Advertisement

ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್‌; ದೇಶಪಾಂಡೆ ಫೌಂಡೇಶನ್‌ ಅಭಿವೃದ್ಧಿ ಸಂವಾದ’ಸಮಾವೇಶ

06:21 PM Feb 03, 2023 | Team Udayavani |

ಹುಬ್ಬಳ್ಳಿ: “ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹಾರ ರೂಪದ ಇನೋವೇಶನ್‌, ವಿನ್ಯಾಸ ಹಾಗೂ ಪರಿಹಾರದ ಅನುಷ್ಠಾನದ ಪ್ರಾಮಾಣಿಕ ಬದ್ಧತೆಯೇ ಸಾಮಾಜಿಕ ಉದ್ಯಮ. ದೇಶಪಾಂಡೆ ಫೌಂಡೇಶನ್‌ 15 ವರ್ಷಗಳಿಂದ ಹುಬ್ಬಳ್ಳಿ ಕೇಂದ್ರವಾಗಿಸಿಕೊಂಡು ಪರಿಹಾರ ಮಾಡೆಲ್‌ಗ‌ಳ ರೂಪಣೆ, ಅನುಷ್ಠಾನ ಮಾಡುತ್ತಿದೆ. 2013ರಲ್ಲಿ ನಾವು ಆರಂಭಿಸಿದ ಕೃಷಿಹೊಂಡ ಅಭಿಯಾನ ತೆಲಂಗಾಣಕ್ಕೆ ವಿಸ್ತರಿಸಿತ್ತು.

Advertisement

ಇದೀಗ ಮಹಾರಾಷ್ಟ್ರ, ರಾಜಸ್ಥಾನಕ್ಕೂ ಕಾಲಿಡುತ್ತಿದೆ. ಇಲ್ಲಿ ರೂಪಿತ ಪರಿಹಾರ ಮಾಡೆಲ್‌ಗ‌ಳನ್ನು ದೇಶಾದ್ಯಂತ ವಿಸ್ತರಣೆ ಗುರಿ ಹೊಂದಿದ್ದೇವೆ’ -ಇದು, ದೇಶಪಾಂಡೆ ಫೌಂಡೇಶನ್‌ ಸಂಸ್ಥಾಪಕ, ಕರ್ನಾಟಕದಲ್ಲಿ ಸಾಮಾಜಿಕ ಉದ್ಯಮಕ್ಕೆ ಹೊಸ ರೂಪ ನೀಡಿದ ಭಾರತೀಯ ಸಂಜಾತ ಅಮೆರಿಕಾ ಉದ್ಯಮಿ ಡಾ| ಗುರುರಾಜ ದೇಶಪಾಂಡೆ ಅವರ ಅನಿಸಿಕೆ. ಫೆ.3-4ರಂದು ದೇಶಪಾಂಡೆ ಫೌಂಡೇಶನ್‌ನ “ಅಭಿವೃದ್ಧಿ ಸಂವಾದ’ ಸಮಾವೇಶ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳಲ್ಲಿ ಫೌಂಡೇಶನ್‌ ಕೈಗೊಂಡ ಕಾರ್ಯಯೋಜನೆ, ಮುಂದಿನ ಹೆಜ್ಜೆಗಳ ಕುರಿತಾಗಿ “ಉದಯವಾಣಿ’ ಜೊತೆ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ಆದಾಯ ಇಲ್ಲದ ಜನರ ಸಂಕಷ್ಟ, ಸಮಸ್ಯೆಗಳಿಗೆ ಪರಿಹಾರ ಮಾಡೆಲ್‌ ರಚನೆ, ನೆರವು, ವೃತ್ತಿ, ವ್ಯಾಪಾರಕ್ಕೆ ವೇಗೋತ್ಕರ್ಷ, ತಂತ್ರಜ್ಞಾನದ ನೆರವು, ಕೌಶಲ-ಮಾರ್ಗದಶನ ಮಾಡುವುದು ಸಾಮಾಜಿಕ ಉದ್ಯಮದ ಕಾರ್ಯವಾಗಿದೆ. ದೇಶಪಾಂಡೆ ಫೌಂಡೇಶನ್‌ ಕಳೆದ 15 ವರ್ಷಗಳಿಂದ ಇದನ್ನೇ ಮಾಡುತ್ತಿದೆ. ಪ್ರತಿವರ್ಷ ದೇಶ-ವಿದೇಶಗಳಿಂದ ಸಾಧಕ ಉದ್ಯಮಿಗಳು, ತಂತ್ರಜ್ಞರು, ಸಾಧಕರು, ಕೇಂದ್ರ-ರಾಜ್ಯ ಸರಕಾರಗಳ ಅಧಿಕಾರಿಗಳನ್ನು ಹುಬ್ಬಳ್ಳಿಗೆ ಕರೆತರುತ್ತಿರುವುದು ಸಮ್ಮೇಳನದ ಹೆಸರಲ್ಲಿ ಎರಡು ದಿನ ಕಳೆದು ಹೋಗುವುದಕ್ಕಲ್ಲ. ಇಲ್ಲಿನ ಸಮಸ್ಯೆಗಳು, ಅದಕ್ಕೆ ಪರಿಹಾರ ಮಾಡೆಲ್‌ಗ‌ಳು, ಇವುಗಳ ಅನುಷ್ಠಾನಕ್ಕೆ ನೆರವು, ಸಹಯೋಗ, ಹೊಸ ವಿನ್ಯಾಸ ಚಿಂತನ-ಮಂಥನಕ್ಕಾಗಿ.

14 ಸಾವಿರ ಯುವಕರಿಗೆ ಉದ್ಯೋಗ: ದೇಶಪಾಂಡೆ ಎಜುಕೇಶನ್‌ ಟ್ರಸ್ಟ್‌ನಡಿ ಯುವಸಮೂಹಕ್ಕೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಬಹುತೇಕ ಉತ್ತರ ಕರ್ನಾಟಕದವರೇ ಆದ ಸುಮಾರು 14 ಸಾವಿರ ಯುವಕ-ಯುವತಿಯರಿಗೆ ತರಬೇತಿ ನೀಡಿ ಉದ್ಯೋಗ ಒದಗಿಸಲಾಗಿದೆ. ವಾರ್ಷಿಕ 2-3 ಲಕ್ಷ ರೂ. ಪ್ಯಾಕೇಜ್‌ ವೇತನ ಪಡೆಯುತ್ತಿದ್ದು, ಅವರ ಕುಟುಂಬಗಳಿಗೆ ಆಸರೆಯಾಗಲಿದೆ. ಇದರ ಪ್ರಯೋಜನ ದೊಡ್ಡಮಟ್ಟದಲ್ಲಿ ದೊರೆಯುವಂತಾಗಲು ಕಾಲೇಜುಗಳಲ್ಲಿ ಕೌಶಲ ಹಾಗೂ ಉದ್ಯಮಶೀಲತೆ ತರಬೇತಿ ಆರಂಭಿಸಿದ್ದೇವೆ. ಇದು ಹೆಚ್ಚಿನ ಪರಿಣಾಮ ಬೀರುತ್ತಿದೆ.

ಈ ಭಾಗಕ್ಕೆ ಇನ್ನು ಉತ್ತಮ ಐದಾರು ಕಂಪೆನಿಗಳು ಬರಬೇಕಾಗಿದೆ. ಐ-ಮೆರಿಟ್‌ ಕಂಪೆನಿ ಆರಂಭಗೊಂಡಿದ್ದು, ಸುಮಾರು 1,000 ಜನರಿಗೆ ಅದರಲ್ಲೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದರ ಜತೆಗೆ ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿ ಕೌಶಲಕ್ಕೆ ಅರ್ಲಿಸ್ಮಾರ್ಕ್‌ ಯೋಜನೆ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿದ್ದು, ಇದಕ್ಕೆ ಫೌಂಡೇಶನ್‌ ಸಂಪೂರ್ಣ ಆರ್ಥಿಕ ನೆರವು ಒದಗಿಸುತ್ತಿದೆ. ಅದೇ ರೀತಿ ಗ್ರಾಮೀಣ ವಿದ್ಯಾರ್ಥಿಗಳಗೆ ಇಂಗ್ಲಿಷ್‌ ಭಾಷೆ ಕಲಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಮಾಡಲಾಗುತ್ತಿದ್ದು, ಈಗಾಗಲೇ 130 ಸರಕಾರಿ ಶಾಲೆಗಳ ಸುಮಾರು 9,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 120 ಕಾಲೇಜುಗಳಲ್ಲಿ ಉದ್ಯಮಶೀಲತೆ ಹಾಗೂ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದರು.

Advertisement

20 ಸಾವಿರಕ್ಕೂ ಅಧಿಕ ನವೋದ್ಯಮಿಗಳಿಗೆ ಸಹಾಯ
ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಅಡಿಯಲ್ಲಿ ನವೋದ್ಯಮಕ್ಕೆ ಅಗತ್ಯ ಸ್ಥಳಾವಕಾಶ, ಮಾರ್ಗದರ್ಶನ, ತರಬೇತಿ, ಕೌಶಲ, ಸಾಲದ ನೆರವು, ಮಾರುಕಟ್ಟೆ ಸಂಪರ್ಕ ಇನ್ನಿತರ ಸಹಾಯ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ನವೋದ್ಯಮಿಗಳಿಗೆ ಸಹಾಯ ಮಾಡಲಾಗಿದೆ. ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಭಾರತಕ್ಕೆ ಇದರ ಅವಶ್ಯತೆಯೂ ಇದೆ. ಕೃಷಿ, ಆರೋಗ್ಯ ಇನ್ನಿತರ ಕ್ಷೇತ್ರಗಳಿಗೆ ಎಐ ತಂತ್ರಜ್ಞಾನ ಬಳಕೆ ಪರಿಣಾಮಕಾರಿ ಆಗಬಲ್ಲದು ಎಂದು ಹೇಳಿದರು.

ಕೃಷಿಹೊಂಡ ಅಭಿಯಾನ
2013ರಲ್ಲಿ ಅಭಿವೃದ್ಧಿ ಸಂವಾದಕ್ಕೆಂದು ಹುಬ್ಬಳ್ಳಿಗೆ ಆಗಮಿಸಿದ್ದ ರತನ್‌ ಟಾಟಾ ಅವರು ಕೃಷಿ ಹೊಂಡ ನಿರ್ಮಾಣಕ್ಕೆ ಐದು ಯಂತ್ರಗಳನ್ನು ನೀಡಲು ಒಪ್ಪಿದ್ದರಿಂದ,
ಫೌಂಡೇಶನ್‌ ನವಲಗುಂದ, ನರಗುಂದ ತಾಲೂಕಗಳಲ್ಲಿ ಕೃಷಿ ಹೊಂಡ ಅಭಿಯಾನ ಆರಂಭಿಸಿತ್ತು. ರೈತರ ಆಕರ್ಷಣೆ ಹಾಗೂ ಮನವರಿಕೆಗೆ 150 ಕೃಷಿ ಹೊಂಡಗಳನ್ನು ಉಚಿತವಾಗಿ ನಿರ್ಮಾಣ ಮಾಡಿದ್ದೆವು.

ಇವುಗಳ ಪ್ರಯೋಜನ ಕಂಡು ರೈತರು ಕೃಷಿಹೊಂಡಕ್ಕೆ ಮುಂದಾದಾಗ ರೈತರು ಶೇ.75 ಹಣ ನೀಡಬೇಕು, ಫೌಂಡೇಶನ್‌ ಶೇ.25 ನೀಡುತ್ತದೆ ಎಂದು ಆರಂಭಿಸಿದೆವು. ಇದೀಗ ಬ್ಯಾಂಕ್‌ಗಳಿಂದ ಸಾಲ ಕೊಡಿಸಲಾಗುತ್ತಿದ್ದು, ಫೌಂಡೇಶನ್‌ ಯಂತ್ರ, ತಂತ್ರಜ್ಞಾನ ನೀಡುತ್ತಿದೆ.

2013ರಿಂದ ಇಲ್ಲಿವರೆಗೆ 7,000 ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇವೆ. ಈ ವರ್ಷ 8,000 ಹೊಂಡಗಳ ನಿರ್ಮಾಣ ಮಾಡಲಾಗುತ್ತದೆ. ಒಟ್ಟು 15 ಸಾವಿರ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದಂತಾಗಲಿದ್ದು, ಇದರಲ್ಲಿ 2,000-3,000 ಕೃಷಿ ಹೊಂಡಗಳು ತೆಲಂಗಾಣ ರಾಜ್ಯದಲ್ಲಿವೆ. ಈ ವರ್ಷ ಮಹಾರಾಷ್ಟ್ರದಲ್ಲಿ ಸುಮಾರು 250 ಹಾಗೂ ರಾಜಸ್ಥಾನದಲ್ಲಿ 25 ಕೃಷಿ ಹೊಂಡಗಳ ನಿರ್ಮಾಣ ಗುರಿ ಹೊಂದಲಾಗಿದೆ.

ಫೌಂಡೇಶನ್‌ ಒಟ್ಟಾರೆ 1 ಲಕ್ಷ ಕೃಷಿ ಹೊಂಡಗಳ ನಿರ್ಮಾಣ, ತನ್ಮೂಲಕ 5 ಲಕ್ಷ ಎಕರೆ ಜಮೀನಿಗೆ ನೀರಾವರಿ ಗುರಿ ಹೊಂದಿದೆ. ನವಲಗುಂದ-ನರಗುಂದ ತಾಲೂಕುಗಳಲ್ಲಿ ಕೃಷಿಹೊಂಡಗಳನ್ನು ಆರಂಭಿಸಿದ ನಂತರ ಅಂತರ್ಜಲ ಮಟ್ಟ ಸುಮಾರು 20-25 ಮೀಟರ್‌ ಹೆಚ್ಚಳವಾಗಿದೆಯಂತೆ ಎಂದರು.

ಫುಡ್‌ ಇನೋವೇಶನ್‌ ಕ್ಲಸ್ಟರ್‌ ಘೋಷಣೆ
ದೇಶಪಾಂಡೆ ಫೌಂಡೇಶನ್‌ ಮೂರು ಕ್ಲಸ್ಟರ್‌ ಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ. ಆಹಾರ, ಚರ್ಮ ಹಾಗೂ ಆರಿ ಆರ್ಟ್‌ ಕ್ಲಸ್ಟರ್‌ಗಳ ಮೇಲೆ ಹೆಚ್ಚಿನ ಒತ್ತು ನೀಡಲಿದೆ. ಭಾರತದಲ್ಲಿ ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳು ಶೇ. 30-40 ಹಾಳಾಗುತ್ತಿವೆ. ಇವುಗಳ ಸಂಸ್ಕರಣೆ, ಮೌಲ್ಯವರ್ಧನೆ ಮಾಡಿದರೆ ರೈತರು ಹಾಗೂ ಮಹಿಳೆಯರ ಆದಾಯ ಹೆಚ್ಚಳವಾಗಲಿದೆ. ಇದನ್ನು ಅರಿತು ಫೌಂಡೇಶನ್‌ ಫುಡ್‌ ಇನೋವೇಶನ್‌ ಕ್ಲಸ್ಟರನ್ನು ಫೆ.3ರಂದು ಘೋಷಣೆ ಮಾಡಲಿದೆ. ಲಕ್ಷ
ರೂ.ಗೆ ಒಂದಂತೆ ಒಟ್ಟು 10 ಯಂತ್ರಗಳನ್ನು ತರಿಸಲಾಗಿದ್ದು, ಒಂದು ಯಂತ್ರಕ್ಕೆ 7 ಜನ ಮಹಿಳೆಯರು ಕೆಲಸ ಮಾಡಲಿದ್ದಾರೆ. ಒಂದು ಯಂತ್ರಕ್ಕೆ 2 ಕೋಟಿ ರೂ. ಬೆಲೆ ಇದ್ದು, ಒಟ್ಟಾರೆ 3 ಕೋಟಿ ರೂ.ಗಳ ಯೋಜನೆ ಇದಾಗಿದೆ. ಇದರಿಂದ ಬಾಳೆ ಹಣ್ಣಿನ ಪೌಡರ್‌ ಸೇರಿದಂತೆ ವಿವಿಧ ಉತ್ಪನ್ನಗಳು, ಹಸಿಶುಂಠಿ ಸಂಸ್ಕರಣೆ ಉತ್ಪನ್ನ ಹೊರತರಲಾಗುತ್ತಿದೆ. ಅಮೆರಿಕಾದ ಎನ್‌.ಸಿ. ಮೂರ್ತಿ ಅವರು ಈ ಕ್ಲಸ್ಟರ್‌ಗೆ ನೆರವು ನೀಡಿದ್ದರು. “ಎನ್‌.ಸಿ. ಮೂರ್ತಿ ಫುಡ್‌ ಇನೋವೇಶನ್‌ ಕ್ಲಸ್ಟರ್‌’ ಎಂದೇ ಹೆಸರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಕ್ಲಸ್ಟರ್‌ನಲ್ಲಿ ತರಕಾರಿ, ಹಣ್ಣುಗಳು, ಪಲ್ಯ ಇತ್ಯಾದಿ ಸಂಸ್ಕರಣೆ ಕಾರ್ಯ ನಡೆಯಲಿದೆ. ಶಿರಸಿಯಲ್ಲಿ ಈಗಾಗಲೇ ಬಾಳೆಹಣ್ಣು, ಹಸಿಶುಂಠಿ ಸಂಸ್ಕರಣೆ, ಮೌಲ್ಯವರ್ಧನೆ ಕಾರ್ಯದಲ್ಲಿ ಅನೇಕರು ತೊಡಗಿದ್ದಾರೆ ಎಂದರು.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next