ಹುಬ್ಬಳ್ಳಿ: ಮುಡಾ ಹಗರಣದ ತನಿಖೆಗೆ ಹೈಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು, ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಪ್ರಭಾವ ಹಾಗೂ ಪಾತ್ರದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಸಿಎಂ ಹೈಕೋರ್ಟ್ ತೀರ್ಪು ಬಗ್ಗೆ ಮೇಲ್ಮನವಿ ಸಲ್ಲಿಸಲಿ ಕಾನೂನಿನಲ್ಲಿ ಅವಕಾಶವಿದೆ. ಆದರೆ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ವಿರುದ್ದದ ಪ್ರಕರಣ ಸಂದರ್ಭದಲ್ಲಿ ಏನೆಲ್ಲ ಮಾತನಾಡಿದ್ದರು ಎಂಬುದನ್ನು ಸಿದ್ದರಾಮಯ್ಯ ನೆನಪು ಮಾಡಿಕೊಳ್ಳಲಿ. ರಾಮಕೃಷ್ಣ ಹೆಗಡೆ ಅವರ ಶಿಷ್ಯ ನಾನು ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದರು. ಹೆಗಡೆ ಅವರು ತಮ್ಮ ವಿರುದ್ದ ಆರೋಪ ಬಂದ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನೈತಿಕತೆ ಇದ್ದರೆ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರೆಯದೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದಾದಲ್ಲಿ, ಪ್ರಕರಣವನ್ನು ಸಿಬಿಐಗೆ ನೀಡಲಿ. ಮುಡಾ ಹಗರಣ ಲೋಕಾಯುಕ್ತದಡಿ ತನಿಖೆ ನಡೆಸಿದರೆ, ತನಿಖಾಧಿಕಾರಿಯನ್ನು ನೇಮಿಸುವುದು ರಾಜ್ಯ ಸರ್ಕಾರ, ಇದರಿಂದ ನಿಷ್ಪಕ್ಷಪಾತ ತನಿಖೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ, ಜೆಡಿಎಸ್ ನಾಯಕರ ವಿರುದ್ದದ ಪ್ರಕರಣಗಳು ಇವರಿಗೆ ನೆನಪಾಗಿದ್ದೆ ಮುಡಾ, ವಾಲ್ಮೀಕಿ ನಿಗಮದ ಹಗರಣ ಬಯಲಿಗೆ ಬಂದ ನಂತರ. 2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಕಾಲು ಹಿಡಿದು ಅವರನ್ನು ಸಿಎಂ ಮಾಡಿದ್ದು ಯಾರು. ಆಗ ಅವರ ವಿರುದ್ದದ ಪ್ರಕರಣಗಳು ನೆನಪಾಗಲಿಲ್ಲವೆ? ಎಂದು ಪ್ರಶ್ನಿಸಿದರು.
ದಲಿತ ನಾಯಕ ರಾಜ್ಯಪಾಲರನ್ನು ಕಾಂಗ್ರೆಸ್ ನವರು ಅಪಮಾನ ಮಾಡಿದ್ದು, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಬಹಿಂರಂಗ ಕ್ಷಮೆ ಕೇಳಲಿ ಎಂದು ಜೋಶಿ ಆಗ್ರಹಿಸಿದ್ದಾರೆಂದು ಕೇಂದ್ರ ಸಚಿವರ ಕಚೇರಿಯ ಪ್ರಕಟನೆಯಲ್ಲಿ ತಿಳಿಸಿದೆ.