ಹುಬ್ಬಳ್ಳಿ: ಬಿಜೆಪಿಯವರು ಅಗತ್ಯ ಬಿದ್ದಂತೆ ಜಾತೀಯತೆ, ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ಕೈಮುಗಿದು ಒಳಗೆ ಬಾ ಇಲ್ಲವೇ ಧೈರ್ಯವಾಗಿ ಪ್ರಶ್ನಿಸಿ ಅನ್ನುವುದು ಎರಡು ಒಂದೇ ಅರ್ಥ ಕಲ್ಪಿಸುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಶಾಲೆಗಳ ದ್ವಾರದಲ್ಲಿದ್ದ ಬರಹ ಬದಲಾವಣೆಗೆ ಸಮರ್ಥಿಸಿಕೊಂಡರು.
ವಿದ್ಯಾರ್ಥಿಗಳು ಶಾಲೆಗೆ ಬರುವುದು ಜ್ಞಾನಾರ್ಜನೆಗಾಗಿ. ಜ್ಞಾನದಿಂದ ಆತ್ಮಬಲ ಹೆಚ್ಚುತ್ತದೆ. ಇವೆರಡೂ ಪದಗಳು ತದ್ದಿರುದ್ಧವಾದದ್ದಲ್ಲ. ಜ್ಞಾನ ದೇಗುಲಕ್ಕೆ ಜ್ಞಾನ ತೆಗೆದುಕೊಳ್ಳಲು ಬನ್ನಿ. ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಧೈರ್ಯದಿಂದ ಜೀವನ ಸಾಗಿಸಿ. ಇದರ ಬಗ್ಗೆ ನಾನು ಜಾಸ್ತಿ ಹೇಳಿದರೆ ಪರ-ವಿರುದ್ಧದ ಹೇಳಿಕೆಗಳು ಹೆಚ್ಚಾಗುತ್ತದೆ ಎಂದರು.
ಸುಪ್ರೀಂ ಕೋರ್ಟ್ ಸೂಚಿಸಿದ ಜಾಗದಲ್ಲಿ ರಾಮಮಂದಿರ ಕಟ್ಟಿಲ್ಲ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸೂಕ್ತ ಉತ್ತರ ಸಿಗಬೇಕಿದ್ದರೆ ಲಾಡ್ ಅವರನ್ನೇ ಕೇಳಬೇಕು. ನಾವು ರಾಮ ರಾಜ್ಯದ ಪರಿಕಲ್ಪನೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದೇವೆ. ಮನುಷ್ಯ ನಿಧನವಾದ ನಂತರ ರಾಮ ನಾಮ ಜಪಿಸುತ್ತೇವೆ. ಆ ಸದ್ಗತಿ ಸಿಗಲಿ ಅನ್ನುವುದೇ ರಾಮರಾಜ್ಯ ಪರಿಕಲ್ಪನೆ. ಅಲ್ಲಿ ಎಲ್ಲರೂ ಸಂತೋಷವಾಗಿರಬೇಕು. ಈ ಪರಿಕಲ್ಪನೆ ತಂದವರೇ ಕಾಂಗ್ರೆಸ್ ನವರು ಎಂದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶೀಘ್ರವೇ ಅಭ್ಯರ್ಥಿಯ ಹೆಸರು ಅಂತಿಮವಾಗಲಿದೆ. ನಮ್ಮ ಎದುರಾಳಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಈ ಹಿಂದೆ ಅವರು ನಾಲ್ಕು ಬಾರಿ ಆಯ್ಕೆಯಾದವರು ಮತ್ತು ಕೇಂದ್ರದಲ್ಲಿ ಸಚಿವರಾದವರು. ಅವರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿ ಅಂತಿಮಗೊಳಿಸುತ್ತೇವೆ ಎಂದರು.
ಹೆಬ್ಬಾಳ್ಕರ ಅಳಿಯ ರಜತ್ ಉಳ್ಳಾಗಡ್ಡಿಮಠ ಶಕ್ತಿ ಪ್ರದರ್ಶನ ವಿಚಾರವಾಗಿ, ರಜತ್ ನನ್ನ ಅಳಿಯ ಅನ್ನುವ ಕಾರಣಕ್ಕೆ ಅರ್ಜಿ ಹಾಕಿಲ್ಲ. ಹೈಕಮಾಂಡ್ ನವರು ಎಲ್ಲವನ್ನು ಗಮನಿಸಿ ಸೂಕ್ತ ನಿರ್ಧಾರಕೈಗೊಳ್ಳುತ್ತಾರೆ. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಅಂತಿಮಗೊಳಿಸಲಾಗುತ್ತದೆ. ಇಡೀ ರಾಜ್ಯದಲ್ಲಿ ಯುವಕರಿಗೆ ಮತ್ತು ಹಿರಿಯರಿಗೆ ಇಬ್ಬರಿಗೂ ಅವಕಾಶ ಕೊಡಲಾಗುತ್ತದೆ ಎಂದರು.
ಬೆಳಗಾವಿ ಲೋಕಸಭೆಗೆ ನಿಮ್ಮ ಪುತ್ರನಿಗೆ ಟಿಕೆಟ್ ಕೇಳಿರುವ ವಿಚಾರವಾಗಿ, ನನ್ನ ಸಹೋದರ ಚೆನ್ನರಾಜ ಹಟ್ಟಿಹೊಳಿ ಸಹ ಟಿಕೆಟ್ ಕೇಳಿರಲಿಲ್ಲ. ಜಿಲ್ಲೆಯ ಮುಖಂಡರು ಸೂಕ್ತ ಅಭ್ಯರ್ಥಿ ಅಂದಾಗ ಅಖಾಡಕ್ಕಿಳಿದರು. ಪ್ರತಿಕೂಲ ವಾತಾವರಣದಲ್ಲಿಯೂ ಗೆದ್ದು ಬಂದರು. ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಕೊಟ್ಟಿದ್ದಾನೆ. ಆತನಿಗೆ ಕೊಡಲೇಬೇಕೆಂದು ನಾನು ಎಲ್ಲಿಯೂ ಒತ್ತಾಯಿಸಿಲ್ಲ. ಪಕ್ಷದ ಹೈಕಮಾಂಡ್ ಮತ್ತು ಜಿಲ್ಲೆಯ ಮುಖಂಡರ ತೀರ್ಮಾನಕ್ಕೆ ನಾನು ಬದ್ಧ ಎಂದರು.