರಳಿ ಹುಬ್ಬಳ್ಳಿಗೆ ಆಗಮಿಸಿದ ನಂತರದಲ್ಲಿ ಅವರ ನೇತೃತ್ವದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಪಕ್ಷದ ಹಿರಿಯ ಸದಸ್ಯರೊಂದಿಗೆ ಚರ್ಚಿಸಿ, ಕೋರ್‌ ಕಮಿಟಿಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next