ಹುಬ್ಬಳ್ಳಿ: ವಿಮಾನಯಾನ ಸಂಪರ್ಕದಲ್ಲಿ ಹುಬ್ಬಳ್ಳಿ ಮಹತ್ವದ ಸ್ಥಾನ ಪಡೆಯುತ್ತಿದ್ದು, ಉಡಾನ್ ಯೋಜನೆಯಡಿ ದಕ್ಷಿಣ ಭಾರತದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇನ್ನಷ್ಟು ವಿಮಾನಗಳು ಇಲ್ಲಿಂದ ಸಂಚಾರ ಆರಂಭಿಸಲು ಮುಂದಾಗಿವೆ.
ಏ. 1ರಿಂದ ಇಂಡಿಗೋ ವಿಮಾನ ಕಂಪೆನಿ ಹುಬ್ಬಳ್ಳಿ-ಮುಂಬೈ ಸೇವೆ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿಯಲ್ಲಿ ನಡೆಯಲಿರುವ ಹೂಡಿಕೆದಾರರ ಸಮಾವೇಶ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಂಬೈಗೆ ವಿಮಾನಯಾನ ಸೇವೆಗೆ ಮುಂಬೈ ನಿಲ್ದಾಣದಲ್ಲಿ ಸ್ಲ್ಯಾಟ್ ಸಮಸ್ಯೆ ಇತ್ತು. ಅಲ್ಲಿ ಸ್ಲ್ಯಾಟ್ ದೊರಕಿಸುವ ನಿಟ್ಟಿನಲ್ಲಿ ತಾವು ಮಾತನಾಡಿದ್ದು, ಮಾರ್ಚ್ 28ಕ್ಕೆ ಇಂಡಿಗೋ ಕಂಪೆನಿಗೆ ಸ್ಲ್ಯಾಟ್ ದೊರೆಯಲಿದೆ. ಏ. 1ರಿಂದ ಕಂಪೆನಿ ಹುಬ್ಬಳ್ಳಿ-ಮುಂಬೈ ವಿಮಾನಯಾನ ಆರಂಭಿಸಲಿದೆ ಎಂದರು.
ಈಗಾಗಲೇ ಸ್ಟಾರ್ ಏರ್ ವೇಸ್ ಹುಬ್ಬಳ್ಳಿ-ದೆಹಲಿ(ಹಿಂಡನ್) ಸೇವೆ ಆರಂಭಿಸಿದ್ದು, ಈ ಸೇವೆ ಪ್ರತಿದಿನ ಕೈಗೊಳ್ಳಲು ಸೂಚಿಸಿದ್ದು, ಕಂಪೆನಿ ಒಪ್ಪಿಕೊಂಡಿದೆ. ಹುಬ್ಬಳ್ಳಿ- ಹೈದರಾಬಾದ್ ವಿಮಾನಯಾನ ಆರಂಭವಾಗಿದೆ. ಇನ್ನಷ್ಟು ಕಂಪೆನಿಗಳು ಹುಬ್ಬಳ್ಳಿಯಿಂದ ವಿಮಾನಯಾನ ಸೇವೆ ಆರಂಭಕ್ಕೆ ಮುಂದಾಗಿವೆ ಎಂದು ಹೇಳಿದರು.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೆಳಗಿನ ಜಾವ, ಬೆಂಗಳೂರಿನಿಂದ ಹುಬ್ಬಳ್ಳಿಗೆ ತಡ ಸಂಜೆ ವಿಮಾನ ಸೇವೆ ಇಲ್ಲವಾಗಿದ್ದು, ಇದರ ಆರಂಭಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು. ಹುಬ್ಬಳ್ಳಿ-ಚೆನ್ನೈ ರೈಲು ಆರಂಭವಾಗಿದೆ. ವಾರಾಣಸಿ ರೈಲು ಸೇವೆ ಇನ್ನು ಎರಡು ದಿನ ಹೆಚ್ಚಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ರಸ್ತೆಗಳು ಸುಧಾರಣೆ ಆಗುತ್ತಿವೆ. ವಿವಿಧ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರ ಆಕರ್ಷಣೆಗೆ ಉತ್ತಮ ಅವಕಾಶಗಳಿವೆ. ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಲ್ಲಿ ಧಾರವಾಡ ಘಟಕದಲ್ಲಿ ಸುಮಾರು 9,213 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದರು.
ಕಲ್ಲಿದ್ದಲು ಮತ್ತು ಗಣಿ ಉದ್ಯಮಿಗಳು ನನ್ನ ಭೇಟಿಗೆ ಬಂದಾಗ, ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕದಲ್ಲಿ ಹೂಡಿಕೆಗೆ ಮನವೊಲಿಸುವ ಕಾರ್ಯ ಮಾಡುತ್ತಿರುವುದಾಗಿಯೂ ಸಚಿವರು ಹೇಳಿದರು. ಉದ್ಯಮಸ್ನೇಹಿ ಯೋಜನೆ ಹಾಗೂ ಸಮಸ್ಯೆಗಳ ನಿಟ್ಟಿನಲ್ಲಿ ಕೇಂದ್ರ ಮಟ್ಟದಲ್ಲಿ ಏನಾದರೂ ಕೆಲಸ ಆಗುವುದಿದ್ದರೆ ತಮ್ಮ ಗಮನಕ್ಕೆ ತಂದರೆ ಅದರ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜೋಶಿ ಹೇಳಿದರು.