Advertisement
“ಇನ್ಫೋಸಿಸ್’ ನಗರದ ಗೋಕುಲ ರಸ್ತೆಯಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಿದೆ. ಇದರ ಕಾರ್ಯಾರಂಭದ ಬಗ್ಗೆ ಮನವಿ-ಒತ್ತಾಯಗಳು ಕಳೆದ ಮೂರ್‍ನಾಲ್ಕು ವರ್ಷಗಳಿಂದಲೇ ಇದ್ದು, ಸರಕಾರ-ಕಂಪೆನಿ ನಡುವೆ ಈ ಕುರಿತು ಚರ್ಚೆ ನಡೆದಿತ್ತು. ಕೆಸಿಸಿಐ, ಹುಬ್ಬಳ್ಳಿ, ಐಟಿ ಉದ್ಯಮಿಗಳು ಇನ್ನಿತರರು ಕಂಪೆನಿ ಆರಂಭಕ್ಕೆ ಮನವಿ, ಸಂಪರ್ಕದ ಯತ್ನ ನಡೆಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ “ಸ್ಟಾರ್ಟ್-ಇನ್ಫೋಸಿಸ್’ ಎಂಬ ಆನ್‌ಲೈನ್ ಅಭಿಯಾನ ಆರಂಭವಾಗಿತ್ತು. ಈ ಎಲ್ಲ ಯತ್ನಗಳಿಗೆ ಫಲ ಎನ್ನುವಂತೆ ಇನ್ಫೋಸಿಸ್ ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದಿರಿಸಿದೆ ಎಂಬ ವಿಶ್ವಾಸ ಮೂಡತೊಡಗಿದೆ.
Related Articles
Advertisement
2015ರಲ್ಲಿ ಕೇಂದ್ರ ಸರಕಾರ ವಿಶೇಷ ಆರ್ಥಿಕ ವಲಯ(ಎಸ್ ಇಝಡ್)ದಡಿ ಸಿಕ್ಕ ಅನುಮೋದನೆಯಂತೆ 2016ರ ಮಾರ್ಚ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿತ್ತು. 2018ರ ವೇಳೆಗೆ ಕಟ್ಟಡ ಪೂರ್ಣಗೊಂಡಿತ್ತು. ಅದೇ ವರ್ಷದ ಜನೆವರಿಯಲ್ಲಿ ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭದ ಬಗ್ಗೆ ಘೋಷಿಸಿತ್ತು. ಮೊದಲ ಹಂತದಲ್ಲಿ ಸುಮಾರು 1,500 ಜನ ಉದ್ಯೋಗಿಗಳಿಗೆ ಅವಕಾಶ ನೀಡುವುದಾಗಿ ತಿಳಿಸಿತ್ತು. ಆದರೆ, ಕಾರ್ಯಾರಂಭ ಆಗಿರಲಿಲ್ಲ. ಮುಂದೆ ಕೋವಿಡ್ ಆವರಿಸಿದ್ದರಿಂದ ಎರಡು ವರ್ಷ ಸಾಧ್ಯವಾಗಿರಲಿಲ್ಲ. ಇನ್ಫೋಸಿಸ್ ಮೈಸೂರು, ಮಂಗಳೂರು ಕೇಂದ್ರಗಳು ನಡೆಯುತ್ತಿದ್ದು, ಹುಬ್ಬಳ್ಳಿ ಕೇಂದ್ರ ಮಾತ್ರ ಆರಂಭವಾಗಿರಲಿಲ್ಲ.
ಟ್ವಿಟರ್ ಅಭಿಯಾನ: ಐಟಿ ಉದ್ಯಮಿಗಳು, ಸಾಮಾಜಿಕ ಚಿಂತಕರು, ಉದ್ಯಮ ಸಂಸ್ಥೆಗಳು, ಜನಪ್ರತಿನಿಧಿಗಳು ಇನ್ಫೋಸಿಸ್ ಹುಬ್ಬಳ್ಳಿ ಘಟಕ ಆರಂಭಿಸುವ ಕುರಿತು ನಿರಂತರ ಮನವಿ, ಒತ್ತಾಯ ಮಾಡುತ್ತಲೇ ಇದ್ದರು, ಸೂಕ್ತ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಕೋವಿಡ್ ನಂತರದಲ್ಲಿ ಈ ಧ್ವನಿಯೂ ಮೌನವಾಗಿತ್ತು.
ಇನ್ಫೋಸಿಸ್ ಕಂಪೆನಿ ಇದೇ ವರ್ಷದ ಜೂನ್ 20ರಂದು ಇಂದೋರ್, ಕೊಯಮತ್ತೂರ, ವಿಶಾಖಪಟ್ಟಣ, ನೋಯಿಡಾ, ಕೊಲ್ಕತ್ತಾ, ನಾಗ್ಪುರ ಸೇರಿ ಆರು ಕಡೆ ಕೇಂದ್ರ ಆರಂಭಿಸುವುದಾಗಿ ಘೋಷಿಸಿತ್ತು. ಇದನ್ನು ಗಮನಿಸಿದ ಅನೇಕರು ರಾಜ್ಯ ಸರಕಾರ ಬಿಯಾಂಡ್ ಬೆಂಗಳೂರಿಗೆ ಐಟಿ-ಬಿಟಿ ಉದ್ಯಮ ನೀತಿಯಲ್ಲಿ ಒತ್ತು ನೀಡಿದೆ. ಆದರೆ, ಹುಬ್ಬಳ್ಳಿಯಲ್ಲಿನ ತನ್ನದೇ ಕಟ್ಟಡದಲ್ಲಿ ಕಾರ್ಯಾಂಭಕ್ಕೆ ಒತ್ತು ನೀಡದೆ ಇನ್ಫೋಸಿಸ್ ಬಿಯಾಂಡ್ ಕರ್ನಾಟಕಕ್ಕೆ ಮುಂದಾಗಿದೆಎಂದು “ಸ್ಟಾರ್ಟ್-ಇನ್ಫೋಸಿಸ್ ಹುಬ್ಬಳ್ಳಿ’ ಎಂಬ ಆನ್‌ಲೈನ್ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ಸುಮಾರು ಮೂರು ಸಾವಿರ ಜನರು ಸ್ಪಂದಿಸುವ ಮೂಲಕ ಒತ್ತಾಯ ಮಾಡಿದ್ದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ, ಐಟಿ-ಬಿಟಿ ಸಚಿವರಿಗೂ ಮನವಿ ಸಲ್ಲಿಸಲಾಗಿತ್ತು. ಇನ್ಫೋಸಿಸ್ ಪ್ರಮುಖರಿಗೂ ಮನವಿ ರವಾನಿಸಲಾಗಿತ್ತು. ಹೀಗೆ ಆನ್‌ಲೈನ್ ಅಭಿಯಾನದ ಮೂಲಕ ಎದುರಾದ ಒತ್ತಾಯದ ಫಲವೋ ಅಥವಾ ಕಾರ್ಯಾರಂಭಕ್ಕೆ ಕಾಲ ಕೂಡಿ ಬಂದಿದೆ ಎಂಬ ನಿರ್ಣಯ ಕೈಗೊಂಡಿತೋ ತಿಳಿಯದು. ಆದರೆ, ಇನ್ಫೋಸಿಸ್ “ವರ್ಕ್ ಫ್ರಾಮ್ ಹೋಂ’ದಡಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಯ ಉತ್ತರ ಕರ್ನಾಟಕ ಮೂಲದ ಉದ್ಯೋಗಿಗಳಿಗೆ ಜು.15ರಂದು ಹುಬ್ಬಳ್ಳಿಯ ಕೇಂದ್ರದಲ್ಲಿ ಸಭೆಗೆ ಹಾಜರಾಗುವಂತೆ ಇ-ಮೇಲ್ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ. ಅಂತೆಯೇ ಶುಕ್ರವಾರ ಸುಮಾರು 250ಕ್ಕೂ ಹೆಚ್ಚು ಉದ್ಯೋಗಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲದ ಇನ್ಫೋಸಿಸ್ ಉದ್ಯೋಗಿಗಳು ಪ್ರಸ್ತುತ ಬೆಂಗಳೂರು, ಮೈಸೂರು, ಮಂಗಳೂರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪೆನಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭ ಮಾಡಿದರೆ ಇಲ್ಲಿಗೆ ಬರಲು ಅನೇಕರು ತುದಿಗಾಲ ಮೇಲೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಿದರೆ ಉತ್ತರದಲ್ಲಿ ಐಟಿ ಉದ್ಯಮ ನೆಗೆತ ಕಾಣಲಿದ್ದು, ಪೂರಕ ಉದ್ಯಮಗಳೂ ಬೆಳೆಯಲಿವೆ. ಜತೆಗೆ ಆರ್ಥಿಕಾಭಿವೃದ್ಧಿ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಲಿದೆ ಎಂಬುದು ಸ್ಪಷ್ಟ.
ಶೀಘ್ರ ಘೋಷಣೆ ನಿರೀಕ್ಷೆ…*ಅಮರೇಗೌಡ ಗೋನವಾರ
ಹುಬ್ಬಳ್ಳಿಯಲ್ಲಿ “ಇನ್ಫೋಸಿಸ್’ ಕಾರ್ಯಾರಂಭ ಕುರಿತು ಕಂಪೆನಿ ಅತಿ ಶೀಘ್ರವೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಹೊಂದಿದ್ದೇವೆ. ಟ್ವಿಟರ್ ಅಭಿಯಾನ ಮೂಲಕ ಕಂಪೆನಿಗೆ ಮನವಿ ಮಾಡಿದ್ದೇವು. ಸುಮಾರು 3,000ಕ್ಕೂ ಹೆಚ್ಚು ಜನರು ದನಿಗೂಡಿಸಿದ್ದರು. ಸುಮಾರು 15-16 ವರ್ಷಗಳಿಂದ ಇನ್ಫೋಸಿಸ್‌ನಲ್ಲಿರುವ ಉತ್ತರ ಕರ್ನಾಟಕ ಮೂಲದ ಅದರಲ್ಲೂ ಮಹಿಳಾ ಸಿಬ್ಬಂದಿ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭಕ್ಕೆ ಕಾತುರರಾಗಿದ್ದು, ಇಲ್ಲಿಗೆ ಬರಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಸದ್ಯದ ಮಾಹಿತಿಯಂತೆ “ಇನ್ಫೋಸಿಸ್’ ಮಾಸಾಂತ್ಯಕ್ಕೆ ಮೊದಲ ತ್ತೈಮಾಸಿಕ ವರದಿ ಪ್ರಕಟಿಸಲಿದ್ದು, ಅದೇ ವೇಳೆಗೆ ಹುಬ್ಬಳ್ಳಿ ಕೇಂದ್ರ ಕಾರ್ಯಾರಂಭದ ಬಗ್ಗೆಯೂ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.
ಸಂತೋಷ ನರಗುಂದ, ಪ್ರಮುಖರು,
ಸ್ಟಾರ್ಟ್ ಇನ್ಫೋಸಿಸ್-ಹುಬ್ಬಳ್ಳಿ ಅಭಿಯಾನ