ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿಯ ಪಕ್ಷೇತರ ಸ್ಪರ್ಧೆ ಬಗ್ಗೆ ನಾನು ಏನು ಹೇಳಲಾರೆ. ಲೋಕಸಭಾ ಚುನಾವಣೆ ಜಾತಿ ಆಧಾರಿತವಲ್ಲ, ಬದಲಾಗಿ ರಾಷ್ಟ್ರೀಯ ವಿಷಯ- ಸವಾಲುಗಳ ಚುನಾವಣೆ ಆಗಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯ ಪಟ್ಟರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಹಿತ ದೃಷ್ಟಿಯಿಂದ ನರೇಂದ್ರ ಮೋದಿ ಬೇಕೋ, ಇಂಡಿಯಾ ಒಕ್ಕೂಟ ಬೇಕೋ ಎಂದು ನಿರ್ಧರಿಸುವ ಚುನಾವಣೆ ಆಗಿದೆ ಎಂದರು.
ಟಿಕೆಟ್ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ನಮ್ಮ ವಕ್ತಾರರು ಉತ್ತರ ನೀಡುತ್ತಾರೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬಗ್ಗೆ ನನಗೆ ಗೊತ್ತಿಲ್ಲ. ಅದು ಮುಕ್ತ ವೇದಿಕೆ ಆಗಿದ್ದು, ಜನ ತಮಗೆ ಏನು ಅನಿಸಿದೆಯೋ ಅದನ್ನು ಹಾಕಿದ್ದಾರೆ ಎಂದರು.
ರಾಜ್ಯದ ಬರದ ಬಗ್ಗೆ ಸುಪ್ರೀಂ ಕೋರ್ಟ್ ನಿಂದ ಎಲ್ಲವೂ ಕೂಡ ಗೊತ್ತಾಗುತ್ತದೆ. ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ ಇಷ್ಟು ಜನಪ್ರಿಯತೆ ಇದ್ದರೆ ದುಡ್ಡು ಕೊಡಬಹುದಿತ್ತು. ಕೇವಲ ಎರಡು ಸಾವಿರ ಕೊಡುತ್ತಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗ್ಯಾರಂಟಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗದೆ ದೊಡ್ಡಮಟ್ಟದಲ್ಲಿ ಸಾಲ ಮಾಡಿದೆ. ಎಷ್ಟೇ ತೆರಿಗೆ ಜಾಸ್ತಿ ಮಾಡಿದರೂ ರಾಜ್ಯ ಸರ್ಕಾರದ ಆದಾಯ ಮಾತ್ರ ಜಾಸ್ತಿಯಾಗುತ್ತಿಲ್ಲ. ಮುದ್ರಾಂಕ ಶುಲ್ಕದಿಂದಲೂ ಕೂಡ ಯಾವುದೇ ರೀತಿಯಲ್ಲಿ ಆದಾಯ ಸ್ಥಿತಿ ಸರಿದೂಗುತ್ತಿಲ್ಲ. ಅಲ್ಲದೆ ದೊಡ್ಡ ಮಟ್ಟದ ಭ್ರಷ್ಟಾಚಾರದಿಂದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಕುಟುಕಿದರು.
ಬಿಸಿಲಿನ ತಾಪಮಾನ ಸಾಕಷ್ಟು ಏರಿಕೆಯಾಗಿದೆ. ಇದರಿಂದ ಪ್ರಚಾರಕ್ಕೂ ಕೂಡ ಪರಿಣಾಮ ಬೀರತೊಡಗಿದ್ದು, ಮಧ್ಯಾಹ್ನದ ಸಮಯದಲ್ಲಿ ಪ್ರಚಾರಕ್ಕೆ ಹೋಗುವುದನ್ನು ನಾವೇ ಸ್ವಲ್ಪ ಕಡಿಮೆ ಮಾಡಿದ್ದೇವೆ ಎಂದರು.