Advertisement

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

12:27 PM Nov 08, 2024 | Team Udayavani |

ಬಳ್ಳಾರಿ: ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಹಿಂದೆ ನಿಷೇಧಿತ ಸಂಘಟನೆಗಳ ಪ್ರಕರಣಗಳನ್ನು ಹಿಂಪಡೆದಿದ್ದು, ಇದೀಗ ವಕ್ಫ್ ಹೆಸರಲ್ಲಿ ಹಿಂದೂಗಳ ದೇವಸ್ಥಾನ, ಮಠಮಾನ್ಯಗಳನ್ನು ಕಬಳಿಸಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ಜಿಲ್ಲೆಯ ತೋರಣಗಲ್ಲುನಲ್ಲಿ ಶುಕ್ರವಾರ (ನ.08) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ತುಷ್ಟೀಕರಣವೇ ಧ್ಯೇಯವಾಗಿದೆ‌. ರಾಜ್ಯದಲ್ಲಿ 2013-18ರ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಿಷೇಧಿತ ಸಂಘಟನ ಸಿಮಿ (ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ) ಸಂಘಟನೆ ಅವತಾರಗಳೇ ಆಗಿರುವ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳ 175 ಪ್ರಕರಣಗಳನ್ನು ವಾಪಸ್ ಪಡೆದಿದೆ ಎಂದು ದೂರಿದರು.

ರಾಜ್ಯದಲ್ಲಿ ಹಿಂದೂ ಸಂಘಟನೆ, ಹಿಂದೂಗಳ ಮೇಲೆ ಹಲ್ಲೆ ನಡೆದರೆ ಕಾಂಗ್ರೆಸ್ ನವರಿಗೆ ಏನೂ ಅನಿಸುವುದಿಲ್ಲ. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಅಧಿಕಾರಿ ಹೇಳುವಂತೆ ಹಲವಾರು ಪೊಲೀಸ್ ಅಧಿಕಾರಿಗಳ ಜೀವ ಹೋಗುತ್ತಿತ್ತು. ಅಂತಹ ಘಟನೆಯಲ್ಲಿ ಯುಎಪಿಎ ಕಾನೂನಿನಡಿ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲೂ ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದರೂ, ಆ ಪ್ರಕರಣಗಳನ್ನು ಸಹ ಹಿಂಪಡೆಯುವ ಪ್ರಯತ್ನಗಳು ಸಹ ಸರ್ಕಾರದಲ್ಲಿ ನಡೆಯುತ್ತಿವೆ ಎಂದು ಪ್ರಹ್ಲಾದ ಜೋಷಿ ತಿಳಿಸಿದರು.

ಕಾಂಗ್ರೆಸ್ ನವರಿಂದಲೇ ವಕ್ಫ್ ಆಸ್ತಿ ಲೂಟಿ: ಇದೀಗ ರಾಜ್ಯಾದ್ಯಂತ ಹೊಸದಾಗಿ ಜಿಹಾದಿ ನಡೆಯುತ್ತಿದೆ. ಸಿಎಂ ಸಿದ್ದು ಹೇಳಿದಂತೆ ಬಿಜೆಪಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡಲು ಬದ್ಧವಿದೆ. ಆದರೆ, ಕಾಂಗ್ರೆಸ್ ಹಿರಿಯ ಮುಖಂಡ ಅನ್ವರ್ ಮಾನಪ್ಪಾಡಿ ತನ್ನ ವರದಿಯಲ್ಲಿ ಉಲ್ಲೇಖಿಸಿರುವಂತೆ ಕಮರುಲ್ ಇಸ್ಲಾಂ, ರೆಹಮಾನ್ ಖಾನ್, ಎನ್.ಎ.ಹ್ಯಾರಿಸ್, ಜಾಫರ್ ಶರೀಫ್ ಅವರೇ ಲೂಟಿ ಮಾಡಿದ್ದಾರೆ. ಹಾಗಾಗಿ ನಾವು ವಕ್ಫ್ ಆಸ್ತಿಯನ್ನು ಸಂರಕ್ಷಿಸುತ್ತೇವೆ ಎಂದು ತಿಳಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.

ಬಿಜೆಪಿ ಬರೀ ಸುಳ್ಳು ಹೇಳುತ್ತಿದೆ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ, ಗ್ಯಾರೆಂಟಿ ಯೋಜನೆಗಳ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದ ಸಚಿವ ಪ್ರಹ್ಲಾದ್ ಜೋಷಿ, ಗೃಹಲಕ್ಷ್ಮಿ ಪ್ರತಿ ತಿಂಗಳು ಬರಲ್ಲ. ಪ್ರಸಕ್ತ 2023, 2024ನೇ ಸಾಲಿನ ಪದವೀಧರರಿಗೆ ಯುವನಿಧಿ ಹಾಕಿದ್ದೀರಿ, ಇದೇ ಸಂಡೂರು ತಾಲೂಕಿನಲ್ಲಿ ಎಷ್ಟು ಜನರಿಗೆ ಬಂದಿದೆ ತೋರಿಸಿ, ಮಹಿಳೆಯರಿಗೆ ಬಸ್‌ ಉಚಿತ ಎಂದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದೀರಿ, ವಿದ್ಯುತ್ ದರ ಏರಿಕೆ, ಆಸ್ತಿ ನೋಂದಣಿ, ಹಾಲಿನ ದರ ಏರಿಕೆ, ಎಸ್ ಸಿ, ಎಸ್ ಟಿ 11 ಸಾವಿರ ಕೋಟಿ ರೂ. ಬೇರೆದಕ್ಕೆ ಬಳಕೆ, ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆರೋಪಿದರು.

Advertisement

ಇದೇ ವೇಳೆ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ, ಭ್ರಷ್ಟಾಚಾರದ ಪಕ್ಷ ಎಂದು ವ್ಯಂಗ್ಯವಾಡಿದ ಪ್ರಹ್ಲಾದ ಜೋಷಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಹೆಸರು ಬರೆದು ಕಂದಾಯ ಇಲಾಖೆ ಆಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ಸುಸ್ಥಿರವಾಗಿದೆ ಎಂದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ‌. ಆದರೆ, ರಾಜ್ಯದಲ್ಲಿ ಕೇವಲ ಒಂದು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಸರ್ಕಾರ, ವರ್ಷದಲ್ಲೇ 70 ಸಾವಿರ ಕೋಟಿ ಸಾಲ ಮಾಡಿದೆ ಎಂದು ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ವಿ.ಸೋಮಣ್ಣ, ಮಾಜಿ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ ಶಾಸಕರಾದ ನವೀನ್ ಕುಮಾರ್, ರವಿಕುಮಾರ್, ಮಾಜಿ ಶಾಸಕ ಎನ್.ಮಹೇಶ್, ಜಿಲ್ಲಾಧ್ಯಕ್ಷ ಅನೀಲ್ ಕುಮಾರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಶಿವನಗೌಡ ನಾಯಕ, ಮುಖಂಡರಾದ ಗೋನಾಳ್ ರಾಜಶೇಖರ್ ಗೌಡ, ಜೀವೇಶ್ವರಿ ರಾಮಕೃಷ್ಣ ಸೇರಿ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next