ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಗುಜರಿ ಹಾಗೂ ಬಸ್‌ಗಳ ಚಸ್ಸಿ ಬದಲು ಹಗರಣ ದೊಡ್ಡ ಸುದ್ದಿ ಮಾಡಿತ್ತು. ಇದೀಗ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ಹಗರಣ ಎಸಗುವವರಿಗೆ ತಕ್ಕಶಾಸ್ತಿಯ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಬಯಲಿಗೆ ಬಂದಿದ್ದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅಷ್ಟೇ ಅಲ್ಲ ತನಿಖೆಗೆ ಆದೇಶಿಸಿದ್ದ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿಯನ್ನೇ ವರ್ಗಗೊಳಿಸುವ ವ್ಯವಸ್ಥಿತ ಹುನ್ನಾರವೂ ನಡೆದಿತ್ತು. ಕೊನೆಗೂ ಹಗರಣದಲ್ಲಿ ನಾಲ್ವರು ಅಧಿಕಾರಿಗಳ ವಿರುದ್ಧ ಕಠಿಣ ಕೈಗೊಂಡಿರುವುದು ಹಗರಣ ನಡೆದಿರುವುದು, ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಿರುವುದನ್ನು ಸಾಬೀತು ಪಡಿಸಿದೆ.
ಹಗರಣಗಳಿಂದ ನಲುಗಿದ ನಿಗಮ: ಪ್ರತ್ಯೇಕ ನಿಗಮ ಆದಾಗಿನಿಂದಲೂ ನಷ್ಟವನ್ನು ಬೆನ್ನಿಗೆ ಕಟ್ಟಿಕೊಂಡೇ ಸಾಗುತ್ತಿರುವ ವಾಯವ್ಯ ಸಾರಿಗೆ ಸಂಸ್ಥೆ ಹಲವು ಹಗರಣಗಳಿಂದ ನಲುಗಿದೆ. ಟೈರ್‌ಗಳ ಖರೀದಿಯಲ್ಲಿನ ಹಗರಣ ನಡೆದು ಸಂಸ್ಥೆ ಅದರಿಂದ ಹೊರಬಂದು ಒಂದಿಷ್ಟು ಸುಧಾರಣೆಯಾಗುತ್ತಿದೆ ಎನ್ನುವುದರೊಳಗೆ ಪ್ರಾದೇಶಿಕ ಕಾರ್ಯಾಗಾರದಲ್ಲಿನ ಬಹುದೊಡ್ಡ ಹಗರಣವೊಂದು ಸುದ್ದಿ ಮಾಡಿತ್ತು. 2015ರಲ್ಲಿ ಪ್ರಾದೇಶಿಕ ಕಾರ್ಯಾಗಾರದಲ್ಲಿ ವಿವಿಧ ಸಲಕರಣೆ, ಗುಜರಿ ಇನ್ನಿತರ ವಿಚಾರದಲ್ಲಿ ಏನೋ ಅಪರಾ ತಪರಾ ಇದೆ ಎಂಬ ಗುಮಾನಿ ಮೇರೆಗೆ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ವಿನೋತ್ ಪ್ರಿಯಾ ಅವರು 2016ರ ಫೆಬ್ರವರಿಯಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರಿಂದ, ಸಂಸ್ಥೆ-ಸರಕಾರವೇ ಗಾಬರಿಯಾಗುವ ಹಗರಣವೊಂದು ಬಯಲಿಗೆ ಬಂದಿತ್ತು.
ಪ್ರಾದೇಶಿಕ ಕಾರ್ಯಾಗಾರದಲ್ಲಿ ಹಳೇ ವಾಹನ ಖರೀದಿಯ ಟೆಂಡರ್ ಹಾಕಲು ಬಂದಿದ್ದ ಕೆಲ ಬಿಡ್‌ದಾರರು ವಾಹನಗಳಲ್ಲಿ ಹಲವು ಬಿಡಿಭಾಗಗಳಳೇ ಕಾಣೆಯಾಗಿವೆ ಎಂದು ಆಕ್ಷೇಪಿಸಿದ್ದರು. ಇದರಿಂದ ಸಂಶಯಗೊಂಡ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ವಿನೋತ್ ಪ್ರಿಯಾ ಅವರು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಸಂಸ್ಥೆ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಿದ್ದರು. ಅದರಂತೆ ಅಂದಿನ ಇಬ್ಬರು ತಾಂತ್ರಿಕ ಸಹಾಯಕರು ಹಾಗೂ ಪಾರುಪತ್ತೆಗಾರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.