Advertisement

Hubli; ಮುಡಾ ಹಗರಣದಲ್ಲಿ ತಮ್ಮ ಪಾತ್ರ ಒಪ್ಪಿಕೊಂಡು ಬಿಜೆಪಿ ಪಾದಯಾತ್ರೆ ಮಾಡಲಿ: ಸಂತೋಷ್ ಲಾಡ್

03:00 PM Jul 29, 2024 | Team Udayavani |

ಹುಬ್ಬಳ್ಳಿ: ತಮ್ಮ ಕಾಲದಲ್ಲಿ ಮುಡಾದಲ್ಲಿ ಹಗರಣ ಆಗಿದೆ ಎಂದು ಬಿಜೆಪಿ ಮೊದಲು ಒಪ್ಪಿಕೊಳ್ಳಲಿ. ನಂತರ ಬೇಕಿದ್ದರೆ ಪಾದಯಾತ್ರೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮಾಡಲು ಏನು ಕಾರಣ? ವಾಲ್ಮೀಕಿ ಮತ್ತು ಮುಡಾ ಹಗರಣದ ಕುರಿತು ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.‌ ಒಂದೆಡೆ ಸಿಐಡಿ ತನಿಖೆ ನಡೆಯುತ್ತಿದೆ. ಇಡಿ ಮತ್ತು ಸಿಬಿಐ ಸಹ ಪ್ರವೇಶಿಸಿವೆ. ಸರ್ಕಾರಿ ಮತ್ತು ಬ್ಯಾಂಕ್ ಅಧಿಕಾರಗಳ ವಿರುದ್ಧ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸದನದಲ್ಲಿ ಮಾತನಾಡಲು ಏಳು ತಾಸು ಅವಕಾಶ ಮಾಡಿಕೊಡಲಾಗಿತ್ತು. ಬಿಜೆಪಿ ಕಾಲದಲ್ಲಿಯೇ ಮುಡಾದಲ್ಲಿ ಹಗರಣವಾಗಿದೆ. ನಮ್ಮ ಕಾಲದಲ್ಲಿ ನಾವು ಹಗರಣ ಮಾಡಿದ್ದೇವೆಂದು ಬಿಜೆಪಿಯವರು ಲಿಖಿತ ರೂಪದಲ್ಲಿ ಕೊಡಲಿ. ಕಾನೂನು ಬಾಹಿರವಾಗಿ ನಿವೇಶನ ಹಂಚಿದ್ದೇವೆ. ಅದಕ್ಕಾಗಿ ತನಿಖೆ ಮಾಡಬೇಕಿದೆ ಎಂದು ಬರೆದು ಕೊಡಲಿ. ಜನಕ್ಕೆ ಮೂಕ ಮಾಡಿದ್ದೇವೆ ಎಂದು ಮೊದಲು ಒಪ್ಪಿಕೊಳ್ಳಲಿ. ನೀವೇ ಸೈಟ್ ಕೊಟ್ಟು ಹಗರಣ ಮಾಡಿ, ಪಾದಯಾತ್ರೆ ಮಾಡುವುದು ಯಾವ ಧರ್ಮ? ಸಿಎಂ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಗ್ಯಾರಂಟಿಗಳಿಗಾಗಿ 60ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಹಿಂದುಳಿದ ನಾಯಕರೊಬ್ಬರು ಈ ರೀತಿ ಬೆಳೆಯುತ್ತಿರುವುದನ್ನು ಬಿಜೆಪಿಯವರಿಗೆ ನೋಡುವುದಕ್ಕೆ ಆಗುತ್ತಿಲ್ಲ. ಸಿದ್ದರಾಮಯ್ಯನವರ ಪಬ್ಲಿಸಿಟಿ ತಡೆದುಕೊಳ್ಳಲು ಆಗುತ್ತಿಲ್ಲ. ಮೋದಿ ಪ್ರಧಾನಿಯಾಗಿದ್ದಾಗ 136 ಇಂಚು ಬಂದಿರುವುದು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಕುಟುಕಿದರು.

ಸಿಎಂ ಮತ್ತು ಡಿಸಿಎಂ ದೆಹಲಿಗೆ ಏಕೆ ಹೋಗುತ್ತಿದ್ದಾರೊ ಗೊತ್ತಿಲ್ಲ. ಹೈಕಮಾಂಡ್ ಜೊತೆ ಚರ್ಚಿಸಲು ಹೋಗಿರಬಹುದು. ನಿಗಮ-ಮಂಡಳಿ ಮತ್ತು ಮುಂಬರುವ ಚುನಾವಣೆ ದೃಷ್ಟಿಯಿಂದಲೂ ಹೋಗುತ್ತಿರಬಹುದು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.

Advertisement

ಇಡಿ ದಾಳಿಯಿಂದ ಬಿಜೆಪಿಗೆ ಲಾಭ

ಇಡಿ ದಾಳಿ ರಾಜಕೀಯ ಪ್ರೇರಿತ. ಇಲ್ಲಿಯವರೆಗೆ 3ಸಾವಿರ ದಾಳಿ ನಡೆದಿವೆ. 2014ರಿಂದ ಇಲ್ಲಿವರೆಗೆ ಆದ ದಾಳಿಗಳಲ್ಲಿ ಶೇ. 76 ಪ್ರತಿಶತ ಪ್ರಕರಣ ಮುಚ್ಚಿ ಹೋಗಿವೆ. ಕೇವಲ ಶೇ. 24 ಕೇಸ್ ಮಾತ್ರ ನಡೆಯುತ್ತಿವೆ. 3ಸಾವಿರ ಪ್ರಕರಣಗಳ ಪೈಕಿ ಶೇ. 95 ಕೇಸ್ ವಿಪಕ್ಷದವರ ಮೇಲಿವೆ. ಇಡಿ ದಾಳಿಗೆ ತುತ್ತಾದವರೆಲ್ಲರೂ ಈಗ ಬಿಜೆಪಿಯಲ್ಲಿದ್ದಾರೆ. ವಾಷಿಂಗ್ ಪೌಡರ್ ನಿರ್ಮಾ ಆದ ಮೇಲೆ ಬಿಜೆಪಿ ಸೇರುತ್ತಿದ್ದಾರೆ. ಇಡಿ ದಾಳಿಯಿಂದ ಬಿಜೆಪಿಗೆ ಲಾಭವಿದೆ. ನಮ್ಮ ಪ್ರಣಾಳಿಕೆಯನ್ನೇ ಕಾಪಿ ಮಾಡಿ ಈಗ ಜಾರಿ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರು ಮಾತನಾಡುತ್ತಿಲ್ಲ ಎಂದರು.

ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದೆ. ಆದರೆ ಅನುದಾನ ಕೊಡುವಲ್ಲಿ ಕೇಂದ್ರ ಸರ್ಕಾರದಿಂದ ತಾರತಮ್ಯ ಆಗುತ್ತಿದೆ. ಮೊನ್ನೆ ಬಜೆಟ್‌ನಲ್ಲಿ ಎರಡು ರಾಜ್ಯಗಳಿಗೆ 50 ಸಾವಿರ ಕೋಟಿ ರೂ. ಅನುದಾನ ಕೊಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋಗಿದ್ದಕ್ಕಾಗಿ ಕಳೆದ ಬಾರಿ ನಮಗೆ ಅನುದಾನ ಸಿಕ್ಕಿತು. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಪಾಲು ಸರಿಯಾಗಿ ಬರುತ್ತಿಲ್ಲ‌. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಅನುದಾನ ಹೋಗುತ್ತಿದೆ. ಹಿಂದುಗಳ ತಲಾ ಆದಾಯ ಕಡಿಮೆಯಾಗಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿವೆ ಎಂದು ಗೂಬೆ ಕೂರಿಸುತ್ತಿದ್ದಾರೆ.‌ ಕರ್ನಾಟಕ ಭಾರತ ದೇಶದಲ್ಲಿಲ್ಲವೇ? ರೈತರ ಆತ್ಮಹತ್ಯೆ ಬಗ್ಗೆ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದರೆ ಗ್ರೇಟ್ ಆಗಿಬಿಡುತ್ತಾರಾ? ನೆರೆ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ಕೊಡುತ್ತೇನೆ. ಜನರಿಗೆ ಅಗತ್ಯ ನೆರವು ನೀಡುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next